More

    ಕಾರವಾರಕ್ಕೆ ಶೀಘ್ರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ

    ವಿಜಯವಾಣಿ ಸುದ್ದಿಜಾಲ ಕಾರವಾರ:

    ಮೇ ಅಂತ್ಯದ ಒಳಗೆ ಕಾರವಾರದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಹೈಕೋರ್ಟ್​ನ ಉತ್ತರ ಕನ್ನಡ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎ. ಪಾಟೀಲ ಹೇಳಿದರು.

    ಇಲ್ಲಿನ ಹಳೆಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಕ್ಕಳಸ್ನೇಹಿ ನ್ಯಾಯಾಲಯದ ನವೀಕೃತ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದಾಗ ವಕೀಲರ ಸಂಘದಿಂದ ಎರಡು ಬೇಡಿಕೆ ಸಲ್ಲಿಸಲಾಗಿತ್ತು. ಮೊದಲ ಬೇಡಿಕೆಯಾದ ಮಕ್ಕಳ ಸ್ನೇಹಿ ನ್ಯಾಯಾಲಯದ ಕಟ್ಟಡ ಉದ್ಘಾಟನೆಯಾಗಿದೆ. ನ್ಯಾಯಾಲಯ ಶೀಘ್ರ ಕಾರ್ಯನಿರ್ವಹಣೆ ಮಾಡಲಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪ್ರಾರಂಭಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಮೂಲ ಸೌಕರ್ಯ ಒದಗಿಸಲು ಪಿಡಬ್ಲ್ಯುಡಿ ಅಧಿಕಾರಿಗಳ ಜತೆ ಇಂದು ಮಾತನಾಡಿದ್ದೇನೆ ಎಂದರು.

    ಆರೋಪಿ ಅಥವಾ ಬೇರೆಯವರಿದ್ದರೆ ಮಕ್ಕಳು ಸಾಕ್ಷ್ಯ ಹೇಳಲು ಹೆದರಬಹುದು. ಅಥವಾ ಬೇರೆಯವರು ಅವರ ಮೇಲೆ ಪ್ರಭಾವಕ್ಕೆ ಒಳಗಾಗಬಹುದು. ಇದರಿಂದ ಆರೋಪಿಗೆ ನ್ಯಾಯ ಅಥವಾ ಶಿಕ್ಷೆ ಸಿಗದೇ ಇರುವ ಸಂಭವ ಇರುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಕಾನೂನಿನಂತೆ ಮಕ್ಕಳ ಸ್ನೇಹಿ ನ್ಯಾಯಾಲಯ ರೂಪಿಸಲಾಗಿದೆ ಎಂದು ವಿವರಿಸಿದರು. ಇಲ್ಲಿ ಮಕ್ಕಳಿಂದ ಹೇಳಿಕೆ ಪಡೆಯಲು ನ್ಯಾಯಾಧೀಶರು ಹಾಗೂ ವಕೀಲರಿಗೆ ತಾಳ್ಮೆ ಇರಬೇಕು ಎಂದರು.

    ಅಪ್​ಡೇಟ್ ಆಗಿ: ಹೊಸ ತಂತ್ರಜ್ಞಾನ ಹಾಗೂ ಕಾಯ್ದೆಯನ್ನು ಅರಿತು ಅಪ್​ಡೇಟಾದರೆ ನಿಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ವಕೀಲರಿಗೆ ನ್ಯಾಯಮೂರ್ತಿಗಳು ಕಿವಿಮಾತು ಹೇಳಿದರು.

    ನ್ಯಾಯಾಧೀಶರು ಎಂದರೆ ಮಗು ಇದ್ದ ಹಾಗೆ ವಕೀಲರು ಯಾವ ವಿಷಯವನ್ನು ಫೀಡ್ ಮಾಡುತ್ತಾರೋ ಅದನ್ನೇ ತೀರ್ಪಿನಲ್ಲಿ ನೀಡುತ್ತೇವೆ. ನ್ಯಾಯಸ್ಥಾನಕ್ಕೆ ಮನವರಿಕೆ ಮಾಡುವ ಕೌಶಲ್ಯ ಹೊಂದಿದ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಸಾಧ್ಯ ಎಂದರು.

    ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ವಿಪುಲ ಎಂ.ಬಿ.ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ, ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ಶಿವ ಪ್ರಕಾಶ ದೇವರಾಜು, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎ. ಖಾಜಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಎಚ್. ನಾಯ್ಕ ಸ್ವಾಗತಿಸಿದರು.

    ಏನಿದು ಮಕ್ಕಳ ಸ್ನೇಹಿ ನ್ಯಾಯಾಲಯ? ಪೋಕ್ಸೋ ಕಾಯ್ದೆಯಡಿ ತೊಂದರೆಗೀಡಾದ ಮಕ್ಕಳಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಸಭೆ ಪಕ್ಕ ಹಳೆಯ ಸಿವಿಲ್ ನ್ಯಾಯಾಲಯದ ಕಟ್ಟಡವನ್ನು ನವೀಕರಿಸಿ ಮಕ್ಕಳ ಸ್ನೇಹಿ ನ್ಯಾಯಾಲಯ ನಿರ್ವಿುಸಲಾಗಿದೆ. ಇಲ್ಲಿ ಬೇರೆ ಯಾವುದೇ ಪ್ರಕರಣದ ವಿಚಾರಣೆ ನಡೆಯದು. ಇದಕ್ಕಾಗಿಯೇ ಒಬ್ಬ ಸೆಷನ್ಸ್ ನ್ಯಾಯಾಧೀಶರ ನೇಮಕವಾಗಲಿದೆ. ಇಲ್ಲಿ ಸಂತ್ರಸ್ತ ಮಗು ಎಲ್ಲರಿಗೂ ಅಥವಾ ಆರೋಪಿಗೆ ಅಷ್ಟೇ ಅಲ್ಲ. ನ್ಯಾಯಾಧೀಶರಿಗೂ ಕಾಣಿಸದು. ಮಗುವನ್ನು ಕೂಡ್ರಿಸಿ ಹೇಳಿಕೆ ಪಡೆಯಲು ಒಂದೆಡೆಯಿಂದ ಮಾತ್ರ ಕಾಣುವ ಗ್ಲಾಸ್ ಅಳವಡಿಸಿದ ವಿಟ್​ನೆಸ್ ಬಾಕ್ಸ್ ನಿರ್ಮಾಣ ಮಾಡಲಾಗಿದೆ. ಮಕ್ಕಳ ಹಕ್ಕಿಗೆ ಚ್ಯುತಿ ಬಾರದಂತೆ, ಯಾರಿಗೂ ಹೆದರದಂತೆ ಹೇಳಿಕೆ ಪಡೆಯಲು, ಶೀಘ್ರದಲ್ಲಿ ನ್ಯಾಯ ದೊರಕಿಸಲು ಬೇಕಾದ ವ್ಯವಸ್ಥೆ ಇಲ್ಲಿದೆ. ನ್ಯಾಯಾಲಯದ ಒಳಗೇ ಆಟದ ಸಾಮಗ್ರಿ ಇಡಲಾಗಿದೆ. ರಾಜ್ಯಕ್ಕೆ 17 ನ್ಯಾಯಾಲಯ ಮಂಜೂರಾಗಿದೆ. ಅದರಲ್ಲಿ ಪ್ರಾರಂಭವಾದ ರಾಜ್ಯದ ಮೂರನೇ ನ್ಯಾಯಾಲಯ ಕಾರವಾರದ್ದು. ಇನ್ನೆರಡು ಬೆಂಗಳೂರಿನಲ್ಲಿವೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts