More

    ಕಾಡೆಂದರೆ ಸಂಸ್ಕೃತಿ, ಜೀವ ವೈವಿಧ್ಯ

    ಕಾರವಾರ: ಭಾರತಕ್ಕೆ ತನ್ನದೇ ಆದ ಸಂಸ್ಕೃತಿ, ವ್ಯಕ್ತಿತ್ವ ಇದೆ. ಅದು ಇಂಗ್ಲೆಂಡ್ ಅಮೆರಿಕ ಆಗಬೇಕಿಲ್ಲ ಎಂದು ಪರಿಸರ ಹೋರಾಟಗಾರ, ಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್ ಅಭಿಪ್ರಾಯಪಟ್ಟರು.

    ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್ ಅವರ ಪ್ರಾಯೋಜಕತ್ವದಲ್ಲಿ ದಿ.ಪಿ.ಎಸ್.ಕಾಮತ್ ಸ್ಮರಣಾರ್ಥ ಕೆನರಾ ವೆಲ್​ಫೇರ್ ಟ್ರಸ್ಟ್​ನಿಂದ ನಗರದ ದಿವೇಕರ್ ಕಾಮರ್ಸ್ ಕಾಲೇಜ್​ನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

    ಸಣ್ಣ ಉದ್ದಿಮೆಗಳ ಮೇಲೆ ಇಲ್ಲಿನ ಆರ್ಥಿಕತೆ ನಿಂತಿದೆ. ಅಭಿವೃದ್ಧಿಯ ನೆಪದಲ್ಲಿ ಮುಂದಡಿ ಇಡುವ ಮೊದಲು ನಾವು ಅಭಿವೃದ್ಧಿಯ ಅರ್ಥವನ್ನು ತಿಳಿದುಕೊಳ್ಳಬೇಕು ಎಂದರು.

    ಕಾಡು ಎಂದರೆ ಕೇವಲ ಒಂದಿಷ್ಟು ಮರಗಳ ಗುಂಪಲ್ಲ. ಅದು ಒಂದು ಸಂಸ್ಕೃತಿ, ಜೀವ ವೈವಿಧ್ಯ, ಹೀಗೆ ಹಲವು ಅಂಶಗಳಿವೆ 88 ದಶ ಲಕ್ಷ ವರ್ಷಗಳ ಹಿಂದೆ ಬಂದ ಈ ಸಂಪತ್ತನ್ನು ನಾವು ನಮ್ಮ ಬೇಡಿಕೆಗಳ ಪೂರೈಕೆಗಾಗಿ ನಗರೀಕರಣಕ್ಕಾಗಿ ನಾಶ ಮಾಡುವುದು ಸರಿಯಲ್ಲ. ನಮ್ಮ ವಿಶ್ವದ ಶೇ. 60 ರಷ್ಟು ಜಿಡಿಪಿ ಪರಿಸರದ ಮೇಲೆ

    ನಿಂತಿದೆ ಎಂದು ದಾವೋಸ್ ಇಕಾನಾಮಿಕ್ ಫೋರಂ ಹೇಳಿದೆ ಎಂದರು.

    ಉತ್ತರ ಕನ್ನಡ ರಾಜ್ಯದ ಅತ್ಯಂತ ಸುಂದರ ಜಿಲ್ಲೆ. ಇಲ್ಲಿನ ಅಘನಾಶಿನಿ ಅಳಿವೆ ಅತ್ಯಂತ ಸಂಪದ್ಭರಿತವಾಗಿದೆ. ಅಣೆಕಟ್ಟೆಗಳ ನಿರ್ವಣದಿಂದ ಕಾಳಿ, ಶರಾವತಿ ನದಿ ಅಳಿವೆಗಳು ತಮ್ಮ ಸಂಪತ್ತು ಕಳೆದುಕೊಂಡಿವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷ ಎಸ್​ಪಿ ಕಾಮತ್ ಮಾತನಾಡಿ, ಒಂದೆಡೆ ಕೈಗಾ, ಇನ್ನೊಂದೆಡೆ ಸೀಬರ್ಡ್​ನಿಂದ ಕಾರವಾರ ಬಳಲುತ್ತಿದೆ. ಈಗ ಬಂದ ಸಾಗರ ಮಾಲಾ ಯೋಜನೆ ಇದ್ದೊಂದು ಕಡಲ ತೀರವನ್ನು ಆಪೋಶನ ಪಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್, ಕೆನರಾ ವೆಲ್​ಫೇರ್ ಟ್ರಸ್ಟ್​ನ ಟ್ರಸ್ಟಿ ಕೆ.ವಿ.ಶೆಟ್ಟಿ, ಹಿರಿಯ ಸಾಹಿತಿ ವಿಷ್ಣು ನಾಯ್ಕ, ದಿವೇಕರ್ ಕಾಲೇಜ್ ಪ್ರಾಂಶುಪಾಲ ಕೇಶವ ಕೆ.ಜಿ.ವೇದಿಕೆಯಲ್ಲಿದ್ದರು.

    ಸ್ಪರ್ಧಾ ವಿಜೇತರು

    ಅಂಕೋಲಾ ಜಿಸಿ ಕಾಲೇಜ್​ನ ಸ್ನೇಹಲ್ ವಿ. ನಾಯಕ ಮೊದಲ ಬಹುಮಾನ ಪಡೆದು 50 ಸಾವಿರ ರೂ. ತಮ್ಮದಾಗಿಸಿಕೊಂಡರು ಶಿರಸಿ ಎಂಇಎಸ್ ಕಾಮರ್ಸ್ ಕಾಲೇಜ್​ನ ಗಜಾನನ ಹೆಗಡೆ ರನ್ನರ್ ಅಪ್ ಆಗಿ 30 ಸಾವಿರ ರೂ. ಪಡೆದರು. ಹೊನ್ನಾವರ ಎಸ್​ಡಿಎಂ ಪಿಯು ಕಾಲೇಜ್​ನ ಮೇಧಾ ಭಟ್ 3 ನೇ ಸ್ಥಾನದೊಂದಿಗೆ 20 ಸಾವಿರ ಪಡೆದರು. ಕುಮಟಾ ಕಮಲಾ ಬಾಳಿಗಾ ಕಾಲೇಜ್​ನ ಸಂಗೀತಾ ಶೆಟ್ಟಿ ಹಾಗೂ ಯಲ್ಲಾಪುರ ವೈಟಿಎಸ್​ಎಸ್​ನ ಸಹನಾ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದು ತಲಾ 5 ಸಾವಿರ ಪಡೆದರು. ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ., ಕ್ರೀಡಾ ಕಿಟ್ ಮತ್ತು ತೆಂಗಿನ ಸಸಿಯನ್ನು ಬಹುಮಾನವಾಗಿ ನೀಡಲಾಯಿತು. ‘ದೇಶದ ವಿದ್ಯುತ್ ಸಮಸ್ಯೆಗೆ ಅಣು ಶಕ್ತಿಯೊಂದೇ ಪರಿಹಾರ’ ಎಂಬ ವಿಷಯವಾಗಿ ಚರ್ಚೆ ಆಯೋಜಿಸಲಾಗಿತ್ತು. ಕಾಲೇಜ್ ಮಟ್ಟದಿಂದ ನಡೆದ ಸ್ಪರ್ಧೆಗಳಲ್ಲಿ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕು ಹಂತಗಳಲ್ಲಿ ಸ್ಪರ್ಧೆ ಮಾಡಿ ಅಂತಿಮ ಸುತ್ತಿಗೆ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳಲಾಯಿತು. ಉದ್ಯಮಿಗಳಾದ ಈಶ್ವರ ಹೆಗಡೆ, ಅಶೋಕ ಶಾನಭಾಗ, ಬಾಲಮಂದಿರ ಹೈಸ್ಕೂಲ್ ಪ್ರಾಂಶುಪಾಲೆ ಅಂಜಲಿ ಮಾನೆ ನಿರ್ಣಾಯಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts