More

    ಕಾಡುಪ್ರಾಣಿಗಳ ಕಾಟಕ್ಕೆ ಕೃಷಿಕರ ಕಣ್ಣೀರು

    ವಿಜಯ ಸೊರಟೂರ ಡಂಬಳ

    ಕಾಡುಪ್ರಾಣಿಗಳ ಕಾಟಕ್ಕೆ ಕೃಷಿಕರು ಕಣ್ಣೀರು ಹಾಕುವಂತಾಗಿದೆ. ಡಂಬಳ ಹೋಬಳಿ ವ್ಯಾಪ್ತಿಯ ಕಪ್ಪತ್ತಗಿರಿ ಕಾಡಂಚಿನ ಜಮೀನುಗಳಿಗೆ ಕಾಡು ಹಂದಿ, ಜಿಂಕೆ, ನವಿಲುಗಳ ಹಾವಳಿಯಿಂದ ಬಾಳೆ ಬೆಳೆ ಹಾಳಾಗುತ್ತಿದೆ. ಬೆಳೆಯ ಚಿಗುರನ್ನು ತಿಂದು ಹಾಕುತ್ತಿರುವುದರಿಂದ ರೈತರು ಕಂಗೆಟ್ಟಿದ್ದಾರೆ.

    ವನ್ಯಜೀವಿಧಾಮ ಕಪ್ಪತಗುಡ್ಡದ ಅಂಚಿನಲ್ಲಿ ಡಂಬಳ, ಡೋಣಿ, ಅತ್ತಿಕಟ್ಟಿ. ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಮುರಡಿ, ಮುರಡಿತಾಂಡಾಗಳಲ್ಲಿ 60 ಹೆಕ್ಟೇರ್​ಗಿಂತ ಹೆಚ್ಚು ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ ಬಾಳೆ ಬೆಳೆಯಲಾಗಿದೆ. ಡಂಬಳ ಗ್ರಾಮದ ಯಂಕಪ್ಪ ಉಪ್ಪಾರ ಅವರು 70 ಸಾವಿರ ರೂಪಾಯಿ ಖರ್ಚು ಮಾಡಿ ಎರಡು ತಿಂಗಳ ಹಿಂದೆ 2 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಬಾಳೆ ಸಸಿ ನಾಟಿ ಮಾಡಿದ್ದಾರೆ. ವನ್ಯಜೀವಿಗಳ ದಾಳಿಯಿಂದ ಅರ್ಧ ಎಕರೆಯಲ್ಲಿನ ಬಾಳೆ ಗಿಡಗಳ ಚಿಗುರನ್ನು ತಿಂದು ಹಾಕಿವೆ.

    ರಾತ್ರಿ ಹೊಲದಲ್ಲೇ ವಾಸ್ತವ್ಯ: ಕಾಡು ಹಂದಿ, ಜಿಂಕೆ, ನವಿಲು ಹಾವಳಿಯಿಂದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರಾತ್ರಿ ಹೊಲದಲ್ಲೇ ವಾಸ್ತವ್ಯ ಮಾಡಬೇಕಾಗಿದೆ. ಕಾಡು ಹಂದಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಈಗ ಸವಾಲಾಗಿ ಪರಿಣಮಿಸಿದೆ.

    ಸಿಗುತ್ತಿಲ್ಲ ಪರಿಹಾರ: ಈ ಭಾಗದ ನೂರಾರು ರೈತರ ಜಮೀನು ಕಪ್ಪತಗಿರಿ ಕಾಡಂಚಿನಲ್ಲಿ ಇದೆ. ಈ ಹಿಂದೆ ಕಾಡು ಪ್ರಾಣಿಗಳು ಡಂಬಳ, ಡೋಣಿ, ಡೋಣಿ ತಾಂಡಾ, ಮುರಡಿ, ಮುರಡಿ ತಾಂಡಾ, ಹಿರೇವಡ್ಡಟ್ಟಿ, ಗುಡ್ಡದ ಬೂದಿಹಾಳ, ನಾರಾಯಣಪುರ, ಅತ್ತಿಕಟ್ಟಿ ಮತ್ತಿತರ ಗ್ರಾಮಗಳ ಹೊಲಗಳಿಗೆ ನುಗ್ಗಿ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಬಾಳೆ ಬೆಳೆಗಳನ್ನು ನಾಶಪಡಿಸಿವೆ. ಆದರೆ,

    ಅರಣ್ಯ ಇಲಾಖೆಯಿಂದ ಬೆಳೆಗಳ ಹಾನಿಗೆ ಇದುವರೆಗೂ ಸೂಕ್ತ ಪರಿಹಾರ ನೀಡುತ್ತಿಲ್ಲ ಎನ್ನುವುದು ಕಪ್ಪತ್ತಗಿರಿಯಂಚಿನ ಗ್ರಾಮಗಳ ರೈತರ ಆರೋಪ.

    ನವಿಲುಗಳು ನಮ್ಮ ಅರ್ಧ ಎಕರೆ ಬಾಳೆ ಗಿಡಗಳ ಚಿಗುರನ್ನು ತಿಂದು ಹಾಕಿವೆ. ಹಗಲು-ರಾತ್ರಿ ಹೊಲದಲ್ಲೇ ಗುಡಿಸಲು ಹಾಕಿಕೊಂಡು ಕಾಯುತ್ತಿದ್ದರೂ ಕಾಡು ಹಂದಿ, ನವಿಲು, ಜಿಂಕೆಗಳ ಕಾಟ ತಪ್ಪುತ್ತಿಲ್ಲ. ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು.

    | ಯಂಕಪ್ಪ ಉಪ್ಪಾರ, ಡಂಬಳ ರೈತ

    ಕಾಡು ಪ್ರಾಣಿಗಳಿಂದ ಬೆಳೆ ನಾಶವಾದ ಜಮೀನಿಗೆ ಹೋಗಿ ಸಮೀಕ್ಷೆ ಮಾಡಲಾಗುತ್ತದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಬೆಳೆಗೆ ತಕ್ಕ ಪರಿಹಾರ ನೀಡಲಾಗುವುದು.

    | ಪ್ರದೀಪ ಪವಾರ, ಮುಂಡರಗಿ ವಲಯ ಅರಣ್ಯಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts