More

    ಕಾರಂಜಾ ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ ಕೊಡಿ

    ಬೀದರ್: ಜಿಲ್ಲೆಯ ಕಾರಂಜಾ ಜಲಾಶಯ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯಿಸಿದರು.

    ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಕರ್ಾರದ ಮಲತಾಯಿ ಧೋರಣೆಗೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

    ಹಲವು ಸಂತ್ರಸ್ತರು ಮಾತನಾಡಿ, ಪರಿಹಾರ ನೀಡಿಕೆಯಲ್ಲಿ ಘೋರ ಅನ್ಯಾಯವಾಗಿದೆ. ನಾಲ್ಕು ದಶಕಗಳಾದರೂ ಯಾವ ಸರ್ಕಾರಗಳು ಸಮಸ್ಯೆಗೆ ಸ್ಪಂದಿಸಿಲ್ಲ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

    ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ಮಾತನಾಡಿ, ಎಕರೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಅರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

    ಈ ಯೋಜನೆಗಾಗಿ ಸಾವಿರಾರು ರೈತ ಕುಟುಂಬಗಳು ತಮ್ಮ ಫಲವತ್ತಾದ ಜಮೀನು ನೀಡಿದ್ದಾರೆ. ಆದರೆ ಸರ್ಕಾರ ಕೊಟ್ಟ ಪರಿಹಾರ ಎಕರೆಗೆ ಕೇವಲ ಮೂರ್ನಾಲ್ಕು ಸಾವಿರ. ಪರಿಹಾರದಲ್ಲಿ ಆದಂಥ ಅನ್ಯಾಯ ಸರಿಪಡಿಸಲು ಸತತ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

    ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್ ಮಾತನಾಡಿ, ಪರಿಹಾರ ನೀಡುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಸಂತ್ರಸ್ತರ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ ಎಂದರು.

    ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಅಶೋಕ ಖೇಣಿ, ಕನ್ನಡಾಂಬೆ ಗೆಳೆಯರ ಬಳಗ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಸಮಿತಿಯ ರಾಜಪ್ಪ ಕಮಲಪುರೆ, ಮಲ್ಲಿಕಾರ್ಜುನ ಮುತ್ತಣ್ಣ, ಸಂಜಯ ಡಾಕುಳಗಿ, ಭೀಮರಡ್ಡಿ, ರಾಜಕುಮಾರ ಚಿಲ್ಲರ್ಗೆ ಇತರರಿದ್ದರು.

    ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಬಹಳಷ್ಟು ಅನ್ಯಾಯವಾಗಿದೆ. ಹಿನ್ನೀರಿನಿಂದ ಸಹ ಹಲವು ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಸಂತ್ರಸ್ತರ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರಲಿದೆ.
    | ರಾಜಶೇಖರ ಪಾಟೀಲ್, ಶಾಸಕ

    ಯೋಜನೆಯಡಿ ಜಮೀನು ಕೊಟ್ಟ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರು ತಲೆಮಾರು ಕಳೆದರೂ ನ್ಯಾಯಸಮ್ಮತ ಪರಿಹಾರ ಮರೀಚಿಕೆ ಆಗಿದೆ. ಸರ್ಕಾರ ನಮ್ಮ ಗೋಳು ಕೇಳುತ್ತಿಲ್ಲ. ನ್ಯಾಯ ಸಿಗದಿದ್ದರೆ ಎಲ್ಲ ಚುನಾವಣೆ ಬಹಿಷ್ಕರಿಸಿ, ಹೋರಾಟ ತೀವ್ರಗೊಳಿಸಲಾಗುವುದು.
    | ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts