More

    ಕಾಲುವೆ ದುರಸ್ತಿಗೆ ಮೀನಮೇಷ

    ನೀರಾವರಿ ಇಲಾಖೆ ಬೇಜವಾಬ್ದಾರಿತನ

    ಯಳಂದೂರು: ತಾಲೂಕಿನ ಗಣಿಗನೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲೇ ಕಾಲುವೆ ತಡೆಗೋಡೆ ಕುಸಿದು 4 ತಿಂಗಳು ಕಳೆದರೂ ಮತ್ತೆ ದುರಸ್ತಿಪಡಿಸಿಲ್ಲ. ಜತೆಗೆ, ಸಂಬಂಧಪಟ್ಟ ಜೆಇ ಹಾಗೂ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ವಹಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

    ಗಣಿಗನೂರು ಗ್ರಾಮದ ಮುಖ್ಯರಸ್ತೆ ಬಂದಿಯಲ್ಲಿ ಕಾಲುವೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಕೊಳ್ಳೇಗಾಲ ವಿಭಾಗದ ಕಾವೇರಿ ನೀರಾವರಿ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ರೈತರ ಜಮೀನಿಗೆ ನೀರು ಹೋಗಲು ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಿರುವ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಕಳೆದ ಜೂನ್ ತಿಂಗಳಿಂದ ಪ್ರಾರಂಭಿಸಿ ತರಾತುರಿಯಲ್ಲಿ ನಡೆಸಲಾಯಿತು. ಗುಣಮಟ್ಟಕ್ಕೆ ಆದ್ಯತೆ ನೀಡದೆ, ಮಳೆಗಾಲದಲ್ಲಿ ಕಾಮಗಾರಿ ನಡೆಸಲಾಯಿತು. ಇದರಿಂದಾಗಿ ತಿಂಗಳು ಕಳೆಯುವಷ್ಟರಲ್ಲಿ ತಡೆಗೋಡೆ ಕುಸಿದು ಬಿತ್ತು. ಇದರಿಂದ ನಿರಂತರವಾಗಿ ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ಜಲಾವೃತಗೊಂಡು ನಷ್ಟ ಉಂಟಾಗಿದೆ.

    ರೈತರಿಗೆ ಕಾಲುವೆ ನೀರು ಹರಿಸಲು ನಿರ್ಮಾಣ ಮಾಡಲಾಗಿದ್ದ ಕಾಲುವೆಯ ಒಂದು ಬದಿಯ ಗೋಡೆ ಸಂಪೂರ್ಣ ಒರಗಿದೆ. ಗುಣಮಟ್ಟದ ಕಬ್ಬಿಣ ಬಳಸದೆ ಇರುವುದು, ಕಾಲುವೆ ತಳಭಾಗಕ್ಕೆ ಸರಿಯಾಗಿ ಕಾಂಕ್ರಿಟ್ ಹಾಕದಿರುವುದು, ಬದುಗಳಿಗೆ ಅಲ್ಲೇ ತೋಡಲಾಗಿದ್ದ ಮಣ್ಣನ್ನು ಸುರಿದಿರುವುದೇ ಇದಕ್ಕೆ ಕಾರಣ ಎಂಬುದು ಈ ಭಾಗದ ರೈತರ ದೂರು. ಇದರಿಂದ 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನೀರು ನಿರಂತರವಾಗಿ ಜಮೀನಿಗಳಲ್ಲಿ ಜಲಾವೃತಗೊಂಡಿರುವ ಪರಿಣಾಮ ಫಸಲನ್ನು ಬೆಳೆಯಲು ಆಗುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ.

    ಗಣಿಗನೂರು ಗ್ರಾಮದಲ್ಲಿ ಕಳಪೆ ಕಾಮಗಾರಿಯಿಂದ ಮುರಿದು ಹೋದ ಕಾಲುವೆಯನ್ನು ದುರಸ್ತಿಪಡಿಸಿಲ್ಲ. ಇದರಿಂದ ಕಾಲುವೆ ನೀರು ಜಮೀನಿಗೆ ನುಗ್ಗಿ ಜಲಾವೃತಗೊಂಡಿರುವ ಪರಿಣಾಮ ಫಸಲು ಬೆಳೆಯಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಜೆಇ, ಗುತ್ತಿಗೆದಾರನ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಿ ಕಪ್ಪುಪಟ್ಟಿಗೆ ಸೇರಿಸಬೇಕಾಗಿದೆ.
    ಪ್ರಸಾದ್, ಗಣಿಗನೂರು ಗ್ರಾಮದ ನಿವಾಸಿ

    ಗಣಿಗನೂರು ಗ್ರಾಮದಲ್ಲಿ ಕಾಲುವೆ ಕಾಮಗಾರಿ ಮುರಿದು ಹೋಗಿದ್ದು, ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿ ಪ್ರಾರಂಭಿಸಿಲ್ಲ. ಕೆಲಸ ನಿರ್ವಹಿಸಿದ ಗುತ್ತಿಗೆದಾರನಿಗೆ ಮರು ದುರಸ್ತಿಪಡಿಸಲು ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲ. ಗುತ್ತಿಗೆದಾರ ಸ್ವಂತ ಹಣದಿಂದ ಮತ್ತೆ ಉತ್ತಮ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
    ರಮೇಶ್ ಎಇಇ , ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts