More

    ಕಳಪೆ ಭತ್ತದ ಬೀಜ ವಿತರಣೆಗೆ ರೈತರ ಆಕ್ರೋಶ

    ಗುತ್ತಲ: ಕಳಪೆ ಭತ್ತದ ಬಿತ್ತನೆ ಬೀಜಗಳನ್ನು ನೀಡಿದ್ದಕ್ಕೆ ಆಕ್ರೋಶಗೊಂಡ ತೆರೆದಹಳ್ಳಿ ಗ್ರಾಮದ ರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ಜರುಗಿತು.

    ರೈತ ಸಂಪರ್ಕ ಕೇಂದ್ರದಿಂದ ಭತ್ತದ ಬೀಜ ಖರೀದಿಸಿಕೊಂಡು ಹೋಗಿದ್ದ ರೈತರು, ಮಡಿ ಮಾಡಿ ಸಸಿಗಳಿಗಾಗಿ ಬಿತ್ತನೆ ಮಾಡಲು ಚೀಲ ತೆರೆದಾಗ ಶೇ. 40ರಷ್ಟು ಜೊಳ್ಳು, ಕಪ್ಪಾಗಿರುವ ಹಾಗೂ ನುಸಿ ತಿಂದಿರುವ ಬೀಜಗಳು ಕಂಡುಬಂದಿವೆ. ಇದರಿಂದ ಆತಂಕಗೊಂಡ ರೈತರು ಬೀಜಗಳನ್ನು ಪರಿಶೀಲಿಸಿದಾಗ ಎಲ್ಲವೂ ಕಳಪೆಯಾಗಿವೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ ಅವರೊಂದಿಗೆ ವಾಗ್ವಾದ ನಡೆಸಿದರು. ಕೃಷಿ ಸಚಿವರ ಜಿಲ್ಲೆಯಲ್ಲಿಯೇ ಈ ರೀತಿ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪ್ರತಿಭಟನೆ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮುಖಂಡ ಪ್ರಭು ಹಾವನೂರ, ಸಹಾಯಕ ಕೃಷಿ ನಿರ್ದೇಶಕ ಆರ್.ಕೆ. ಕುಡಪಲಿ ಅವರಿಗೆ ಕರೆ ಮಾಡಿ, ನಮಗೆ ಗುಣಮಟ್ಟದ ಬಿತ್ತನೆ ಬೀಜ ಬೇಕು. ನೀವು ಇಲ್ಲಿಗೆ ಬಂದು ನಮ್ಮ ಸಮಸ್ಯೆ ಪರಿಹರಿಸಿ’ ಎಂದರು. ಆಗ ಕುಡಪಲಿ ಅವರು ‘ನಾನು ಸಭೆಯಲ್ಲಿದ್ದೇನೆ. ಬರಲು ಆಗುವುದಿಲ್ಲ. ಹಾವೇರಿಯಲ್ಲಿರುವ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

    ಇದಾಗಿ ಕೆಲವೇ ಗಂಟೆಗಳಲ್ಲಿ 25 ಕ್ವಿಂಟಾಲ್ ಬಿತ್ತನೆ ಬೀಜ (100 ಚೀಲ) ಹಾವೇರಿಯಿಂದ ಬಂತು. ಒಂದೇ ಕಂಪನಿಯ ಬೀಜಗಳಾಗಿದ್ದರಿಂದ ಅನುಮಾನಗೊಂಡ ರೈತರು ಪರಿಶೀಲಿಸಿದಾಗ ಅವುಗಳು ಕೂಡ ಕಳಪೆಯಾಗಿದ್ದವು. ಇದರಿಂದ ಪುನಃ ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಸೋಮವಾರದೊಳಗೆ ಬೇರೆ ಕಂಪನಿಯ ಗುಣಮಟ್ಟದ ಬೀಜಗಳನ್ನು ನೀಡದಿದ್ದರೆ ಮಂಗಳವಾರ ಎಲ್ಲ ರೈತರೊಂದಿಗೆ ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಪಿಎಸ್​ಐ ಶಂಕರಗೌಡ ಪಾಟೀಲ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನಪಡಿಸಿದರು. ಶಿವನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಪ್ರಕಾಶ ಹೊನ್ನನಗೌಡ್ರ, ಅಡಿವೆಪ್ಪ ಗೊರವರ, ಪ್ರಭು ಪಾಟೀಲ, ಬಸನಗೌಡ ಹೊನ್ನಗೌಡ್ರ, ಜಗದೀಶ ಹಳೆಪ್ಪಗೌಡ್ರ ಸೇರಿ ಅನೇಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts