More

    ಕಾಲುಬಾಯಿ ಲಸಿಕೆಗೂ ಬರ ; ಹಲವು ರಾಸುಗಳನ್ನು ಕಾಡುತ್ತಿದೆ ರೋಗ ;ಹಾಲು ಇಳುವರಿ ಕುಸಿತ

    ತಿಪಟೂರು : ರಾಸುಗಳನ್ನು ಕಾಡುವ ಕಾಲುಬಾಯಿ ಜ್ವರದ ಲಸಿಕೆಯನ್ನೂ ಬೇಡುವ ಸ್ಥಿತಿ ಬಂದಿದ್ದು, ಕರೊನಾ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆಯಲ್ಲಿ ವಿಳಂಬವಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ.

    ಕುಪ್ಪಾಳು, ರಾಮೇನಹಳ್ಳಿ, ಚಿಕ್ಕವಾರಪನ ಹಳ್ಳಿ, ಕುಂದೂರು ಗೇಟ್, ರಜತಾದ್ರಿಪುರ, ಅರಚನಹಳ್ಳಿ, ವಾಸುದೇವರಹಳ್ಳಿ, ನ್ಯಾಕೇನಹಳ್ಳಿ ಮತ್ತಿತರ ಕಡೆ ಹಾಲು ಕರೆಯುವ ಹಸುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿವೆ. ರೋಗಪೀಡಿತ ಹಸುಗಳು ಹಾಲು ಕೊಡುವ ಸಾಮರ್ಥ್ಯ ಶೇ.50 ಕಡಿಮೆಯಾಗಿದ್ದು, ಹೈನುಗಾರಿಕೆಯಿಂದ ಜೀವನ ಕಟ್ಟಿಕೊಂಡಿರುವ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸೂಕ್ತ ಸಮಯದಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣ ನ್ಯಾಕೇನಹಳ್ಳಿ ರೈತ ಬೋರೇಗೌಡ ಅವರ ಹಸು, ಕಾಲುಬಾಯಿ ಜ್ವರದಿಂದ ಮೃತಪಟ್ಟಿದೆ.

    ಸೀಳುಗೊರಸು ಪಾದ ಹೊಂದಿರುವ ಕುರಿ, ಮೇಕೆ, ಹಂದಿ, ಹಸುಗಳಿಗೆ ಕಾಡುವ ವೈರಸ್ ಬಾಧೆ ತಡೆಗಟ್ಟಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಾಡಿಕೆಯಂತೆ ಪ್ರತಿವರ್ಷ ಜನವರಿ, ಫೆಬ್ರವರಿಯಲ್ಲಿ ಕಾಲುಬಾಯಿ ಜ್ವರದ ಲಸಿಕೆ ಕೊಡುವುದು ವಾಡಿಕೆ. ಕಳೆದ ವರ್ಷ ತಾಲೂಕಿನಲ್ಲಿ ಶೇ.92 ರಾಸುಗಳಿಗೆ ಲಸಿಕೆ ನೀಡುವ ಮೂಲಕ ಇಲಾಖೆ ನೀಡಿದ ಗುರಿ ಸಾಧಿಸಲಾಯಿತಾದರೂ, ಇಂಡಿಯನ್ ಇಮ್ಯುನಾಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ಸರಬರಾಜು ವಾಡಿತ್ತು ಎನ್ನಲಾದ ಕಾಲುಬಾಯಿ ಜ್ವರದ ಲಸಿಕೆ ಕಳಪೆಯಾಗಿದ್ದ ಕಾರಣ, ಒಟ್ಟಾರೆ ಲಸಿಕಾ ಅಭಿಯಾನ ವಿಫಲವಾಗಿತ್ತು. ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಇದೀಗ ಬಯೋವೆಟ್ ಕಂಪನಿಯಿಂದ ಲಸಿಕೆ ಖರೀದಿಗೆ ಮುಂದಾಗಿದೆ ಎನ್ನಲಾಗಿದ್ದು, ಇದುವರೆಗೂ ಲಸಿಕೆ ಲಭ್ಯವಾಗಿಲ್ಲ.

    ಕಾಯಿಲೆ ಲಕ್ಷಣಗಳು : ಕಾಲುಬಾಯಿ ರೋಗದ ಪ್ರಮುಖ ಲಕ್ಷಣಗಳಾದ ಕೂದಲು ಹೆಚ್ಚು ಬೆಳೆದು ದಪ್ಪ ಆಗುವುದು. ಬಾಯಲ್ಲಿ ಜೊಲ್ಲು ಸೋರುವುದು, ಬಾಯಿ ಹುಣ್ಣಿನಿಂದ ಮೇವು ತಿನ್ನಲು ಸಾಧ್ಯವಾಗದಿರುವುದು. ಪಾದಗಳಲ್ಲಿ ಗೊರಲು ಗಾಯ ಆಗಿ ಓಡಾಡಲು ಕಷ್ಟವಾಗುವುದು, ಬಿಸಿಲಿಗೆ ಮೈ ಒಡ್ಡಲಾಗದೇ, ನೆರಳನ್ನು ಆಶ್ರಯಿಸುವುದು. ವಿಪರೀತ ಜ್ವರದಿಂದ ಬಳಲುವುದು, ಇತ್ಯಾದಿ ಕಾರಣಗಳಿಂದ ದಿನದಿಂದ, ದಿನಕ್ಕೆ ಬಾಡುವುದರಿಂದ ಕ್ರಮೇಣ ಹಾಲು ಕೊಡುವ ಸಾಮರ್ಥ್ಯ ಕುಂಠಿತವಾಗುತ್ತಾ ಹೊಗುತ್ತದೆ. ಮಿಗಿಲಾಗಿ ಪ್ರಾಥಮಿಕ ಹಂತದಲ್ಲಿ ಸೂಕ್ತ ಲಸಿಕೆ ನೀಡದ ಪರಿಣಾಮ ಕಡೇ ಗಳಿಗೆಯಲ್ಲಿ ಆ್ಯಂಟಿಬಯಾಟಿಕ್ ಔಷಧ ಕೊಟ್ಟರೂ ಹಸು ಚೇತರಿಸಿಕೊಳ್ಳುವುದು ಕಷ್ಟ. ಇದೆಲ್ಲದರ ಪರಿಣಾಮ ಹಾಲಿನ ಇಳುವರಿಯಲ್ಲಿ ಶೇ.50 ಕಡಿಮೆ ಆಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಕಳೆದ ವರ್ಷ ಕಳಪೆ ಲಸಿಕೆ ಕೊಟ್ಟ ಸರ್ಕಾರ, ಈಗಲಾದರೂ ಎಚ್ಚೆತ್ತುಕೊಂಡು ಗುಣಮಟ್ಟದ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಜನವರಿ, ಫೆಬ್ರವರಿಯಲ್ಲಿ ನೀಡಬೇಕಾದ ಲಸಿಕೆ, ಇಲ್ಲಿವರೆಗೂ ನೀಡಿಲ್ಲ. ಹಳ್ಳಿಗೆ ಬರುವ ವೈದ್ಯರನ್ನು ಕೇಳಿದರೆ ಲಸಿಕೆ ಬಂದಿಲ್ಲ ಎನ್ನುತ್ತಾರೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ರೈತರು ಬೀದಿಗಿಳಿದು ಹೋರಾಟ ವಾಡುವುದು ಅನಿವಾರ್ಯವಾಗುತ್ತದೆ.
    ಎನ್.ಎಂ.ಸುರೇಶ್, ತಾಪಂ ಸದಸ್ಯ ತಿಪಟೂರು

    ಕರೊನಾ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಬರಬೇಕಿದ್ದ ಲಸಿಕೆ ಇನ್ನೂ ಬಂದಿಲ್ಲ. ಈ ತಿಂಗಳಾಂತ್ಯದಲ್ಲಿ ಬರುವ ನಿರೀಕ್ಷೆ ಇದೆ. ಅಗತ್ಯವಿರುವ ವಾಹನಗಳು, 40 ಲಸಿಕೆ ನೀಡುವ ಸಿಬ್ಬಂದಿ ಸಮೇತ ಸಿದ್ಧರಾಗಿದ್ದೇವೆ. ತಾಲೂಕಿನಲ್ಲಿ ರೋಗ ಉಲ್ಬಣವಾಗಿದ್ದ ಕಡೆ ತುರ್ತು ಕ್ರಮವಾಗಿ 3 ಸಾವಿರ ಡೋಸ್ ಲಸಿಕೆ ನೀಡಲಾಗಿದೆ.
    ಡಾ.ಕೆ.ಜಿ.ನಂದೀಶ್, ಉಪ ನಿರ್ದೇಶಕ, ಪಶುಸಂಗೋಪನ ಇಲಾಖೆ, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts