More

    ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ, ಸಚಿವ ಎಂಟಿಬಿ ನಾಗರಾಜ್ ಅಭಿಮತ, 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

    ನಂದಗುಡಿ: ಅಭಿವೃದ್ಧಿ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ, ಜನರ ತೆರಿಗೆ ಹಣವನ್ನು ಪೋಲು ಮಾಡಲು ಬಿಡುವುದಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ನಂದಗುಡಿ ಮತ್ತು ಹೋಬಳಿಯ ಸಿ.ಟಿ ಗೊಲ್ಲಹಳ್ಳಿಯಲ್ಲಿ ಕೆಆರ್‌ಐಡಿಎಲ್ ಯೋಜನೆ ಅನುದಾನದಲ್ಲಿ ತಲಾ 40 ಲಕ್ಷ ರೂ. ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿ ನಡೆಸಿದರಷ್ಟೇ ಸಾಲದು ಅದರ ಗುಣಮಟ್ಟದ ಬಗ್ಗೆಯೂ ಅಧಿಕಾರಿಗಳು ನಿಗಾವಹಿಸಬೇಕು, ಇಲ್ಲವಾದರೆ ವಿನಿಯೋಗಿಸಿದ ಹಣ ಪೋಲು ಮಾಡಿದಂತಾಗುತ್ತದೆ, ಇಂಥ ಪ್ರಕರಣಗಳು ಕಂಡುಬಂದರೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜನರ ಋಣ ನನ್ನ ಮೇಲಿದೆ: ಕ್ಷೇತ್ರದಲ್ಲಿ 3 ಬಾರಿ ಶಾಸಕನಾಗಿ ಜನರಿಂದ ಆಯ್ಕೆಯಾಗಿದ್ದೇನೆ, ಮಂತ್ರಿ ಸ್ಥಾನದಲ್ಲಿದ್ದೇನೆ, ಜನರ ಋಣ ನನ್ನ ಮೇಲಿದೆ. ಅವರ ಸೇವೆ ಮಾಡುವುದೇ ನನ್ನ ಆದ್ಯ ಕರ್ತವ್ಯ, ಇದಕ್ಕೆ ಎಂದಿಗೂ ದ್ರೋಹ ಬಗೆಯಲಾರೆ. ಕರೊನಾದಂಥ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಜನ ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದಾರೆ, ಇಂಥ ವೇಳೆಯಲ್ಲಿ ಜನಪ್ರತಿನಿಧಿಯಾದವರು ಕಾಲಿಕೆ ಚಕ್ರಕಟ್ಟಿಕೊಂಡವರಂತೆ ಜನರ ಸೇವೆಗೆ ಮುಂದಾಗಬೇಕು ಎಂದು ಸಚಿವ ಎಂಟಿಬಿ ಅಭಿಪ್ರಾಯಪಟ್ಟರು.

    ಹಳ್ಳಿಗಳ ಪ್ರಗತಿಗೆ ಸರ್ಕಾರ ಸಾಥ್: ರಾಜ್ಯ ಬಿಜೆಪಿ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ, ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ, ಮುಂದಿನ ದಿನಗಳಲ್ಲಿ ತಾಲೂಕು ಮತ್ತಷ್ಟು ಅಭಿವೃದ್ಧಿ ಪರ್ವವನ್ನು ಕಾಣಲಿದೆ ಎಂದು ಸಚಿವರು ತಿಳಿಸಿದರು.

    ಅಭಿವೃದ್ಧಿಗೆ ವೇಗ: ರಸ್ತೆಗಳ ಅಭಿವೃದ್ಧಿಗೆ ತಾಲೂಕಿನಾದ್ಯಂತ ಆದ್ಯತೆ ನೀಡಲಾಗಿದೆ, ದೀರ್ಘಕಾಲ ಬಾಳಿಕೆ ಬರುವ ಗುಣಮಟ್ಟದ ಕಾಮಗಾರಿ ಬಗ್ಗೆ ಸಾರ್ವಜನಿಕರೂ ನಿಗಾವಹಿಸಬೇಕಿದೆ, ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದು, ಹೊಸಕೋಟೆಯಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್ ತಿಳಿಸಿದರು.

    ತಾಲೂಕು ಬಿಜೆಪಿ ಉಪಾಧ್ಯಕ್ಷ ಎನ್. ಚಂದ್ರಪ್ಪ,ಮಾತನಾಡಿ, ಸಚಿವ ಎಂಟಿಬಿ ನಾಗರಾಜ್ ಕ್ಷೇತ್ರದ ಜನರ ಮೇಲೆ ಉಸಿರನ್ನೇ ಇಟ್ಟಿದ್ದಾರೆ, ಪ್ರತಿ ಕ್ಷಣ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೇ ಚಿಂತಿಸುತ್ತಾರೆ, ಇಂಥ ಜನನಾಯಕರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಪರ್ವ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿ ಕಾಣಲಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts