More

    ಕಾಮಗಾರಿಗಳ ಮರುಟೆಂಡರ್ ಕರೆಯಲು ಆಗ್ರಹ


    ಅರಕಲಗೂಡು: ಅಧಿಕಾರಿಗಳು ಸದಸ್ಯರ ಒಪ್ಪಿಗೆ ಪಡೆಯದೆ ನಿಯಮಬಾಹಿರವಾಗಿ ಕಾಮಗಾರಿಗಳ ಟೆಂಡರ್ ಕರೆಯುತ್ತಿರುವುದು ಸರಿಯಲ್ಲ. ಕೂಡಲೇ ಮರು ಟೆಂಡರ್ ಕರೆಯಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.


    ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಪಪಂ ಮಾಜಿ ಉಪಾಧ್ಯಕ್ಷ ನಿಖಿಲ್‌ಕುಮಾರ್, ಸದಸ್ಯರ ಗಮನಕ್ಕೆ ತಾರದೆ ನೀಡಿರುವ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯಿಸಿದರು.


    ಪಪಂ ನಿಧಿ ಶೇ.24.10ರ ಯೋಜನೆಯಡಿ ಪೌರ ಕಾರ್ಮಿಕರ ಬೆಳಗಿನ ಉಪಾಹಾರ ನೀಡಲು ಟೆಂಡರ್ ಕರೆಯಲಾಗಿದೆ. ಇದಕ್ಕೆ ಹೋಟೆಲ್ ದುರ್ಗಾ ದರ್ಶಿನಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಮೆಸ್‌ನ ಇಬ್ಬರು ದರಪಟ್ಟಿ(ಕೊಟೇಷನ್) ಕೊಟ್ಟಿದ್ದು, ಅನ್ನಪೂರ್ಣೇಶ್ವರಿ ಅವರಿಗೆ ಟೆಂಡರ್ ಅನುಮೋದಿಸಬಹುದೆಂದು ತಿಳಿಸಲಾಗಿದೆ. ಆದರೆ, ದರಪಟ್ಟಿ ನೀಡಿದ ಇಬ್ಬರು ಕೂಡ ಸಹೋದರರು ಆಗಿರುವುದರಿಂದ ಮರುಟೆಂಡರು ಕರೆಯಬೇಕು ಎಂದು ಒತ್ತಾಯಿಸಿದರು.


    ಪೌರಕಾರ್ಮಿಕರಿಗೆ ಅವಶ್ಯವಿರುವ ಸಾಮಗ್ರಿಗಳನ್ನು ನೀಡಲು ಶ್ರೀ ವೆಂಕಟೇಶ್ವರ ಎಂಟರ್‌ಪ್ರೈಸಸ್ ಅವರಿಗೆ ಟೆಂಡರ್ ನೀಡಿರುವುದು ಸರಿಯಲ್ಲ. ಇವೆರಡನ್ನು ಮರುಟೆಂಡರ್ ಕರೆಯಬೇಕು. ಅಂಗನವಾಡಿಗಳಿಗೆ ಕುರ್ಚಿ, ಬೆಂಚು ನೀಡಲು ಶ್ರೀ ಕಾಳಿಕಾಂಬ ಗ್ಲಾಸ್ ಆ್ಯಂಡ್ ಪ್ಲೇ ವುಡ್ ಅವರಿಗೆ ಟೆಂಡರ್ ನೀಡಿದ್ದಾರೆ. ಅವರಲ್ಲಿ ಪ್ಲೇ ವುಡ್, ಗ್ಲಾಸ್ ಸಿಗುತ್ತವೆ ಹೊರತು ಪ್ಲೇ ವುಡ್‌ನಿಂದ ಬೆಂಚು, ಟೇಬಲ್ ಸಿಗಲಾರವು. ದರಪಟ್ಟಿಗಳನ್ನು ಸಂಬಂಧವಿಲ್ಲದವರೆಲ್ಲ ನೀಡುತ್ತಿದ್ದಾರೆ. ಈ ಕುರಿತು ಪರಿಶೀಲಿಸಬೇಕು. ನಕಲು ದರಪಟ್ಟಿ ಎಂದು ಪರಿಗಣಿಸಿ ಶ್ರೀ ಅನ್ನಪೂರ್ಣೇಶ್ವರಿ ಮೆಸ್, ಶ್ರೀ ವೆಂಕಟೇಶ್ವರ ಎಂಟರ್‌ಪ್ರೈಸಸ್ ಹಾಗೂ ಶ್ರೀ ಕಾಳಿಕಾಂಬ ಗ್ಲಾಸ್ ಆ್ಯಂಡ್ ಪ್ಲೇ ವುಡ್ ಅಂಗಡಿಗಳಿಗೆ ನೋಟಿಸ್ ನೀಡಿ ದಂಡ ವಿಧಿಸಬೇಕು. ಇಲ್ಲವಾದರೆ ಪಟ್ಟಣ ಪಂಚಾಯತಿ ಮುಂದೆ ಧರಣಿ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.


    ಸಭೆ ಬಹಿಷ್ಕಾರ: ಅಧಿಕಾರಿಗಳು ತಮಗಿಷ್ಟ ಬಂದಂತೆ ಟೆಂಡರ್ ಕರೆಯುತ್ತಿದ್ದಾರೆ. ಈ ಕುರಿತು ಸದಸ್ಯರು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ನಿಮಗೆ ಇಷ್ಟ ಬಂದಂತೆ ಟೆಂಡರ್ ಕರೆದು ಅನುಮೋದಿಸಿದರೆ ಸಭಾ ತ್ಯಾಗ ಮಾಡಬೇಕಾಗುತ್ತದೆ ಎಂದು ನಿಖಿಲ್ ಕುಮಾರ್ ಕೆಲಕಾಲ ಧರಣಿ ಕುಳಿತರು.


    ಸಭೆಗೆ ಒಂದು ಅಜೆಂಡಾ, ಟೆಂಡರ್ ಮತ್ತೊಂದು ಕರೆಯುತ್ತೀರಿ. ಕೇಳಿದರೆ ತಪ್ಪಾಗಿದೆ ಎನ್ನುತ್ತೀರಿ. ಇದೇ ಮೊದಲಲ್ಲ. ಪ್ರತಿ ಸಭೆಯಲ್ಲೂ ಹೀಗೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುಖ್ಯಾಧಿಕಾರಿ ಶಿವಕುಮಾರ್, ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅವರು ಎಲ್ಲವನ್ನೂ ಮರುಟೆಂಡರ್ ಕರೆಯಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟರು.


    ಉನ್ನತ ಶಿಕ್ಷಣ ಕಲಿಯುವ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡುವುದಾಗಿ ಕಳೆದ ಸಭೆಯಲ್ಲೇ ಭರವಸೆ ನೀಡಲಾಗಿತ್ತು. ಇದುವರೆಗೂ ನೀಡಿಲ್ಲ. ಮಕ್ಕಳು ನೀಡುತ್ತಾರೋ ಇಲ್ಲವೋ ಅಥವಾ ನಾವೇ ತೆಗೆದುಕೊಳ್ಳೋಣವೇ ಎಂದು ಕೇಳುತ್ತಿದ್ದಾರೆ. ಹೊಸ ಟೆಂಡರ್ ಕರೆಯುವುದನ್ನು ಬಿಟ್ಟು ಇನ್ನೊಂದು ವಾರದೊಳಗೆ ಲ್ಯಾಪ್‌ಟಾಪ್ ನೀಡುವ ವ್ಯವಸ್ಥೆ ಮಾಡಿಸಿ ಎಂದು ಸದಸ್ಯರು ಸಲಹೆ ನೀಡಿದರು. ಇದಕ್ಕೆ ಅಧ್ಯಕ್ಷರು ಸಮ್ಮತಿ ಸೂಚಿಸಿದರು.
    ಅನಿಕೇತನ ಮಾತನಾಡಿ, ಪಟ್ಟಣ ಮುಖ್ಯ ರಸ್ತೆಗಳ ಬೀದಿ ದೀಪಗಳು ನಿರ್ವಹಣೆ ಇಲ್ಲದೆ ಕಗ್ಗತ್ತಲು ಆವರಿಸಿದೆ ಎಂದು ದೂರಿದರು. ಇವುಗಳನ್ನು ಸರಿಪಡಿಸಲಾಗುವುದು ಎಂದು ಮುಖ್ಯಾಧಿಕಾರಿ ಶಿವಕುಮಾರ್ ತಿಳಿಸಿದರು. ಉಪಾಧ್ಯಕ್ಷೆ ರಶ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts