More

    ಕಾರ್ವಿುಕ ದಿನಾಚರಣೆಗೆ ಕರೊನಾ ಕರಿನೆರಳು

    ಹಾವೇರಿ: ಇಂದು ವಿಶ್ವಕಾರ್ವಿುಕರ ದಿನಾಚರಣೆ. ಜಗತ್ತಿನಾದ್ಯಂತ ದುಡಿಯುವ ಕೈಗಳ ವಿರಾಟ ದರ್ಶನದ ದಿನ. ಆದರೆ, ಕರೊನಾ ವೈರಸ್​ನ ಪರಿಣಾಮ ಇದೇ ಮೊದಲ ಸಲ ದುಡಿಯುವ ಕೈಗಳಿಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ ಈ ಬಾರಿಯ ಕಾರ್ವಿುಕ ದಿನಾಚರಣೆ ಮೌನಕಾಲದ ಆಚರಣೆಯಾಗಿ ಪರಿವರ್ತನೆಯಾಗಿದೆ.

    ದೇಶದಾದ್ಯಂತ ಕಾರ್ವಿುಕ ವರ್ಗ ಈಗ ಕರೊನಾ ಹೊಡೆತಕ್ಕೆ ಸಿಲುಕಿದೆ. ಪಟ್ಟಣ, ನಗರ, ಮಹಾನಗರ, ರಾಜಧಾನಿಗಳು ರಾತ್ರೋರಾತ್ರಿ ದುಡಿಯುವರ ಕೈಗಳನ್ನು ಕಟ್ಟಿಹಾಕಿವೆ. ಅದು ಕಾರ್ವಿುಕರ ದಿನದ ಆಚರಣೆಯ ಮೇಲೆಯೂ ಕರಿನೆರಳು ಬೀರಿದೆ.

    ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿ 2001ರಲ್ಲಿ ನಿರ್ವಿುಸಿರುವ ಕಾರ್ವಿುಕರ ಸ್ಮಾರಕದಲ್ಲಿ ಪ್ರತಿವರ್ಷವೂ ಕಾರ್ವಿುಕ ದಿನದಂದು ಸಂಭ್ರಮ ಮನೆಮಾಡುತ್ತಿತ್ತು. ಕಾರ್ವಿುಕರು, ಕಾರ್ವಿುಕರ ಸಂಘಟನೆಗಳು ಸೇರಿ ಕಾರ್ವಿುಕರ ದಿನ ಆಚರಿಸಿ ಸಾಧನೆಗೈದ ಕಾರ್ವಿುಕರಿಗೆ ನಮನ ಸಲ್ಲಿಸುವ ಜೊತೆಗೆ ಸನ್ಮಾನಿಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾರ್ವಿುಕ ದಿನಾಚರಣೆ ಯಾವುದೇ ಸಂಭ್ರಮವಿಲ್ಲದೇ ಸೊರಗಿದೆ.

    ಪ್ರತಿವರ್ಷ ಕಾರ್ವಿುಕ ದಿನದಂದು ಗಾಳಿಯಲ್ಲಿ ತೂರುವ ಜೇಂಡಾಗಳು, ಒಕ್ಕೊರಲಿನಿಂದ ಕೈ ಎತ್ತಿ ಘೊಷಣೆ ಕೂಗುವ ಸಾಲು ಸಾಲು ಕಾರ್ವಿುಕರ ಚಿತ್ರಗಳು ಕಾಣಸಿಗುತ್ತಿದ್ದವು. ನಸುಕಿನಲ್ಲಿ ಮನೆಯ ಬಾಗಿಲಿಗೆ ಬಂದು ಬೀಳುವ ದಿನಪತ್ರಿಕೆ, ಸೈಕಲ್ ಮೇಲೆ ಓಣಿ ಓಣಿ ಓಡಾಡಿ ಹೂವ ಮಾರುವ ಹುಡುಗ, ತಲೆ ಮೇಲೆ ಬುಟ್ಟಿ ಇಟ್ಟುಕೊಂಡು ಕಾಯಿಪಲ್ಯ ಮಾರುವ ಸಾಲು ಸಂತೆಯ ತಾಯಿ ಇವರು ನಿತ್ಯ ಕಾಣುವ ದುಡಿಯುವ ಜನರು. ಕಸ ಗುಡಿಸುವವ, ಹೊಲ ಗದ್ದೆಗಳಲ್ಲಿ ಊಳುವವ, ಹಾಲು ಮಾರುವ, ಗಾರೆ, ಗುಜರಿ, ಗೌಂಡಿ ಕೂಲಿ ಕಾರ್ವಿುಕರು ನೆನಪಾಗುವುದು ವಿಶ್ವ ಕಾರ್ವಿುಕ ದಿನಾಚರಣೆಯಂದು.

    ಈ ಕಾರ್ವಿುಕರಿಗೆ ಗೌರವ ಸಲ್ಲಿಸಲೆಂದು ಹಾವೇರಿಯ ಹೆಸ್ಕಾಂ ನೌಕರರ ಸಂಘ ಕಾರ್ವಿುಕ ಸ್ಮಾರಕವನ್ನು ನಿರ್ವಿುಸಿತ್ತು. ಈ ಸ್ಮಾರಕ ರಾಜ್ಯದಲ್ಲಿಯೇ ನಿರ್ವಿುತವಾದ ಪ್ರಪ್ರಥಮ ಸ್ಮಾರಕವೆಂಬ ಹೆಗ್ಗಳಿಕೆ ಪಡೆದಿದೆ.

    ಕಾರ್ವಿುಕ ಸ್ಮಾರಕದ ವಿಶೇಷ: ಕೈಮುಷ್ಠಿಯಲ್ಲಿ ಬಿಗಿಹಿಡಿದ ಪಾನಾ, ಪಕ್ಕಡ ಕಪ್ಪು ಶಿಲ್ಪ, ಕಾರ್ವಿುಕ ವರ್ಗದ ಶಕ್ತಿ ರೂಪಕವಾಗಿದೆ. ದುಡಿವ ಕೈಗಳಿಗೆ ಮುಗಿವ ಕೈಗಳು ಮೇಲು ಎಂಬ ಸಂದೇಶ ಸ್ಮಾರಕದ ಮೇಲಿದೆ. ಧಾವಂತಗಳ ನಡುವೆ ತಮ್ಮ ಜೀವವನ್ನು ಗೊತ್ತಿದ್ದೊ ಗೊತ್ತಿಲ್ಲದೇ ಬಲಿದಾನ ಮಾಡಿದ ನೂರಾರು ದುಡಿಯುವ ಕೈಗಳಿಗೆ ನಮನ ಸಲ್ಲಿಸುವ ಒಂದು ಅವಕಾಶ ಈ ವಿಶ್ವ ಕಾರ್ವಿುಕ ದಿನಾಚರಣೆಯಾಗಿದೆ. ಶ್ರಮಕ್ಕೆ ಮತ್ತು ಬೆವರಿಗೆ ಎಲ್ಲರೂ ತಲೆ ಬಾಗಲೇಬೇಕು. ಛಿದ್ರವಾದ ಕಾರ್ವಿುಕ ಚಳವಳಿಯನ್ನು ಮತ್ತೆ ಕಟ್ಟುವ ಸಂಕಲ್ಪ ವಿಶ್ವ ಕಾರ್ವಿುಕ ದಿನಾಚರಣೆಯಂದು ಆಗಬೇಕಿದೆ.

    ಪ್ರತಿವರ್ಷ ಕಾರ್ವಿುಕರನ್ನು ಸ್ಮರಿಸಲು ಮೇ 1ರಂದು ಹೆಸ್ಕಾಂ ಕಚೇರಿ ಆವರಣದಲ್ಲಿ ವಿಶೇಷವಾಗಿ ಕಾರ್ವಿುಕ ದಿನಾಚರಣೆ ಆಚರಿಸಲಾಗುತ್ತಿತ್ತು. ಈ ಬಾರಿ ಕರೊನಾ ಮಹಾಮಾರಿಯ ಅವಕೃಪೆಯಿಂದ ಕಾರ್ವಿುಕ ದಿನಾಚರಣೆ ಸಂಭ್ರಮ ಕಳೆದುಕೊಂಡಿದೆ. ಜೊತೆಗೆ ದುಡಿಯುವ ಕೈಗಳಿಗೆ ತಿಂಗಳುಗಟ್ಟಲೇ ಕೆಲಸವಿಲ್ಲದೇ ನಿಜಕ್ಕೂ ಕಾರ್ವಿುಕ ದಿನಾಚರಣೆ ಮೌನಕ್ಕೆ ಸರಿದಂತಾಗಿದೆ.

    | ಸತೀಶ ಕುಲಕರ್ಣಿ, ಹಿರಿಯ ಸಾಹಿತಿ, ಹೆಸ್ಕಾಂ ನಿವೃತ್ತ ನೌಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts