More

    ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150 ‘ಎ’ ಮಾರ್ಗದ ಕೆಲವೆಡೆ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

    ರಾಷ್ಟ್ರೀಯ ಹೆದ್ದಾರಿ 150 ‘ಎ’ ರಸ್ತೆಯ ಗೊಲ್ಲಹಳ್ಳಿ, ಹರ್ತಿಕೋಟೆ, ಗನ್ನಾಯಕನಹಳ್ಳಿ (103ಗೇಟ್) ಹತ್ತಿರದ ಕಾಮಗಾರಿಗೆ ಬಳಸಿರುವ ದಪ್ಪ ಗಾತ್ರದ ಕಲ್ಲು ಮತ್ತು ಮಣ್ಣು, ಎರೆ ಮಣ್ಣು, ಹೆಂಡೆಗಳ ಮಿಶ್ರಣ ಯೋಗ್ಯವಲ್ಲದ ಕಾರಣ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿದರು.

    ಕಳಪೆ ಕಾಮಗಾರಿ ಕುರಿತು ಸ್ಥಳೀಯರು ಜಿಪಿಎಸ್ ಫೋಟೋ, ವಿಡಿಯೋ ಚಿತ್ರೀಕರಿಸಿ ಸಾಕ್ಷಿ ಸಮೇತ ಕಳುಹಿಸಿದ್ದು, ಸೂಕ್ತತನಿಖೆಗೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸಚಿವರ ಗಮನ ಸೆಳೆಯಲಾಗಿತ್ತು. ಗುಣಮಟ್ಟದ ಕಾಮಗಾರಿಗೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

    ಕೆರೆ ಮರಳು ಬಳಸದಂತೆ ಮನವಿ ಮಾಡಿದ್ದೇವೆ. ರಾಜಸ್ವ ಸಂಗ್ರಹಿಸುವಂತೆ ಕೋರಿದ್ದೇವೆ. ಕಾಮಗಾರಿಗೆ ಬಳಸುತ್ತಿರುವ ವಸ್ತುಗಳ ಕಳಪೆ ಗುಣಮಟ್ಟದ ಕುರಿತು ಪರಿಶೀಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜ್ಯ ನಿರ್ದೇಶಕರ ಕಚೇರಿಗೂ ಪತ್ರ ಬರೆದಿದ್ದೇವೆ. ಆದರೂ ಕ್ರಮವಹಿಸಿಲ್ಲ ಎಂದು ಬೇಸರಿಸಿದರು.

    ಇನ್ನಾದರೂ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಗುಣಮಟ್ಟದ ಕಾಮಗಾರಿ ನಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಏಳು ದಿನದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಪ್ರತಿಭಟಿಸಲು ಸಿದ್ಧ ಎಂದು ಎಚ್ಚರಿಸಿದರು.

    ರೈತಸಂಘದ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಹಿರಿಯೂರು ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ರಂಗಸ್ವಾಮಿ, ರಾಮರೆಡ್ಡಿ, ಬಸವರಾಜಪ್ಪ, ನಿಜಲಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts