More

    ಕಾಮಧೇನು ಕಳ್ಳರ ಪಾಲು

    ಶಶಿಧರ ಕುಲಕರ್ಣಿ ಮುಂಡಗೋಡ

    ಗೋವು ಮಾನವನಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾದ ಕಾಮಧೇನುವಾಗಿದ್ದು, ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಆದರೆ, ಇಂತಹ ಮೂಕ ಪ್ರಾಣಿಯನ್ನೇ ಕದ್ದೊಯ್ಯುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ.

    ಹೌದು, ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಅವ್ಯಾಹತವಾಗಿ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ಗೋ ಸಾಕಣೆ ಮಾಡುವವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಕಳ್ಳರು ಕಾರುಗಳಲ್ಲಿ ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ. ಹೊಲದಲ್ಲಿ, ಕೊಟ್ಟಿಗೆಯಲ್ಲಿ ಕಟ್ಟಿದ್ದ, ರಸ್ತೆಯಲ್ಲಿ ಓಡಾಡುತ್ತಿದ್ದ ಗೋವುಗಳನ್ನು ಕದ್ದು ವಾಹನಗಳಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆ.

    ಕಳೆದ ಒಂದು ತಿಂಗಳ ಅವಧಿಯಲ್ಲಿ ಅರುಣ ಗೌಳಿ ಎಂಬುವರ 2 ಆಕಳು, 1 ಕರು, ಕಲಾಲ ಓಣಿಯ ಮುರಳಿ ಕಲಾಲ ಎಂಬುವರ 2 ಕರು, ಹೊಸ ಓಣಿಯ ಚನ್ನಪ್ಪ ಕುರುಬರ ಎಂಬುವರ 1 ಆಕಳು, ನಿಂಗವ್ವ ಕುರುಬರ ಎಂಬುವರ 1 ಆಕಳು, ಕಂಬಾರಗಟ್ಟಿ ಪ್ಲಾಟ್​ನ ರಾಜಶೇಖರ ಮಾದರ ಎಂಬುವರ 2 ಆಕಳು ಮತ್ತು ಇದೇ ಬಡಾವಣೆಯ 2 ಆಕಳು ಮತ್ತು 1 ಕರುವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇರಬಹುದು ಎಂದು ಗೋವುಗಳ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದಾರೆ.

    ಸುಮಾರು 20 ದಿನಗಳ ಹಿಂದೆ ನಮ್ಮ ತಾಯಿ ಸಾಕಿದ ಹಸು ಕಳ್ಳತನವಾಗಿದೆ. ಆ ಹಸು ಕರುವಿಗೆ ಜನ್ಮ ನೀಡಿ 4 ತಿಂಗಳಾಗಿತ್ತು. ಹಾಗೇ ಕಳೆದ ಒಂದು ವಾರದ ಹಿಂದೆ ನಾನು ಸಾಕಿದ ಹಸು ಕಳ್ಳತನವಾಗಿದೆ. ಅದು ಕರುವಿಗೆ ಜನ್ಮ ನೀಡಿ 2 ತಿಂಗಳಾಗಿತ್ತು. ಬೆಳಗ್ಗೆ ಸುಮಾರು 4 ಗಂಟೆಗೆ ಮನೆಯಿಂದ ಹೊರಗೆ ಹೋದಾಗ ಕಣ್ಮರೆಯಾಗಿವೆ. ಎರಡೂ ಕರುಗಳಿಗೆ ಹಿಂಡಿ ತಿನ್ನಿಸುತ್ತಾ ಜೋಪಾನ ಮಾಡುತ್ತಿದ್ದೇವೆ. | ಚನ್ನಪ್ಪ ಕುರುಬರ, ಹೊಸ ಓಣಿ ನಿವಾಸಿ

    ಕಲಘಟಗಿ ಮತ್ತು ಹಾನಗಲ್ಲ ಭಾಗಗಳಿಂದ ಗೋ ಮಾಂಸ ಮಾರಾಟಗಾರರು ಬರುತ್ತಿದ್ದಾರೆ. ರಾತ್ರಿ ವೇಳೆ ನಾವು ಕಾದು ನೋಡಿದ್ದೇವೆ. ಆದರೆ, ಅವರು ಸಿಗುತ್ತಿಲ್ಲ. ಕಳೆದ ಒಂದು ವಾರದ ಈಚೆಗೆ ಯಾರೋ ಇನ್ನೋವಾ ಕಾರಿನಲ್ಲಿ ಕರುಗಳನ್ನು ಹಾಕಿಕೊಂಡು ಹೋಗಿರುವ ಬಗ್ಗೆ ವದಂತಿ ಹಬ್ಬಿದೆ. ಸ್ಥಳೀಯರ ಸಹಕಾರವೂ ಇದೆ ಎಂಬ ಮಾತು ಕೇಳಿ ಬಂದಿದೆ. ಆದ್ದರಿಂದ ಪೊಲೀಸರು ರಾತ್ರಿ ವೇಳೆ ಗೋವು ಕಳ್ಳರ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಗೋ ಕಳ್ಳರ ವಿರುದ್ಧ ಪೊಲೀಸರಿಗೆ ದೂರು ನೀಡುವುದುಮ ಗೋರಕ್ಷಕ ವಿಭಾಗದ ಕಾರ್ಯಕರ್ತರು ರಾತ್ರಿ ವೇಳೆ ಗೋವುಗಳನ್ನು ಕಳ್ಳತನ ಮಾಡುತ್ತಿರುವ ಕಳ್ಳರನ್ನು ಕಾಯುವ ನಿರ್ಧಾರ ಕೈಗೊಂಡಿದ್ದೇವೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. | ವಿಶ್ವನಾಥ ಭಜಂತ್ರಿ, ಭಾರತೀಯ ಗೋ-ಪರಿವಾರ, ಗೋ-ರಕ್ಷಕ ವಿಭಾಗದ ತಾಲೂಕು ಅಧ್ಯಕ್ಷ

    ಗೋವುಗಳ ಕಳ್ಳತನ ಮಾಡುತ್ತಿರುವವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಸಿಸಿ ಕ್ಯಾಮರಾಗಳ ಮತ್ತು ಸಾರ್ವಜನಿಕರ ಮಾಹಿತಿ ಸಹಾಯದಿಂದ ಕಳ್ಳರನ್ನು ಹಿಡಿಯಲು ಪ್ರಯತ್ನಿಸಲಾಗುವುದು. ಈಗಾಗಲೆ ಗೋವು ಕಳೆದುಕೊಂಡ ಮಾಲೀಕರೊಬ್ಬರು ಬಂದು ಸಲ್ಲಿಸಿದ ದೂರು ಸ್ವೀಕರಿಸಲಾಗಿದೆ. | ಬಸವರಾಜ ಮಬನೂರ, ಪಿಎಸ್​ಐ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts