More

    ಕಾಡಲಿದೆ ಡೆಂಘೆ, ಎಚ್ಚರ

    ರಾಜ್ಯದಲ್ಲೇ ಮೈಸೂರು ಜಿಲ್ಲೆ ಮೂರನೇ ಸ್ಥಾನ

    ನಗರ ಪ್ರದೇಶದಲ್ಲೇ ಹೆಚ್ಚು ಪ್ರಕರಣ

    ಅವಿನಾಶ್ ಜೈನಹಳ್ಳಿ ಮೈಸೂರು
    ಕರೊನಾ ಆರ್ಭಟಕ್ಕೆ ಎರಡು ವರ್ಷಗಳಿಂದ ನಲುಗಿರುವ ಜಿಲ್ಲೆಯ ಜನತೆಯನ್ನು ಈ ವರ್ಷ ‘ಡೆಂಘೆ’ ಮಹಾಮಾರಿ ಕಾಡುತ್ತಿದೆ. ರಾಜ್ಯದಲ್ಲಿ ಡೆಂಘೆ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳ ಪೈಕಿ ಮೈಸೂರು ಮೂರನೇ ಸ್ಥಾನದಲ್ಲಿದೆ.


    ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಬಳಿಕ ಡೆಂಘೆ ಮಹಾಮಾರಿ ಹೆಚ್ಚಾಗಿ ಕಾಡಲು ಶುರು ಮಾಡಿದೆ. ಡೆಂಘೆಯಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲೇ ಹೆಚ್ಚಾಗಿದ್ದು, ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಜೂನ್ ತಿಂಗಳ ಅವಧಿಯಲ್ಲಿ 124, ಜುಲೈ ತಿಂಗಳ ಮೊದಲ ವಾರದಲ್ಲಿ 15 ಪ್ರಕರಣ ದಾಖಲಾಗಿವೆ. ಜನವರಿ 1ರಿಂದ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 324ಕ್ಕೆ ಏರಿದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ 1,265 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.


    2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ದಾಖಲಾಗಿದ್ದವು. 2022ರ ಜುಲೈ ಎರಡನೇ ವಾರಕ್ಕೆ ಮುನ್ನೂರರ ಗಡಿ ದಾಟಿದೆ. 2021ರಲ್ಲಿ 182 ಪ್ರಕರಣಗಳು ಕಂಡುಬಂದಿದ್ದವು. ಈ ಪೈಕಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೇ ಹೆಚ್ಚು ಪ್ರಕರಣಗಳಿದ್ದವು.


    ಜೂನ್‌ನಲ್ಲೇ ಹೆಚ್ಚು ! ಡಿಸೆಂಬರ್ ತಿಂಗಳಲ್ಲಿ ಕೊಂಚ ಮಳೆಯಾದ ಪರಿಣಾಮ ಜನವರಿಯಲ್ಲಿ ಹೆಚ್ಚು ಡೆಂಘೆ ಪ್ರಕರಣ ವರದಿಯಾಗಿವೆ. ಜನವರಿಯಲ್ಲಿ 40 ಜನರಿಗೆ ಕಾಣಿಸಿಕೊಂಡಿತ್ತು. ಬಳಿಕ ಪ್ರತಿ ತಿಂಗಳು ಸರಾಸರಿ 30 ರಿಂದ 35 ಪ್ರಕರಣಗಳು ವರದಿಯಾಗಿವೆ. ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ಮಳೆ ನೀರು ಮಡುಗಟ್ಟಿ ನಿಂತು ಡೆಂೆ ಹರಡುವ ‘ಈಡೀಸ್’ ಸೊಳ್ಳೆಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಿವೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಡೆಂೆ ಆರ್ಭಟ ಇನ್ನೂ ಮೂರು ತಿಂಗಳ ಕಾಲ ಕಾಡಲಿದೆ. ಹಾಗಾಗಿ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.


    ನಗರದಲ್ಲಿಯೇ ಅಧಿಕ! ಈ ಬಾರಿ ಮೈಸೂರು ನಗರದಲ್ಲಿಯೇ ಹೆಚ್ಚಾಗಿ ಡೆಂಘೆ ಪ್ರಕರಣ ಕಂಡುಬಂದಿರುವುದು ವರದಿಯಾಗಿದೆ. 200ಕ್ಕೂ ಹೆಚ್ಚು ಪ್ರಕರಣ ನಗರದಲ್ಲಿಯೇ ವರದಿಯಾಗಿವೆ. ರಾಮಕೃಷ್ಣನಗರ, ಸರಸ್ವತಿಪುರಂ, ಜನತಾನಗರ, ಹೆಬ್ಬಾಳು, ಕುವೆಂಪುನಗರದಲ್ಲಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಈ ಪೈಕಿ ರಾಮಕೃಷ್ಣನಗರದಲ್ಲಿ ಅತಿ ಹೆಚ್ಚು 38 ಪ್ರಕರಣಗಳು ಪತ್ತೆಯಾಗಿವೆ.


    ತಾಲೂಕುವಾರು ಮಾಹಿತಿ: ಮೈಸೂರು ನಗರ ಬಿಟ್ಟರೆ ಪಿರಿಯಾಪಟ್ಟಣ ತಾಲೂಕಿನಲ್ಲಿ 26, ಕೆ.ಆರ್.ನಗರ ತಾಲೂಕಿನಲ್ಲಿ 21 ಪ್ರಕರಣಗಳು ಕಂಡುಬಂದಿವೆ. 2017-18ನೇ ಸಾಲಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದ ಮೈಸೂರಿನ ಮಹದೇವಪುರ, ಕೆಸರೆ, ಗಿರಿಭೋವಿಪಾಳ್ಯ, ನಂಜನಗೂಡಿನ ನೀಲಕಂಠನಗರ, ಹುಣಸೂರಿನ ಶಬೀರ್‌ನಗರದಲ್ಲಿ ಪ್ರಕಣದ ಸಂಖ್ಯೆ ಕಡಿಮೆ ಇದೆ. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಅರಿವು ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ.

    ಎರಡನೇ ಸ್ಥಾನಕೇರುವ ಸಾಧ್ಯತೆ! ಡೆಂಘೆ ಪ್ರಕರಣಗಳ ಪೈಕಿ ಮೈಸೂರು ಜಿಲ್ಲೆ ಇಡೀ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಸದ್ಯ ಉಡುಪಿಯಲ್ಲಿ ಡೆಂೆ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದಿನ ಮೂರು ತಿಂಗಳು ತಲಾ 100 ಪ್ರಕರಣ ವರದಿಯಾಗುವ ಸಾಧ್ಯತೆಗಳಿವೆ. ಹಾಗಾದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನಕ್ಕೇರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಡೆಂೆ ಜತೆಗೆ ಜಿಲ್ಲೆಯಲ್ಲಿ ಈ ಬಾರಿ 17 ಚಿಕೂನ್‌ಗುನ್ಯಾ ಪ್ರಕರಣಗಳು ಕೂಡ ದಾಖಲಾಗಿವೆ.

    ಮುನ್ನೆಚ್ಚರಿಕೆ ಕ್ರಮಗಳೇನು?: ಮಳೆ ನೀರು ಒಂದೇ ಕಡೆ ಸಂಗ್ರಹವಾಗಿದ್ದರೆ, ಸೊಳ್ಳೆಗಳ ಸಂತತಿ ಹೆಚ್ಚಾಗಲಿದೆ. ಹಾಗಾಗಿ, ಮಳೆ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು. ಹೂವಿನಕುಂಡ, ಬಿಸಾಡಿದ ಟಯರ್, ತೊಟ್ಟಿ, ನೀರಿನ ಬಾಟಲಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಅಂಥ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಶುಚಿಗೊಳಿಸಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳ ತಾಣಗಳನ್ನು ಗುರುತಿಸಿ ನಾಶಪಡಿಸಬೇಕು. ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಇಂಥ ಸ್ಥಳಗಳನ್ನು ಗುರುತಿಸಿ, ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಸಂತತಿಯನ್ನು ನಾಶಪಡಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಎಸ್.ಚಿದಂಬರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.


    ಡೆಂಘೆ ಸೇರಿದಂತೆ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
    ಎಸ್.ಚಿದಂಬರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts