More

    ಕಾರವಾರ ಜಿಲ್ಲೆಯಲ್ಲಿ 47 ಕೋವಿಡ್ ಪ್ರಕರಣ ಪತ್ತೆ

    ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 47 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸಾವನ್ನಪ್ಪಿದ್ದು, 85 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

    ಕಾರವಾರದಲ್ಲಿ 8, ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ತಲಾ 5, ಭಟ್ಕಳದಲ್ಲಿ 4, ಶಿರಸಿಯಲ್ಲಿ 9, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 15, ಸಿದ್ದಾಪುರದಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿವೆ.

    ಕಾರವಾರದಲ್ಲಿ 7, ಕುಮಟಾ-19, ಹೊನ್ನಾವರ-3, ಶಿರಸಿ-22, ಸಿದ್ದಾಪುರ- 7, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 25, ಜೊಯಿಡಾದಲ್ಲಿ ಇಬ್ಬರು ಬಿಡುಗಡೆಯಾಗಿದ್ದಾರೆ. ಮಂಗಳವಾರದ ಒಟ್ಟಾರೆ ಸೋಂಕಿತರಲ್ಲಿ 6 ವೃದ್ಧರು, 5 ಮಕ್ಕಳಿದ್ದಾರೆ. 25 ಜನರಿಗೆ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಕರೊನಾ ಹರಡಿದೆ. ಇನ್ನು 10 ಜನರಿಗೆ ಜ್ವರದ ಲಕ್ಷಣ (ಐಎಲ್​ಐ) ಕಾಣಿಸಿಕೊಂಡಿದೆ. ಹೊರ ಊರಿನಿಂದ ಬಂದ ಮೂವರಿಗೆ ಕೋವಿಡ್ ತಗುಲಿದೆ. ಐವರ ಸೋಂಕಿನ ಮೂಲ ಪತ್ತೆಯಾಗಿಲ್ಲ.

    ಕಾರವಾರದ ಕೋಣೆವಾಡ, ಹೈಚರ್ಚ್ ರಸ್ತೆ, ಕೆಎಚ್​ಬಿ ಸೇರಿ ಐವರಿಗೆ ಸೋಂಕು ಪತ್ತೆಯಾಗಿದೆ. ಶಿರಸಿಯ ಮೇಲಿನ ಓಣಿಕೇರಿಯಲ್ಲಿ 3, ಕಸ್ತೂರಬಾನಗರದಲ್ಲಿ ಇಂದಿರಾನಗರ, ಕೆಎಚ್​ಬಿ, ಲಂಡಕನಹಳ್ಳಿಯಲ್ಲಿ ತಲಾ ಒಬ್ಬರಿಗೆ ಕರೊನಾ ತಗುಲಿದೆ.

    ದಾಂಡೇಲಿಯಲ್ಲಿ 6 ಜನರಿಗೆ ಸೋಂಕು ತಗುಲಿದ್ದು, ಗುಣ ಹೊಂದಿದ 66 ಕ್ಕೂ ಅಧಿಕ ಜನರನ್ನು ಬಿಡುಗಡೆ ಮಾಡಲಾಗಿದೆ. ಹೆಲ್ತ್ ಬುಲೆಟಿನ್​ನಲ್ಲಿ ಕೆಲವರ ಬಿಡುಗಡೆ ಮಾತ್ರ ದಾಖಲಾಗಿದೆ.

    ಉಸಿರಾಟದ ತೊಂದರೆಯಿಂದ ಸಾವು: ಕರೊನಾದಿಂದ ಕ್ರಿಮ್ಸ್​ಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಕಾರವಾರ ಕೆಎಚ್​ಬಿಯ 65 ವರ್ಷದ ಮಹಿಳೆ ಜು.26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಟೆಸ್ಟ್​ನಲ್ಲಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಎರಡನೇ ಬಾರಿ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಉಸಿರಾಟದ ತೊಂದರೆಯಿಂದ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅವರ ಸಂಪರ್ಕಕ್ಕೆ ಬಂದ ವೈದ್ಯಕೀಯ ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ಮಾಡಿಸಲಾಗಿದೆ. ಇನ್ನು ಐಸಿಯುದಲ್ಲಿ ಇದ್ದ ಇತರ ರೋಗಿಗಳ ಕರೊನಾ ಟೆಸ್ಟ್ ಮಾಡಿಸಲಾಗಿದೆ. ಕೆಲವರ ವರದಿ ನೆಗೆಟಿವ್ ಬಂದಿದೆ ಎಂದು ಕ್ರಿಮ್್ಸ ಮೂಲಗಳು ತಿಳಿಸಿವೆ. ಮೃತ ಮಹಿಳೆಯ ಅಂತ್ಯಕ್ರಿಯೆಯನ್ನು ಆಕೆಯ ಮಕ್ಕಳೇ ಪಿಪಿಇ ಕಿಟ್ ಧರಿಸಿ ನಗರದ ಸ್ಮಶಾನವೊಂದರಲ್ಲಿ ನಡೆಸಿದ್ದಾರೆ. ಹೊನ್ನಾವರದ 78 ವರ್ಷದ ವೃದ್ಧ ಕರೊನಾ ಹಾಗೂ ಇತರ ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದು, ಜುಲೈ 25 ರಂದು ಕಾರವಾರ ಕ್ರಿಮ್ಸ್​ಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ.

    ಅಂತ್ಯ ಸಂಸ್ಕಾರಕ್ಕೆ ತಹಸೀಲ್ದಾರ್ ಅನುಮತಿ ಕಡ್ಡಾಯಗೊಳಿಸಿ
    ದಾಂಡೇಲಿ:
    ಅಂತ್ಯಸಂಸ್ಕಾರ ಪೂರ್ವದಲ್ಲಿ ತಾಲೂಕು ಆಡಳಿತದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯಗೊಳಿಸಿ ಎಂದು ನಗರಸಭೆ ಮಾಜಿ ಸದಸ್ಯ ಕೀರ್ತಿ ಗಾಂವಕರ ಅವರು ತಹಸೀಲ್ದಾರ್ ಶೈಲೇಶ ಪರಮಾನಂದ ಅವರಲ್ಲಿ ವಿನಂತಿಸಿದ್ದಾರೆ.

    ನಗರದಲ್ಲಿ ಎರಡು ವಾರಗಳಿಂದ ಕೋವಿಡ್ ರೋಗ ತನ್ನ ಕರಾಳ ಹಸ್ತ ಚಾಚಿದೆ. ಅದೇ ರೀತಿ ನಗರದಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಂದು ಸಹಜ ಸಾವು ಎಂದು ತಿಳಿದು ಬಹುಜನರ ಪಾಲ್ಗೊಳ್ಳುವಿಕೆ ಜತೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕೆಲವು ಬಾರಿ ಅಂತ್ಯಕ್ರಿಯೆ ನಂತರ ಮೃತರಿಗೆ ಪಾಸಿಟಿವ್ ಎಂಬ ಮಾಹಿತಿಯು ಬರುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಯಾವುದೇ ರೀತಿಯಲ್ಲಿ ಸಾವು ಸಂಭವಿಸಿದರೂ ಅಂತ್ಯಕ್ರಿಯೆ ಮಾಡುವ ಮೊದಲು ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಬೇಕು. ಮೃತ ವ್ಯಕ್ತಿ ಹಾಗೂ ಕುಟುಂಬದ ಸದಸ್ಯರ ಗಂಟಲ ದ್ರವದ ಪರೀಕ್ಷೆಯನ್ನು ಮಾಡಿ ನಂತರ ಶವ ಸಂಸ್ಕಾರಕ್ಕೆ ಅನುಮತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

    ಹೋಂ ಕ್ವಾರಂಟೈನ್​ನಲ್ಲಿದ್ದ ಶಿಕ್ಷಕಿ ಸಾವು
    ಕಾರವಾರ:
    ಹೋಂ ಕ್ವಾರಂಟೈನ್​ನಲ್ಲಿದ್ದ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ವಿಜಯಾ ಗಣಪತಿ ಬೋಮಕರ್ (58) ಮೃತಪಟ್ಟವರು. ಅವರ ಶಾಲೆಯ ಇನ್ನೊಬ್ಬ ಶಿಕ್ಷಕಿಯ ಮಗನಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯಾ ಅವರಿಗೆ ಹೋಂ ಕ್ವಾರಂಟೈನ್​ಗೆ ಸೂಚಿಸಲಾಗಿತ್ತು. ಮನೆಯ ಸದಸ್ಯರಿಂದ ಬೇರೆಯೇ ಇದ್ದ ಅವರು ಎರಡು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಮವಾರ ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts