More

    ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿ

    ಬೀದರ್: ಕಾರಂಜಾ ನೀರಾವರಿ ಯೋಜನೆಗೆ ಬೆಲೆಬಾಳುವ ಭೂಮಿ ನೀಡಿ, ವೈಜಾನಿಕ ಪರಿಹಾರಕ್ಕಾಗಿ ಐದು ದಶಕದಿಂದ ಅಲೆದಾಡುತ್ತಿರುವ ಸಂತ್ರಸ್ತ ರೈತರ ಸಮಸ್ಯೆಗೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದ ಅವರು, ಸಂತ್ರಸ್ತರ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು. ಪಕ್ಷಾತೀತವಾಗಿ ಈ ವಿಷಯಕ್ಕೆ ಆದ್ಯತೆ ನೀಡಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

    ಸಂತ್ರಸ್ತರ ಬೇಡಿಕೆ, ಸಮಸ್ಯೆ, ಸುದೀರ್ಘ ಅವಧಿಯ ಹೋರಾಟ ಮತ್ತು ಅಲೆದಾಟ ಕುರಿತು ಸದನದ ಗಮನ ಸೆಳೆದ ಡಾ.ಬೆಲ್ದಾಳೆ, ಐದು ದಶಕದ ಬೇಡಿಕೆ ಇದಾಗಿದೆ. ವೈಜಾನಿಕ ಪರಿಹಾರಕ್ಕಾಗಿ ಆಗ್ರಹಿಸುತ್ತ ಒಂದು ಪೀಳಿಗೆಯೇ ಕೊನೆಗೊಂಡಿದೆ. ಇನ್ನೆಷ್ಟು ದಿನ ರೈತರು ಸಂಘರ್ಷ ಮಾಡಬೇಕು? ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಇನ್ನಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಬಗ್ಗೆ ಉಪ ಮುಖ್ಯಮಂತ್ರಿಗಳಾದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ಸಂತ್ರಸ್ತರ ಸಂಕಷ್ಟ ನಿವಾರಿಸುವಂತೆ ಮೊರೆಯಿಟ್ಟರು.

    ೧೯೭೦-೭೧ರಲ್ಲಿ ಕಾರಂಜಾ ಜಲಾಶಯ ನಿರ್ಮಾಣ ವೇಳೆ ರೈತರ ಜಮೀನು ಭೂ ಸ್ವಾಧೀನ ನಡೆದಿದೆ. ಒಟ್ಟು ೨೪೪೬೨ ಎಕರೆ ಭೂಮಿ ಸ್ವಾಧೀನವಾಗಿದೆ. ೩೦೦೦ ರೈತರ ಹೆಚ್ಚುವರಿ ಭೂಮಿ ಸಹ ಮುಳುಗಡೆಯಾಗಿದೆ. ಇದರಿಂದ ೫೦ ಸಾವಿರಕ್ಕೂ ಹೆಚ್ಚು ಜನ ಸಮಸ್ಯೆ ಎದುರಿಸುವಂತಾಗಿದೆ. ಸಂತ್ರಸ್ತರಲ್ಲಿ ಕೇವಲ ೫೦೦ ರೈತರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನುಳಿದವರು ಕಾರಣಾಂತರದಿAದ ಕೋರ್ಟ್ ಮೇಟ್ಟಿಲೇರದಿದ್ದಕ್ಕೆ ಅವರಿಗೆ ಪರಿಹಾರ ದೊರೆತಿಲ್ಲ. ಈ ಜಲಾಶಯದಲ್ಲಿ ಬೀದರ್ ದಕ್ಷಿಣ, ಹುಮನಾಬಾದ್, ಭಾಲ್ಕಿ ಕ್ಷೇತ್ರದ ರೈತರ ಜಮೀನು ಒಳಗೊಂಡಿದೆ. ಇದರಲ್ಲಿ ೧೦ ಗ್ರಾಮ ಪೂರ್ಣ ಮುಳುಗಡೆಯಾಗಿವೆ. ಪುನರ್ವಸತಿ ಗ್ರಾಮಗಳಲ್ಲಿ ಸಹ ಪೂರ್ಣ ಪ್ರಮಾಣದ ಸೌಲಭ್ಯ ದೊರೆತಿಲ್ಲ ಎಂದು ಹೇಳಿದರು.

    ದಿ. ಧರ್ಮಸಿಂಗ್ ಅವರು ಸಿಎಂ ಇದ್ದಾಗ ಹೈ ಪವರ್ ಕಮಿಟಿ ರಚನೆಯಾಗಿ ೫೦ ಕೋಟಿ ರೂ.ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ನಿರ್ಧಾರವಾಗಿತ್ತು. ಆದರೆ ಅದು ನನೆಗುದಿಗೆ ಬಿದ್ದಿದೆ. ೨೦೧೩ರಲ್ಲಿ ಜಗದೀಶ ಶೆಟ್ಟರ್ ಸಿಎಂ ಇದ್ದಾಗ ಇದನ್ನು ವಿಶೇಷ ಪ್ರಕರಣ ಎಂದು ಆರ್ಥಿಕ ಇಲಾಖೆಗೆ ಕಳಿಸಲಾಗಿತ್ತು. ನಂತರ ಚುನಾವಣೆ ಘೋಷಣೆಯಾದ ಬಳಿಕ ಅದು ಸಹ ಹಾಗೇ ಉಳಿಯಿತು. ೨೦೧೮ರಲ್ಲಿ ಡಿ.ಕೆ.ಶಿವಕುಮಾರ್ ಅವರು ಜಲ ಸಂಪನ್ಮೂಲ ಸಚಿವರಿದ್ದಾಗ ಸಂತ್ರಸ್ತರ ಸಭೆ ಕರೆದು ಪರಿಹಾರ ನೀಡುವುದಾಗಿ ಭರವಸೆ ನೀಡಿರುವಿರಿ. ಇದೀಗ ತಾವೇ ಡಿಸಿಎಂ ಜತೆಗೆ ನೀರಾವರಿ ಸಚಿವರಾಗಿದ್ದಿರಿ. ಈ ಕುರಿತು ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ಮಾಹಿತಿ ಪಡೆದಿದ್ದೇನೆ. ಈಗ ಮತ್ತೊಮ್ಮೆ ನೀವು ಸದನದ ಗಮನ ಸೆಳೆದಿರುವಿರಿ. ಈ ಕುರಿತು ಒಂದು ದಿನಾಂಕ ನಿಗದಿ ಮಾಡಿ ಎಲ್ಲ ಶಾಸಕರು, ಉಸ್ತುವಾರಿ ಸಚಿವರ ಜತೆ ಸೇರಿ ಸಂತ್ರಸ್ತರ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಕಾರಂಜಾ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಬೆಲ್ದಾಳೆ ಪ್ರಶ್ನೆಗೆ ಬೆಂಬಲ ಸೂಚಿಸಿದರು.

    ಮಾನವೀಯ ನೆಲೆಯಲ್ಲಿ ನೋಡಿ
    ಕಾರಂಜಾ ಯೋಜನೆಯಲ್ಲಿ ಸಾವಿರಾರು ರೈತ ಕುಟುಂಬಗಳು ತಮ್ಮ ಫಲವತ್ತಾದ ಜಮೀನು ನೀಡಿದ್ದರೆ. ಆದರೆ ಸರ್ಕಾರ ಕೊಟ್ಟ ಪರಿಹಾರ ಎಕರೆಗೆ ಕೇವಲ ಮೂರರಿಂದ ನಾಲ್ಕು ಸಾವಿರ. ಸಂತ್ರಸ್ತರಲ್ಲಿ ಕೆಲವರು ಕೋರ್ಟ್ ಮೆಟ್ಟಿಲೇರಿ ಸ್ವಲ್ಪ ಹೆಚ್ಚುವರಿ ಪರಿಹಾರ ಪಡೆದಿದ್ದರೆ. ಅದರೆ ಹೆಚ್ಚಿನವರು ನ್ಯಾಯಾಲಯಕ್ಕೆ ಹೋಗಿಲ್ಲ. ರೈತರ ಬೇಡಿಕೆ ಕೊನೆಯಾಗಿಲ್ಲ. ನಿರಂತರ ಹೋರಾಟ ನಡೆದಿದೆ. ಕಳೆದ ಒಂದು ವರ್ಷದಿಂದ ರೈತರು ಅವಿರತ ಪ್ರತಿಭಟನೆ ನಡೆಸುತ್ತಿದ್ದರೆ. ಸರ್ಕಾರ ಬರುತ್ತವೆ, ಹೋಗುತ್ತವೆ. ಅದು ಯಾವ ಪಕ್ಷ ಎಂಬುದು ಮುಖ್ಯವಲ್ಲ. ಆದರೆ ಸಂತ್ರಸ್ತರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ನೋಡಬೇಕಿದೆ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts