More

    ಕಾರ್ಮಿಕರ ಹಿತಕಾಯಲು ಹೊಸ ಯೋಜನೆ ಜಾರಿ: ಹರತಾಳು ಹಾಲಪ್ಪ

    ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಮಿಕರು ಸೂಕ್ತ ಮಾಹಿತಿ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ನಗರಸಭೆ ರಂಗಮಂದಿರದಲ್ಲಿ ಭಾನುವಾರ ಜನಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮತ್ತು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸುಮಾರು 8 ಸಾವಿರ ಕೋಟಿ ರೂಪಾಯಿ ನಿಧಿ ಇದೆ. ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರಾದ ಮೇಲೆ ಒಂದಷ್ಟು ಹೊಸ ಯೋಜನೆ ಜಾರಿಗೆ ತರುವ ಮೂಲಕ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದರು.
    ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕಟ್ಟಡ ಕಾರ್ಮಿಕರ ಹಿತಕಾಯುವ ನಿಟ್ಟಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪರಿಣಾಮಕಾರಿ ಹೆಜ್ಜೆ ಇರಿಸಿದ್ದರು. ಇದೀಗ ನರೇಂದ್ರ ಮೋದಿ ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಕಾರ್ಮಿಕ ಸಚಿವರಿಗೆ ಕಾರ್ಮಿಕರ ಕಷ್ಟ ಗೊತ್ತಿರುವುದರಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮೊಬೈಲ್ ಹೆಲ್ತ್ ಯೂನಿಟ್ ಸ್ಥಾಪಿಸಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.
    ಮುಂದಿನ ದಿನಗಳಲ್ಲಿ ಚಾಲಕರು ಮತ್ತು ನಿರ್ವಾಹಕರ ಹಿತರಕ್ಷಣೆಗಾಗಿ ಮಂಡಳಿಯನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಚಾಲಕರು ಮತ್ತು ನಿರ್ವಾಹಕರು ಅಪಘಾತದಲ್ಲಿ ಮೃತಪಟ್ಟರೆ ಅಂತಹವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಕೊಡುವ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.
    ಸಂಘದ ತಾಲೂಕು ಅಧ್ಯಕ್ಷ ರಮೇಶ್ ಬಂದಗದ್ದೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪ್ರಮುಖರಾದ ಟಿ.ಡಿ.ಮೇಘರಾಜ್, ಶಿಲ್ಪಾ, ಡಾ.ಕೌಶಿಕ್, ಡಾ. ಗುರುರಾಜ್, ರೀಟಾ ಚೌಧರಿ, ರೂಪಾ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts