More

    ಕಾಡಾನೆಗಳ ಹಿಂಡನ್ನು ಅರಣ್ಯಕ್ಕಟ್ಟಿದ ಅಧಿಕಾರಿಗಳು

    ಹಲಗೂರು: ದಿಕ್ಕು ತಪ್ಪಿ ಕಾಡಿನಿಂದ ನಾಡಿಗೆ ಆಗಮಿಸಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಹಿಂಭಾಗ ಬೀಡು ಬಿಟ್ಟಿದ್ದ ಆನೆಗಳ ಹಿಂಡನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.


    ಸೋಮವಾರ ಬೆಳಗ್ಗೆ ಬಸವನ ಬೆಟ್ಟದ ಅರಣ್ಯ ಪ್ರದೇಶದಿಂದ ದಿಕ್ಕು ತಪ್ಪಿದ ಐದು ಗಂಡಾನೆಗಳು ಗುಂಡಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಹಿಂಭಾಗ ಬೀಡು ಬಿಟ್ಟಿದ್ದವು.


    ನಾಲ್ಕು ದಿನಗಳ ಹಿಂದೆ ಭೀಮನ ಕಿಂಡಿ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ಹಲಗೂರು ಸರಹದ್ದಿನಲ್ಲಿರುವ ಜಮೀನುಗಳಲ್ಲಿ ಬೆಳೆದ ಫಸಲುಗಳನ್ನು ತಿಂದು, ತುಳಿದು ನಾಶಪಡಿಸಿ ಗುಂಡಾಪುರ ಗ್ರಾಮವನ್ನು ದಾಟಿಕೊಂಡು ಬಸವನ ಬೆಟ್ಟದ ಕಾಡನ್ನು ಸೇರಿಕೊಂಡಿದವು.


    ದಿಕ್ಕು ತಪ್ಪಿ ಬಂದಿದ್ದ ಆನೆಗಳು ಮತ್ತೆ ತಮ್ಮ ವಾಸಸ್ಥಳಕ್ಕೆ ತೆರಳಲು ಸೋಮವಾರ ಬೆಳಗಿನ ಜಾವ ಬಸವನಬೆಟ್ಟ ಅರಣ್ಯ ಪ್ರದೇಶದಿಂದ ಗುಂಡಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಕಬ್ಬಾಳು ಅರಣ್ಯ ಪ್ರದೇಶಕ್ಕೆ ತೆರಳುತ್ತಿದ್ದವು. ಆದರೆ ಬೆಳಕು ಹರಿದ ಕಾರಣ ಕಾಡಿಗೆ ತೆರಳಲು ಆಗದೆ ಹಲಗೂರು ವಲಯ ವನ್ಯಜೀವಿ ಅರಣ್ಯ ಅಧಿಕಾರಿಗಳ ಕಚೇರಿಯ ಹಿಂಭಾಗದ ತೋಪಿನಲ್ಲಿ ಸೇರಿಕೊಂಡಿದ್ದವು.


    ವಿಷಯ ತಿಳಿದ ಸಾರ್ವಜನಿಕರು ಕಾಡಾನೆಗಳನ್ನು ನೋಡುವುದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.


    ಬಸವನ ಬೆಟ್ಟಕ್ಕೆ ಕಾಡಾನೆಗಳನ್ನು ಇಮ್ಮಟ್ಟಿಸಿ ಬಂದ ನಂತರ ಮಳವಳ್ಳಿ ಪ್ರಾದೇಶಿಕ ವಲಯ ಅಧಿಕಾರಿ ಮಹದೇವು ಮಾತನಾಡಿ, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಲಗೂರು, ಕನಕಪುರ, ಚನ್ನಪಟ್ಟಣ, ಮಳವಳ್ಳಿ ವನಜೀವಿ ವಿಭಾಗದ ಅಧಿಕಾರಿಗಳು ಮತ್ತು ನೂರಕ್ಕೂ ಹೆಚ್ಚು ಸಿಬ್ಬಂದಿ ಸೇರಿ ತಂಡ ರಚಿಸಿಕೊಂಡು ಅರಣ್ಯ ಕಚೇರಿಯ ಹಿಂಭಾಗದಿಂದ ಪಟಾಕಿ ಸಿಡಿಸುವುದರ ಮುಖಾಂತರ ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸಂಚಾರವನ್ನು ಕೆಲ ಸಮಯ ನಿಲ್ಲಿಸಿ ಕಾಡಾನೆಗಳು ರಸ್ತೆ ದಾಟಿದ ನಂತರ ಬಸಾಪುರ ಮಾರ್ಗವಾಗಿ ಬಸವನ ಬೆಟ್ಟ ಅರಣ್ಯ ಪ್ರದೇಶಕ್ಕೆ ಹಿಮ್ಮಟ್ಟಿಸಿರುವುದಾಗಿ ತಿಳಿಸಿದರು.


    ರೈತರು ಬೆಳೆ ನಷ್ಟಕ್ಕೊಳಗಾಗಿದ್ದರೆ ಅವರಿಂದ ಮಾಹಿತಿ ಪಡೆದು ತಕ್ಷಣ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
    ಕಾರ್ಯಾಚರಣೆಯಲ್ಲಿ ಕಾವೇರಿ ವನಜೀವಿ ವಿಭಾಗದ ಡಿಸಿಎಫ್ ನಾಗೇಂದ್ರ ಪ್ರಸಾದ್, ಆರ್‌ಎಫ್‌ಒ ಅಧಿಕಾರಿಗಳಾದ ಮಹದೇವು, ರವಿ ಬುರ್ಜಿ, ದೇವರಾಜು, ದಿನೇಶ, ಪ್ರವೀಣ್ ಕುಮಾರ್, ನಂದೀಶ, ಶಿವರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts