More

    ಕಾಡು ಹಂದಿ ಹಾವಳಿಗೆ ಬೆಳೆ ಹಾಳು

    ಮುಂಡರಗಿ: ತಾಲೂಕಿನ ಡೋಣಿ, ಡಂಬಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತರ ಬೆಳೆಗಳು ಕಾಡು ಹಂದಿಗಳ ಪಾಲಾಗುತ್ತಿವೆ. ಫಸಲು ಕಾಪಾಡಿಕೊಳ್ಳಲು ರೈತರು ರಾತ್ರಿಯಿಡೀ ನಿದ್ದೆ ಗೆಟ್ಟು ಕಾವಲು ಕಾಯುವಲ್ಲಿ ನಿರತರಾಗಿದ್ದಾರೆ.

    ಡೋಣಿ ಗ್ರಾಮದ ಸುತ್ತಲೂ ನೀರಾವರಿ ಹಾಗೂ ಮಳೆಯಾಶ್ರಿತ ಜಮೀನುಗಳಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಮಾಡುವಂತಾಗಿದೆ. ಈವರೆಗೂ ಉತ್ತಮ ಮಳೆ ಸುರಿಯದೆ ಬಿತ್ತನೆ ಪ್ರಮಾಣವೂ ಇಳಿಮುಖವಾಗಿದೆ. ಆದರೆ, ಆಗಾಗ ಸುರಿದ ಅಲ್ಪ ಮಳೆಗೆ ಮಳೆಯಾಶ್ರಿತ ಭೂಮಿಯಲ್ಲಿ ಶೇಂಗಾ, ಗೋವಿನಜೋಳ ಬಿತ್ತನೆಯಾಗಿದೆ.

    ಬಿತ್ತಿದ ಬೀಜಗಳು ಕಾಡು ಹಂದಿಗಳ ಪಾಲಾಗದಿರಲೆಂದು ರೈತರು 12 ದಿನಗಳವರೆಗೆ ರಾತ್ರಿಯಿಡೀ ನಿದ್ದೆಗೆಟ್ಟು ಹೊಲದಲ್ಲಿ ಕಾಯ್ದಿದ್ದಾರೆ. ಬೀಜ ಮೊಳಕೆಯೊಡೆಯುವಷ್ಟರಲ್ಲಿ ಬೆಳೆ ಕಾಯುವುದನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾಡು ಹಂದಿಗಳ ಹಾವಳಿ ವಿಪರೀತವಾಗಿದ್ದು, ಬೆಳೆಯನ್ನೆಲ್ಲ ತಿಂದು ಹಾಳುಗೆಡವಿವೆ. ಇದರಿಂದ ಸಾವಿರಾರು ರೂ. ವ್ಯಯಿಸಿ ಬೆಳೆದ ಬೆಳೆ ಸರ್ವನಾಶವಾಗಿದೆ. ಅದನ್ನು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ.

    ಪ್ರತಿ ಎಕರೆ ಶೇಂಗಾ ಬಿತ್ತನೆಗೆ ಬೀಜ, ಗೊಬ್ಬರ, ಕೂಲಿ ಆಳುಗಳ ಸಂಬಳ ಸೇರಿ 15 ಸಾವಿರ ರೂ. ದಿಂದ 20 ಸಾವಿರ ರೂ. ಖರ್ಚು ಮಾಡಲಾಗಿದೆ. ಇದೇ ರೀತಿ ಒಂದೆಕರೆಯಲ್ಲಿ ಗೋವಿನಜೋಳ ಬಿತ್ತನೆಗೆ 10 ಸಾವಿರ ರೂ. ವ್ಯಯಿಸಲಾಗಿದೆ. ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಕಾಡು ಹಂದಿಗಳ ಹಾವಳಿ ಕಣ್ಣೀರು ತರಿಸುತ್ತಿದೆ.

    ಕಾಡು ಹಂದಿಗಳಿಂದ ಬೆಳೆ ಹಾನಿಯಾದ ಕುರಿತು ಪರಿಶೀಲಿಸಲಾಗುವುದು. ರೈತರು ಸರಿಯಾದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಲಾಗುವುದು.

    | ಪ್ರದೀಪ ಪವಾರ ಆರ್​ಎಫ್​ಒ, ಮುಂಡರಗಿ

    ಸರಿಯಾಗಿ ಮಳೆ ಇಲ್ಲದಾಗಿದೆ. ಸುರಿದಿರುವ ಅಲ್ಪ ಮಳೆಗೆ ಬಿತ್ತಿದ್ದ ಬೆಳೆಯೆಲ್ಲ ಕಾಡು ಹಂದಿಗಳ ಪಾಲಾಗುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುತ್ತಿರುವುದು ನೋವು ತರಿಸಿದೆ. ಇದರಿಂದ ಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಮಳೆಯಾಶ್ರಿತ, ನೀರಾವರಿ ಆಶ್ರಿತ ಬೆಳೆಯೆಲ್ಲವೂ ಕಾಡುಹಂದಿಗಳ ಹಾವಳಿಗೆ ಹಾಳಾಗುತ್ತಿದೆ.

    | ದಾನಪ್ಪ ಹರ್ತಿ ಡೋಣಿ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts