More

    ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

    ಬೀದರ್: ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದರು.

    ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಅವರು, ನಾನು ಸಚಿವನಾಗಿದ್ದಾಗ ತಜ್ಞರ ಸಮಿತಿ ರಚಿಸಿ ವೈಜ್ಞಾನಿಕ ಪರಿಹಾರಕ್ಕೆ ಶಿಫಾರಸು ಮಾಡಲು ನಿರ್ದೇಶನ ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಈ ವಿಷಯ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.

    ಮಳೆ, ಗಾಳಿ ಎನ್ನದೆ ಕಾರಂಜಾ ಸಂತ್ರಸ್ತ ರೈತರು ಉಸ್ತುವಾರಿ ಸಚಿವರ ಕಚೇರಿ ಎದುರು ಹೋರಾಟ ಮಾಡುತ್ತಿದ್ದರೂ ಆಡಳಿತ ಪಕ್ಷದ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಆಲಿಸಲು ಬರದಿರುವುದು ಖಂಡನೀಯ. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಪ್ಯಾಕೇಜ್ ಮೂಲಕ ವೈಜ್ಞಾನಿಕ ಪರಿಹಾರ ಮಂಜೂರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಮಾಜಿ ಶಾಸಕ ಅಶೋಕ ಖೇಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಚಂದ್ರಾಸಿಂಗ್, ಮೀನಾಕ್ಷಿ ಸಂಗ್ರಾಮ, ಚಂದ್ರಶೇಖರ ಚನ್ನಶೆಟ್ಟಿ, ನಸೀಂ ಪಟೇಲ್, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ನಾಗಶೆಟ್ಟಿ, ಪ್ರೇಮದಾಸ, ಫರೀದ್ಸಾಬ್, ವಿಜಯಕುಮಾರ, ರಾಜಶೇಖರ, ಮಡಿವಾಳಪ್ಪ, ಅಣ್ಣೆಪ್ಪ ಇತರರಿದ್ದರು.

    ಕಾರಂಜಾ ಯೋಜನೆಗೆ ಜಮೀನು ಕೊಟ್ಟ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರು ತಲೆಮಾರು ಕಳೆದರೂ ನ್ಯಾಯಸಮ್ಮತ ಪರಿಹಾರ ಮರೀಚಿಕೆ ಆಗಿದೆ. ಎಕರೆಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ಅಹೋರಾತ್ರಿ ಧರಣಿ ಆರಂಭಿಸಿ 16 ದಿನವಾದರೂ ಸ್ಪಂದನೆ ಸಿಕ್ಕಿಲ್ಲ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು.

    | ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ

    ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts