More

    ಕಾರ್ಖಾನೆಗಳಲ್ಲಿ ಸುರಕ್ಷತಾ ಸಾಧನಗಳದ್ದೇ ಸಮಸ್ಯೆ!, ಇದ್ದರೂ ಕೊಡದ ಅಧಿಕಾರಿಗಳು, ಕೊಟ್ಟರೂ ಬಳಸದ ಕಾರ್ಮಿಕರು

    ಲಕ್ಷ್ಮೀಕಾಂತ್ ತ್ಯಾಮಗೊಂಡ್ಲು
    ಯಾವುದಾದರು ಪ್ರದೇಶದಲ್ಲಿ ಕಾರ್ಖಾನೆಗಳು ಆರಂಭಗೊಂಡರೆ ಸ್ಥಳೀಯರ ಜತೆಗೆ ಸುತ್ತಮುತ್ತಲ ಪ್ರದೇಶದ ಜನರಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಂತೆ ಆಗುತ್ತದೆ. ಅದರಂತೆ ತ್ಯಾಮಗೊಂಡ್ಲು ಮತ್ತು ಸೋಂಪುರ ಕೈಗಾರಿಕಾ ವಲಯದಲ್ಲಿ ನೂರಾರು ಕಾರ್ಖಾನೆಗಳು ಕಾರ್ಯಾರಂಭಿಸಿವೆ. ಸಹಸ್ರಾರು ಜನ ಉದ್ಯೋಗವನ್ನೂ ಪಡೆದುಕೊಂಡಿದ್ದಾರೆ. ಆದರೆ, ಕೆಲಸ ಮಾಡುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಲರಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

    ತ್ಯಾಮಗೊಂಡ್ಲು ಕೈಗಾರಿಕಾ ಪ್ರದೇಶದಲ್ಲಿರುವ ಬಿಲ್ಡ್ ಮೇಟ್ ೈಬರ್ಸ್ ಕಂಪನಿಯಲ್ಲಿ ದಾಸೇನಹಳ್ಳಿಯ ಚಂದ್ರಶೇಖರ್ (38) ಎಂಬ ಕಾರ್ಮಿಕ ರಾತ್ರಿ ಪಾಳಿಯಲ್ಲಿ ಯಂತ್ರಕ್ಕೆ ಸಿಲುಕಿದ್ದೇ ಇದಕ್ಕೆ ನಿದರ್ಶನ. ಮನೆಯ ಆಧಾರಸ್ತಂಭವಾಗಿದ್ದ ಚಂದ್ರಶೇಖರ್ ಕುಟುಂಬದವರಿಗೆ ಕಂಪನಿ ವತಿಯಿಂದ ಆರ್ಥಿಕ ನೆರವು ಸಿಗುತ್ತದೆಯಾದರೂ, ಚಂದ್ರಶೇಖರ್ ಅವರ ಅನುಪಸ್ಥಿತಿ ಕುಟುಂಬಸ್ಥರನ್ನು ಕಾಡದೇ ಇರದು.

    35ಕ್ಕೂ ಹೆಚ್ಚು ಅಪಾಯಕಾರಿ: ತ್ಯಾಮಗೊಂಡ್ಲು ಮತ್ತು ಸೋಂಪುರ ಕೈಗಾರಿಕಾ ವಲಯದಲ್ಲಿರುವ ಸೌಲಭ್ಯವನ್ನು ಮನಗಂಡು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕಾರ್ಖಾನೆಗಳು ಇಲ್ಲಿಗೆ ಸ್ಥಳಾಂತರಗೊಳ್ಳುತ್ತಿವೆ. ಹೀಗೆ ಸ್ಥಳಾಂತರಗೊಂಡ ಕೆಲ ಕಾರ್ಖಾನೆಗಳು ಸೇರಿ 35ರಿಂದ 40ಕ್ಕೂ ಹೆಚ್ಚು ಕಾರ್ಖಾನೆಗಳು ಅತಿ ಅಪಾಯಕಾರಿ ಎಂದು ವರ್ಗೀಕರಿಸಲ್ಪಟ್ಟಿವೆ.

    ವರ್ಗೀಕರಿಸಲ್ಪಟ್ಟಿರುವ ಕಾರ್ಖಾನೆಗಳ ಕಾರ್ಮಿಕರ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಸುರಕ್ಷತಾ ಸಾಧನಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಆದರೂ ಈ ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ಅಸುರಕ್ಷತೆ ಶೇ.17 ಅವಘಡಗಳಿಗೆ ಕಾರಣವಾದರೆ, ಸುರಕ್ಷತಾ ಸಾಧನಗಳನ್ನು ಬಳಸದಿರುವುದು ಶೇ.80 ಅವಘಡಗಳಿಗೆ ಕಾರಣ ಎನ್ನಲಾಗುತ್ತಿದೆ.

    ಕಾರ್ಮಿಕರಿಗೆ ತರಬೇತಿಯ ಕೊರತೆ: ಕಾರ್ಖಾನೆಗಳಲ್ಲಿ ಪಾಲಿಸಬೇಕಾದ ಸುರಕ್ಷತಾ ವಿಧಾನಗಳ ಬಗ್ಗೆ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿಲ್ಲ. ಸುರಕ್ಷತಾ ಸಾಧನಗಳು ಲಭ್ಯವಿದ್ದರೂ ಅಧಿಕಾರಿಗಳು ಕೊಡುವುದಿಲ್ಲ. ಕೊಟ್ಟರೂ ಅತಿಯಾದ ಆತ್ಮವಿಶ್ವಾಸ ಹೊಂದಿರುವ ಕಾರ್ಮಿಕರು ಸುರಕ್ಷತಾ ಸಾಧನಗಳನ್ನು ಬಳಸುವುದಿಲ್ಲ. ಸುರಕ್ಷತಾ ವಿಧಾನಗಳ ಪಾಲನೆ ಮತ್ತು ಸುರಕ್ಷತಾ ಸಾಧನಗಳ ಬಳಕೆ ಕಡ್ಡಾಯಗೊಳಿಸಿದರೆ, ಕಾರ್ಖಾನೆಗೆ ಆಗುವ ಆರ್ಥಿಕ ನಷ್ಟ, ಕುಟುಂಬದವರಿಗೆ ಆಗುವ ಭಾವನಾತ್ಮಕ ನಷ್ಟ ತಡೆಗಟ್ಟಲು ಅನುಕೂಲವಾಗುತ್ತದೆ.

    ಕಾರ್ಖಾನೆಗಳಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಮಾಲೀಕರು, ಕಾರ್ಮಿಕರಾದಿಯಾಗಿ ಎಲ್ಲರೂ ಕೈಜೋಡಿಸಬೇಕು. ಕಾರ್ಮಿಕರಿಗೆ ಸುರಕ್ಷತಾ ವಿಧಾನ ಪಾಲನೆ ಹಾಗೂ ಸುರಕ್ಷತಾ ಸಾಧನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದರಿಂದ, ಅವಘಡ ರಹಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
    ಕಂಠಪ್ಪ, ಕೆಎಐಡಿಬಿ ಪ್ರದೇಶದ ಕೈಗಾರಿಕಾ ಸಂಘದ ಅಧ್ಯಕ್ಷ

    ಶೀಘ್ರವಾಗಿ ಈ ಭಾಗದಲ್ಲಿ ಇಎಸ್‌ಐ ಆಸ್ಪತ್ರೆ ಆಗಬೇಕು. ಅವಘಡಗಳು ಸಂಭವಿಸಿದ ತಕ್ಷಣವೇ ಚಿಕಿತ್ಸೆ ಸಿಕ್ಕರೆ ಕಾರ್ಮಿಕರ ಪ್ರಾಣರಕ್ಷಣೆಗೆ ಅನುಕೂಲವಾಗುತ್ತದೆ. ಅವಘಡ ನಡೆದ ಮೇಲೆ ಪರಿಹಾರ ನೀಡುವುದಕ್ಕಿಂತ, ಅದು ಆಗದ ರೀತಿ ಕ್ರಮ ಕೈಗೊಳ್ಳುವುದೂ ಮುಖ್ಯ.
    ಜಗದೀಶ್ ಚೌಧರಿ, ಸೋಂಪುರ ಹೋಬಳಿ ಮುಖಂಡ

    ಕಾರ್ಖಾನೆಗಳಲ್ಲಿ ನಿಯಮಿತವಾಗಿ ತಪಾಸಣೆ ಮಾಡುತ್ತೇವೆ. ಮೇಲ್ನೋಟಕ್ಕೆ ಕಂಡು ಬರುವ ಲೋಪದೋಷಗಳನ್ನು ಪಟ್ಟಿ ಮಾಡಿ, ಅವನ್ನು ಸರಿಪಡಿಸಲು ಸೂಚಿಸಿ ನೋಟಿಸ್ ನೀಡಲಾಗುತ್ತದೆ. ಕಾರ್ಮಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ತಂದಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸಲಹೆ ಪಡೆಯಲು ಕಾರ್ಮಿಕರಿಗೆ ಅವಕಾಶವಿದೆ.
    ಇ.ತಿಮ್ಮರಾಜು, ನೆಲಮಂಗಲ ತಾಲೂಕು ಕಾರ್ಖಾನೆಗಳ ಉಪನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts