More

    ಕಾಡಾ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲೇ ಅಧಿಕಾರಿಗಳಿಗೆ ತರಾಟೆ

    ದಾವಣಗೆರೆ: ಅಣೆಕಟ್ಟು ತುಂಬಿದ್ದರೂ ಭದ್ರಾ ಅಚ್ಚುಕಟ್ಟಿನ ಕೊನೆಭಾಗಕ್ಕೆ ಸಮರ್ಪಕ ನೀರು ಹರಿಯದ ಹಿನ್ನೆಲೆಯಲ್ಲಿ ಮಲೇಬೆನ್ನೂರಿನ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿಯಲ್ಲಿ ರೈತರು ಬುಧವಾರ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಸಮ್ಮುಖದಲ್ಲಿ ಇಂಜಿನಿಯರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ರೈತರ ಅಹವಾಲಿನ ಹಿನ್ನೆಲೆಯಲ್ಲಿ ಮಲೇಬೆನ್ನೂರಿಗೆ ಆಗಮಿಸಿದ ಕಾಡಾ ಅಧ್ಯಕ್ಷರು, ನಾಲಾ ವಿಭಾಗದ ಅಧೀಕ್ಷಕ ಇಂಜಿನಿಯರ್ ಸುಜಾತಾ ಸಮ್ಮುಖದಲ್ಲಿ ಚರ್ಚೆ ನಡೆಸುವ ಹಂತದಲ್ಲಿ ರೈತರು ಹರಿಹಾಯ್ದರು. ರೈತರು-ಇಂಜಿನಿಯರ್‌ಗಳ ನಡುವಿನ ವಾದ ವಿವಾದ ತಾರಕಕ್ಕೇರಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತು.
    ನಾಲಾ ಕೊನೆ ಭಾಗಗಳಿಗೆ ನೀರಿನ ಹರಿವು ಸರಿಯಾಗಿಲ್ಲ. ಮಲೇಬೆನ್ನೂರು ಭಾಗದಲ್ಲಿ ನೀರಿನ ನಿರ್ವಹಣೆ ಸರಿಯಿಲ್ಲದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ರೈತ ಮುಖಂಡರಾದ ರುದ್ರಪ್ಪ, ಚಂದ್ರಪ್ಪ ಕಿಡಿ ಕಾರಿದರು.
    ರೈತರ ಪರ ಮಾತನಾಡಿದ ಕಾಡಾ ಅಧ್ಯಕ್ಷರು ಇಇ ಪಟೇಲ್, ಎಇಇ ಚಂದ್ರಕಾಂತ್ ಅವರಲ್ಲದೆ ಕಾಡಾ ಸಭೆಗೆ ಬಾರದ ಜನಪ್ರತಿನಿಧಿಗಳ ನಡೆಯನ್ನು ತರಾಟೆಗೆ ತೆಗೆದುಕೊಂಡರು.
    ರೈತರ ಸಂಕಷ್ಟದ ಸಮಯದಲ್ಲಿ ಸ್ಪಂದಿಸಿ, ಅವರ ಮೊಬೈಲ್ ಕರೆ ಸ್ವೀಕರಿಸುವುದನ್ನು ಮೊದಲು ಕಲಿಯಿರಿ. ಕೈತುಂಬಾ ಸಂಬಳ, ಸರ್ಕಾರದ ವಾಹನ ಪಡೆದಿದ್ದೀರಿ. ಕೆಲಸ ಮಾಡಲಾಗದಿದ್ದರೆ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗಿ ಇಲ್ಲವೇ ನಿವೃತ್ತಿ ಪಡೆಯಿರಿ ಎಂದೂ ತಾಕೀತು ಮಾಡಿದರು.
    ಹಾಜರಿದ್ದ ಇಂಜಿನಿಯರ್‌ಗಳು-ಸಿಬ್ಬಂದಿ ಗೇಜ್ ಸಮಸ್ಯೆ, ನೀರಿನ ಅಭಾವ, ಮೇಲ್ಬಾಗದ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದರು. ಕೆಲವೆಡೆ ಅಕ್ರಮ ಪಂಪ್‌ಸೆಟ್ ತೆರವು ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ ಎಂದು ನ್ಯಾಯಾಲಯಕ್ಕೆ ಹೋಗಿರುವ ರೈತರು ಇದೇ ವೇಳೆ ದೂರಿದರು.
    ಅಕ್ರಮ ಪಂಪ್‌ಸೆಟ್‌ಗಳ ತೆರವು ಸಂಬಂಧ ಡಿಸಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ ಕಾರ್ಯಾಚರಣೆ ನಡೆಸಬೇಕಿದೆ. ನೀರಾವರಿ ನಿಗಮದಿಂದ ಇದು ಸಾಧ್ಯವಿಲ್ಲ. ಈ ಹಿಂದೆ ನಮ್ಮ ಮೇಲೆ ಹಲ್ಲೆಯಾಗಿದೆ. ಪೊಲೀಸರೂ ನಮ್ಮ ಸಹಾಯಕ್ಕೆ ಬರಲಿಲ್ಲ ಎಂದು ಇಂಜಿನಿಯರ್‌ಗಳು ಅಸಹಾಯಕತೆ ವ್ಯಕ್ತಪಡಿಸಿದರು.
    ಅಕ್ರಮ ಪಂಪ್‌ಸೆಟ್ ಹಾಕಿಕೊಂಡವರ ವಿರುದ್ಧ ನೀವೇಕೆ ನ್ಯಾಯಾಲಯ ಅಥವಾ ಮೇಲಧಿಕಾರಿಗಳಿಗೆ ದೂರು ನೀಡಿಲ್ಲ. ಅಕ್ರಮ ಪಂಪ್‌ಸೆಟ್ ಬಳಸುತ್ತಿರುವವರು ಚೆನ್ನಾಗಿ ಕೃಷಿ ಮಾಡುತ್ತಿದ್ದಾರೆ. ಕೊನೇ ಭಾಗದ ರೈತರು ಮಾತ್ರ ಸಂಕಷ್ಟದಲ್ಲಿದ್ದಾರೆ. ನೀರು ಬಾರದೆ ಭತ್ತದ ಗದ್ದೆ ಒಣಗುತ್ತಿದ್ದು ಸ್ಥಳಕ್ಕೆ ಧಾವಿಸಿ ಇದರ ಬಗ್ಗೆ ಪರಿಶೀಲಿಸಿ ಎಂದೂ ಪಟ್ಟು ಹಿಡಿದರು.
    ಹೀಗಾಗಿ ಇಂಜಿನಿಯರ್‌ಗಳ ತಂಡ ನೀರಿಲ್ಲದೆ ಒಣಗಿದ ಜಮೀನುಗಳ ಪರಿಶೀಲನೆಗೆ ಸಮ್ಮತಿಸಿತು. ಡಿಬಿ ಕೆರೆ ಪಿಕಪ್ ಜಲಾಶಯದ ಗೇಟ್ ಸಮಸ್ಯೆ ಪರಿಹರಿಸಲು ಮಾ. 7ರಂದು ಕೆಇಆರ್‌ಸಿ ತಂಡ ಭೇಟಿ ನೀಡಲಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ತೆಗೆದಕೊಳ್ಳುವ ಬಗ್ಗೆ ಸಭೆಯಲ್ಲಿ ಇಂಗಿತ ವ್ಯಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts