More

    ಕಾರ್ಯಾಗಾರ ಆಯೋಜನೆಗೆ ಎಡಿಸಿ ಸೂಚನೆ

    ಹಾವೇರಿ: ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್​ಜೆಂಡರ್) ಸಮುದಾಯದ ಅರಿವು ಹಾಗೂ ಈ ವರ್ಗದ ಕಲ್ಯಾಣಕ್ಕಾಗಿ ಇಲಾಖಾವಾರು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಮಾಹಿತಿ ನೀಡಲು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಿಶೇಷ ಕಾರ್ಯಾಗಾರವನ್ನು ವಾರದಲ್ಲಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಟ್ರಾನ್ಸ್​ಜೆಂಡರ್ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧಿಕಾರೇತರ ಸಮುದಾಯದ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಲು ತಕ್ಷಣ ಕ್ರಮವಹಿಸಬೇಕು. ಈ ವರ್ಗದ ತಾಲೂಕು ಸಮಿತಿಯ ಸದಸ್ಯರಿಗೂ ಹಂತಹಂತವಾಗಿ ಗುರುತಿನ ಚೀಟಿ ನೀಡಬೇಕು ಎಂದರು.

    ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳು ನೇಮಕ ಮಾಡಿಕೊಳ್ಳುವಾಗ ಟ್ರಾನ್ಸ್​ಜೆಂಡರ್ ವರ್ಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಸಭೆಯಲ್ಲಿ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ, ವಿದ್ಯಾರ್ಥಿ ನಿಲಯ ಸೇರಿ ವಿವಿಧ ಇಲಾಖೆಗಳಲ್ಲಿ ಬಾಹ್ಯ ಸಂಪನ್ಮೂಲ ಸಂಸ್ಥೆಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅರ್ಹತೆಯ ಆಧಾರದ ಮೇಲೆ ಟ್ರಾನ್ಸ್​ಜೆಂಡರ್ ವರ್ಗದವರಿಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು.

    ನಿಯಮಿತವಾಗಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಸಮನ್ವಯ ಸಮಿತಿ ಸಭೆಯನ್ನು ಕರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಯಿತು. ಮುಂದಿನ ಸಭೆಯೊಳಗಾಗಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಬೇಕು. ಕಾರ್ಯಾಗಾರದ ಸ್ವರೂಪ ಕುರಿತು ಸಮುದಾಯದ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆ ಕರೆದು ರ್ಚಚಿಸಲು ತಿಳಿಸಲಾಯಿತು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಜಿಪಂ ಸಹ ಕಾರ್ಯದರ್ಶಿ ಜಾಫರ ಷರೀಫ್, ಟ್ರಾನ್ಸ್​ಜೆಂಡರ್ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಪ್ರತಿನಿಧಿ ಅಕ್ಷತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ, ವಿವಿಧ ಇಲಾಖೆಗಳ ಸೌಲಭ್ಯ ಒದಗಿಸುವ ಕುರಿತು ಪ್ರತ್ಯೇಕ ಕ್ರಿಯಾಯೋಜನೆ ಸಲ್ಲಿಸಬೇಕು. ಸ್ವಯಂ ಉದ್ಯೋಗ ಸೌಲಭ್ಯಗಳು, ವಿದ್ಯಾರ್ಥಿ ವೇತನ, ಆರೋಗ್ಯಸೇವೆ, ಸಾಮಾಜಿಕ ಭದ್ರತೆ, ಪಿಂಚಣಿ ಸೌಕರ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಕುರಿತು ಕ್ರಮವಹಿಸಲು ಹಾಗೂ ಈ ವರ್ಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.
    | ಡಾ. ಎನ್. ತಿಪ್ಪೇಸ್ವಾಮಿ, ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts