More

    ಕಷ್ಟಗಳಿಂದ ಮುಕ್ತಿ ನೀಡುವ ಅವಿಮುಕ್ತೇಶ್ವರ, ಚೋಳರ ಕಾಲದ ದೇವರಿಗೆ ಪ್ರತಿವರ್ಷ ಉತ್ಸವ, ಮೇ 16ಕ್ಕೆ ರಥೋತ್ಸವ ಸಂಭ್ರಮ

    ಮಂಜುನಾಥ ಎಸ್.ಸಿ. ಹೊಸಕೋಟೆ
    ತಾಲೂಕಿನ ಅನೇಕ ಪುರಾತನ ದೇಗುಲಗಳ ಪೈಕಿ ನಗರದಲ್ಲಿನ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇಗುಲ ವಿಶೇಷವಾಗಿ ಗಮನ ಸೆಳೆಯುತ್ತಿದೆ. ತಾಲೂಕಿನ ಇತರ ದೇಗುಲಗಳಲ್ಲಿ ನಡೆಯುವ ಉತ್ಸವಗಳಲ್ಲೇ ಅವಿಮುಕ್ತೇಶ್ವರ ಸ್ವಾಮಿ ದೇವರ ಬ್ರಹ್ಮರಥೋತ್ಸವ ಅದ್ದೂರಿ ಹಾಗೂ ವಿಜೃಂಭಣೆಯಿಂದಲೇ ಪ್ರಸಿದ್ಧಿ ಪಡೆದಿದೆ.

    ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯಕ್ಕೆ 700 ವರ್ಷದ ಇತಿಹಾಸವಿದೆ. 15ನೇ ಶತಮಾನದ ಆಸುಪಾಸಿನಲ್ಲಿ ಈ ದೇವಾಲಯ ಅತ್ಯಂತ ನಿಷ್ಠೆ ಹಾಗೂ ಪೂಜಾ ವಿಧಿವಿಧಾನಗಳ ಧಾರ್ಮಿಕ ಕೈಂಕರ್ಯಗಳಿಗೆ ಹೆಸರುವಾಸಿಯಾಗಿದೆ. ಅಂದಿನ ಸುಗಟೂರು ಸಂಸ್ಥಾನದ ಪಾಳೇಗಾರ ತಮ್ಮೇಗೌಡ ಎಂಬುವರು ಶೈವಾಗಮ ಶೈಲಿಯಲ್ಲಿ ಈ ದೇವಾಲಯ ನಿರ್ಮಾಣ ಮಾಡಿ ಈ ಪ್ರದೇಶದ ಸುತ್ತಲೂ ಮಣ್ಣಿನಿಂದ ಕೂಡಿದ ಕೋಟೆ ನಿರ್ಮಿಸಿದ್ದರು. ಅಂದಿನಿಂದ ಇದುವರೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾವಿರಾರು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

    ನವಸಾಲ ನಗರಿ ಎಂಬ ಖ್ಯಾತಿ: ಈ ಭಾಗದಲ್ಲಿ 9 ಬೀದಿಗಳಲ್ಲಿ ವ್ಯಾಪಾರ ವಹಿವಾಟಿನ ಕೇಂದ್ರಗಳಿದ್ದ ಹಿನ್ನೆಲೆಯಲ್ಲಿ ಈ ಪಟ್ಟಣವನ್ನು ನವಸಾಲ ನಗರಿ ಎಂದು ಕರೆಯಲಾಗುತ್ತಿತ್ತು ಎಂಬ ಐತಿಹ್ಯವಿದೆ. ಕಾಲಾನಂತರ ಪಟ್ಟಣ ಪ್ರದೇಶ ಬೆಳೆದಂತೆ ಹೊಸ ಹೊಸತನಗಳಿಗೆ ತೆರೆದುಕೊಂಡಿದೆ. ಹಿಂದಿನ ಕೋಟೆಯ ನೆನಪಾಗಿ ನವಸಾಲ ನಗರಿಗೆ ಹೊಸಕೋಟೆ ಎಂಬ ಹೆಸರು ಮುನ್ನೆಲೆಗೆ ಬಂತು ಎನ್ನಲಾಗಿದೆ.

    ಲಕ್ಷಾಂತರ ಭಕ್ತರು ಭಾಗಿ: 1906ರಲ್ಲಿ ಅಂದಿನ ಪಾಳೇಗಾರರು, ಊರಿನ ಮೂರು ಪೇಟೆಯ ಗೌಡರು ಸೇರಿ ವೈಶಾಖ ಮಾಸದಲ್ಲಿ ಅವಿಮುಕ್ತೇಶ್ವರ ಸ್ವಾಮಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಕಲ್ಯಾಣೋತ್ಸವ, ವಸಂತೋತ್ಸವ, ಡೋಲೋತ್ಸವ, ಶಯನೋತ್ಸವ, ದೀಪೋತ್ಸವ ಮತ್ತಿತರ ಉತ್ಸವಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದವು. ಸುತ್ತಮುತ್ತಲ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಬ್ರಹ್ಮರಥೋತ್ಸವದ ಜತೆಗೆ ನಗರದಲ್ಲಿ ಮೂರು ದಿನ ಜಾತ್ರೆ ನಡೆಯುವುದರಿಂದ ಮೂರು ದಿನವೂ ಈ ಭಾಗದಲ್ಲಿ ಹಬ್ಬದ ಸಂಭ್ರಮ ಮನೆಮಾಡುತ್ತಿತ್ತು. ಈಗ ಮೇ 16ರಂದು ರಥೋತ್ಸವ ನೆರವೇರಲಿದೆ.

    ದೇಗುಲದ ವಿಶೇಷ: ದೇವಾಲಯದಲ್ಲಿ 3 ಗರ್ಭಗುಡಿಯಿದ್ದು ಅದರಲ್ಲಿ ಶ್ರೀ ಬಾಲ ತ್ರಿಪುರಸುಂದರಿದೇವಿ ಹಾಗೂಶ್ರೀ ವೀರಭದ್ರ ಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ, 700 ವರ್ಷಗಳ ಹಳೆಯದಾದ ವಿಗ್ರಹ ವಿಶೇಷವಾಗಿ ಭಕ್ತರನ್ನು ಸೆಳೆಯುತ್ತಿದೆ. ಪ್ರತಿ ನಿತ್ಯ ದೇವರಗೆ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿ ವೇಳೆ ಲಕ್ಷ ದೀಪೋತ್ಸವ, ಜಾಗರಣೆ ಮಹೋತ್ಸವ ಹಾಗೂ ಕಡಲೆ ಕಾಯಿ ಪರಿಷೆ ನಡೆಯುತ್ತದೆ, ದೀಪೋತ್ಸವದಲ್ಲಿ ಭಕ್ತರು ಲಕ್ಷ ದೀಪಗಳನ್ನು ಹಚ್ಚುವ ಮೂಲಕ ದೇವರ ಆರಾಧನೆ ಮಾಡುತ್ತಾರೆ.

    ಬಸ್ ಮಾರ್ಗ: ಬೆಂಗಳೂರಿನಿಂದ ಬಿಎಂಟಿಸಿ ಬಸ್ ಸೌಲಭ್ಯವಿದೆ, ಕೋಲಾರ, ಚಿಂತಾಮಣಿ, ಮಾಲೂರು ಕಡೆ ಸಾಗುವ ಎಲ್ಲ ಕೆಸ್ಸಾರ್ಟಿಸಿ ಬಸ್‌ಗಳ ಮೂಲಕ ಹೊಸಕೋಟೆ ತಲುಪಬಹುದು. ದೇವನಹಳ್ಳಿಯಿಂದ ಸೂಲಿಬೆಲೆ ಮಾರ್ಗವಾಗಿ ಬಸ್‌ಗಳ ಸಂಚಾರವಿದೆ, ಸರ್ಜಾಪುರದಿಂದ ಸಮೇತನಹಳ್ಳಿ ಮಾರ್ಗದ ಮೂಲಕ ಹೊಸಕೋಟೆ ತಲುಪಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts