More

    ಕಸದಿಂದ ಅರಳಿದ ಉದ್ಯಾನ…!

    ರಾಣೆಬೆನ್ನೂರ: ಉತ್ತಮ ಆಲೋಚನೆ, ಸಾಧಿಸುವ ಛಲವಿದ್ದರೆ ಕಸದಿಂದಲೂ ರಸ ತೆಗೆಯಬಹುದು ಎಂಬ ಮಾತಿದೆ. ಇದನ್ನು ತಾಲೂಕಿನ ತುಮ್ಮಿನಕಟ್ಟಿ ಗ್ರಾಪಂ ಪಂಚಾಯಿತಿಯವರು ಮಾಡಿ ತೋರಿಸಿದ್ದಾರೆ.

    ಗ್ರಾಪಂ ವತಿಯಿಂದ ನಿರ್ವಿುಸಿದ ಘನತ್ಯಾಜ್ಯ ಘಟಕದಲ್ಲಿ ದೊರೆತ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್, ಗಾಜಿನ ಬಾಟಲ್, ಟೈರ್ ಹಾಗೂ ಇತರ ವಸ್ತುಗಳನ್ನು ಬಳಸಿಕೊಂಡು ಸುಂದರ ಉದ್ಯಾನ ನಿರ್ವಿುಸಿದ್ದಾರೆ. ಗ್ರಾಪಂ ಸಿಬ್ಬಂದಿಯ ಈ ಕಾರ್ಯ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ಇದರ ಫಲವಾಗಿ ‘ತುಮ್ಮಿನಕಟ್ಟಿ ಗ್ರಾಪಂ ಘನತ್ಯಾಜ್ಯ ಘಟಕ, ವೀಕ್ಷಣಾ ಘಟಕ’ ಎಂದು ಸರ್ಕಾರ ಘೊಷಣೆ ಮಾಡಿದೆ.

    ಅಲ್ಲದೆ, ರಾಜ್ಯದಲ್ಲಿಯೇ ಇದು ಮಾದರಿ ಉದ್ಯಾನ ಆಗಿದ್ದು, ಇನ್ನುಳಿದ ಗ್ರಾಪಂಯವರೂ ತುಮ್ಮಿನಕಟ್ಟಿ ಗ್ರಾಪಂ ಮಾದರಿಯಲ್ಲಿ ಘನತ್ಯಾಜ್ಯ ಘಟಕದ ನಿರುಪಯುಕ್ತ ವಸ್ತುಗಳನ್ನು ಬಳಸಿ ಉದ್ಯಾನ ನಿರ್ವಿುಸಿಕೊಳ್ಳುವಂತೆ ಸೂಚನೆ ನೀಡಿದೆ.

    ಕಸದಿಂದ ಅರಳಿದ ಉದ್ಯಾನ

    2019ನೇ ಸಾಲಿನಲ್ಲಿ ತಾಲೂಕಿನ ತುಮ್ಮಿನಕಟ್ಟಿ, ಕೋಡಿಯಾಲ, ಹಲಗೇರಿ, ಮೇಡ್ಲೇರಿ, ಕವಲೆತ್ತು ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕಾಗಿ ಸರ್ಕಾರ ಅನುಮೋದನೆ ನೀಡಿತ್ತು. ಇದನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತಂದ ತುಮ್ಮಿನಕಟ್ಟಿ ಗ್ರಾಪಂ ಪಿಡಿಒ ಅಂಬಿಕಾ ಎಂ. ಹಾಗೂ ಸಿಬ್ಬಂದಿ ಒಂದು ವರ್ಷ ಕಾಲ ಗ್ರಾಮದ ಕಸವನ್ನು ಒಂದೆಡೆ ಶೇಖರಣೆ ಮಾಡಿಟ್ಟಿದ್ದರು.

    ಅದರಲ್ಲಿ ದೊರೆತ ಗಾಜಿನ ಬಿಯರ್ ಬಾಟಲ್, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್, ವಿವಿಧ ವಾಹನಗಳ ಟೈರ್, ಪ್ಲಾಸ್ಟಿಕ್ ಪ್ಲೇಟ್, ಚಮಚಗಳನ್ನು, ಬಾಟಲ್​ಗಳ ಮುಚ್ಚಳ ಸೇರಿ ಇತರ ವಸ್ತುಗಳನ್ನು ಬಳಸಿ ಉದ್ಯಾನ ನಿರ್ವಿುಸಿದ್ದಾರೆ. 2 ಸಾವಿರಕ್ಕೂ ಅಧಿಕ ಬಿಯರ್ ಬಾಟಲ್​ಗಳಿಂದ ಬಾತುಕೋಳಿ, ಗಿಡಗಳಿಗೆ ಅಲಂಕಾರ, ಚಕ್ರ ಮಾಡಿದ್ದಾರೆ. ಪುಟ್​ಪಾತ್ ಉದ್ದಕ್ಕೂ ಇಟ್ಟಿಗೆ ಬದಲು ಬಾಟಲ್​ಗಳನ್ನು ಜೋಡಿಸಿಟ್ಟಿದ್ದು, ಜನರ ಗಮನ ಸೆಳೆಯುವಂತೆ ಮಾಡಿದೆ. ಟೈರ್​ಗಳಿಂದ ಹೂವಿನ ಕುಂಡ, ಬಾಟಲ್​ಗಳ ಮುಚ್ಚಳದಿಂದ ಪುಟ್​ಪಾತ್ ಸೇರಿ ವಿವಿಧ ಬಗೆಯ ಅಲಂಕಾರಗಳನ್ನು ಮಾಡಿದ್ದಾರೆ. ಉದ್ಯಾನ 1.30 ಎಕರೆ ವಿಸ್ತೀರ್ಣ ಹೊಂದಿದ್ದು, ಅಭಿವೃದ್ಧಿಗಾಗಿ 50 ಸಾವಿರ ರೂ. ಖರ್ಚು ಮಾಡಲಾಗಿದೆ.

    20 ಲಕ್ಷ ರೂ. ಬಿಡುಗಡೆ…

    ಗ್ರಾಪಂನವರ ಕಾರ್ಯವನ್ನು ಮೆಚ್ಚಿದ ರಾಜ್ಯ ಸರ್ಕಾರ ಘನತ್ಯಾಜ್ಯ ನಿರ್ವಹಣೆಗಾಗಿ 20 ಲಕ್ಷ ರೂ. ನೀಡಿದೆ. ಅದರಲ್ಲಿ ಘನತ್ಯಾಜ್ಯ ಸಂಗ್ರಹಕ್ಕೆ ಕಟ್ಟಡ ಹಾಗೂ ಮನೆ ಮನೆಗೆ ಮತ್ತು ಬೀದಿಗಳಲ್ಲಿ ಕಸ ನಿರ್ವಹಣೆಗಾಗಿ ಡಬ್ಬಿಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮನೆ ಮನೆಗೆ ಕಸ ಸಂಗ್ರಹಣೆಗಾಗಿ ಗ್ರಾಪಂ ತೆರಿಗೆ ಹಣದಲ್ಲಿಯೇ ಟಾಟಾ ಏಸ್ ವಾಹನ ಖರೀದಿಸಲಾಗಿದೆ.

    ನೈಸರ್ಗಿಕ ಶುದ್ಧ ನೀರು ಸರಬರಾಜು

    ಗ್ರಾಮಕ್ಕೆ ತುಂಗಭದ್ರಾ ನದಿ ಪಾತ್ರದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬಹುತೇಕ ಕಡೆ ನೀರನ್ನು ಕ್ಲೋರಿನ್, ಬ್ಲಿಚಿಂಗ್ ಬಳಸಿ ನೀರು ಶುದ್ಧೀಕರಿಸಲಾಗುತ್ತದೆ. ಆದರೆ, ತುಮ್ಮಿನಕಟ್ಟಿ ಗ್ರಾಪಂನಲ್ಲಿ ಮರಳು ಬಳಸಿಕೊಂಡು ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸಿ ಗ್ರಾಮಕ್ಕೆ ಸರಬರಾಜು ಮಾಡುತ್ತಿರುವುದು ವಿಶೇಷವಾಗಿದೆ.

    ತುಮ್ಮಿನಕಟ್ಟಿ ಗ್ರಾಪಂನವರು ಉತ್ತಮ ಪ್ಲಾನ್ ಮಾಡಿಕೊಂಡು ಘನತ್ಯಾಜ್ಯ ಘಟಕದ ನಿರುಪಯುಕ್ತ ವಸ್ತು ಬಳಸಿ ಉದ್ಯಾನ ನಿರ್ವಿುಸಿದ್ದಾರೆ. ಅದನ್ನು ರಾಜ್ಯ ಸರ್ಕಾರ ವೀಕ್ಷಣಾ ಘಟಕದ ಎಂದು ಘೊಷಿಸಿ, ರಾಜ್ಯದ ಇತರ ಗ್ರಾಪಂನವರು ಇದೇ ಮಾದರಿಯಲ್ಲಿ ಉದ್ಯಾನ ನಿರ್ವಿುಸಿಕೊಳ್ಳುವಂತೆ ಸೂಚಿಸಿದೆ.
    | ಎಸ್.ಎಂ. ಕಾಂಬಳೆ, ತಾಪಂ ಇಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts