More

    ಕಲ್ಲೊಡ್ಡು ಅಣೆಕಟ್ಟು ಬದಲು ಏತ ನೀರಾವರಿ

    ಸಾಗರ: ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕಲ್ಲೊಡ್ಡು ಹಳ್ಳ-ಹೊಸಕೆರೆಗೆ ಅಣೆಕಟ್ಟೆ ನಿರ್ಮಾಣ ಯೋಜನೆ ಕೈಬಿಟ್ಟು ಶಿಕಾರಿಪುರ ತಾಲೂಕಿನ ಗಡಿಯಲ್ಲಿ ಕೊರ್ಲಿಕೊಪ್ಪ ಏತ ನೀರಾವರಿ ಯೋಜನೆ ಕೈಗೆತ್ತಿಕೊಂಡಿದೆ.

    ಕೊರ್ಲಿಕೊಪ್ಪಕ್ಕೆ ಏತ ನೀರಾವರಿ ಯೋಜನೆ ಕೈಗೊಳ್ಳುವ ಸಂಬಂಧ ಬೃಹತ್ ನೀರಾವರಿ ನಿಗಮದ ಅಧಿಕಾರಿಗಳು ಬುಧವಾರ ಬರೂರು ಗ್ರಾಮಸ್ಥರ ಜತೆ ನಡೆಸಿದ ಸಭೆಯಲ್ಲಿ, ಈ ಭಾಗದ ಜಮೀನು ಮುಳುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳು ಮತ್ತು ಗ್ರಾಮಸ್ಥರ ಮಧ್ಯೆ ಕರಾರು ಮಾಡಿಕೊಳ್ಳಲಾಯಿತು.

    ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಸಮಿತಿ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರ ಯೋಜನೆ ಕೈಬಿಟ್ಟ ಬಗ್ಗೆ ಸಾರ್ವಜನಿಕವಾಗಿ ಅಧಿಕೃತ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.

    ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ಯೋಜನೆ ಕೈಬಿಟ್ಟಿರುವುದಾಗಿ ಸರ್ಕಾರ ಈವರೆಗೂ ಎಲ್ಲಿಯೂ ಘೊಷಣೆ ಮಾಡಿಲ್ಲ. ಇದರಿಂದ ಆತಂಕ ಸೃಷ್ಟಿಯಾಗಿದೆ ಎಂದರು. ಹೊಸದಾಗಿ ಏತ ನೀರಾವರಿ ಯೋಜನೆ ಕೈಗೊಳ್ಳುವ ಪ್ರಸ್ತಾಪ ಮಾಡುತ್ತಿದ್ದೀರಿ. ಇದರಿಂದ ನಮಗೆ ಇನ್ನಷ್ಟು ಆತಂಕ ಉಂಟಾಗುತ್ತಿದೆ. ಯೋಜನೆ ರೂಪುರೇಷೆ ಸಿದ್ಧಪಡಿಸದೆ ಸರ್ವೆ ನಡೆಸಬಾರದೆಂದು ಪಟ್ಟುಹಿಡಿದರು.

    ಕಲ್ಲೊಡ್ಡುಹಳ್ಳ ಹೊಸಕೆರೆ ಯೋಜನೆಯ ಸರ್ಕಾರದ ಮಂಜೂರಾತಿ ರದ್ದುಪಡಿಸಿದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು. ಹೊಸದಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಭೂಮಿ ಒಂದಿಂಚು ಮುಳುಗಡೆಯಾಗದಂತೆ ಸರ್ವೆ ನಡೆಸಿ, ವರದಿಯನ್ನು ಹೋರಾಟ ಸಮಿತಿ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮಸಭೆಯಲ್ಲಿ ಮಂಡಿಸಿ ಮುಂದಿನ ಕಾರ್ಯಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಒಪ್ಪಿ ಬೃಹತ್ ನೀರಾವರಿ ನಿಗಮದ ಅಧಿಕಾರಿಗಳು, ಕಲ್ಲೊಡ್ಡುಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಹೋರಾಟ ಸಮಿತಿ ಮತ್ತು ಗ್ರಾಮಸ್ಥರು ಜಂಟಿಯಾಗಿ ಸಹಿ ಹಾಕಿ ಕರಾರು ಮಾಡಿಕೊಂಡರು.

    ಭೂಮಿ ಮುಳುಗಡೆ ಆಗುವುದಿಲ್ಲ: ಈಗಾಗಲೇ ಕಲ್ಲೊಡ್ಡುಹಳ್ಳ ಹೊಸಕೆರೆ ಯೋಜನೆ ಕೈಬಿಡಲಾಗಿದೆ. ಇದೀಗ ಶಿಕಾರಿಪುರ ತಾಲೂಕಿನ ಗಡಿಯಲ್ಲಿ ಅಣೆಕಟ್ಟೆ ನಿರ್ವಿುಸುತ್ತಿದ್ದು ಇಲ್ಲಿಂದ ನೀರು ಮೇಲೆತ್ತಲು ಏತ ನೀರಾವರಿ ಯೋಜನೆಗೆ ಉದ್ದೇಶಿಸಲಾಗಿದೆ. ಈ ಯೋಜನೆಯಿಂದ ಬರೂರು ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಒಂದಿಂಚು ಭೂಮಿ ಸಹ ಮುಳುಗಡೆಯಾಗುವುದಿಲ್ಲ ಎಂದು ಶಿಕಾರಿಪುರ ಬೃಹತ್ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತ ಪ್ರಶಾಂತ್ ಭರವಸೆ ನೀಡಿದರು. ಸರ್ವೆ ಮಾಡಲು ಬಂದ ತಕ್ಷಣ ಜಮೀನು ಮುಳುಗಡೆಯಾಗುತ್ತದೆ ಎನ್ನುವ ಆತಂಕ ಬೇಡ. ಸರ್ವೆ ಸಂದರ್ಭದಲ್ಲಿ ಮತ್ತು ಸರ್ವೆ ನಂತರ ವರದಿ ಬಗ್ಗೆ ಗ್ರಾಮಸ್ಥರಿಗೆ ತಿಳಿಸಲಾಗುತ್ತದೆ. ಒಂದೊಮ್ಮೆ ನಿಮಗೆ ಜಮೀನು ಮುಳುಗಡೆಯಾಗುತ್ತದೆ ಎಂಬ ಅನುಮಾನವಿದ್ದರೆ ಸ್ಥಳೀಯ ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ. ಕದ್ದು ಮುಚ್ಚಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಯೋಜನೆಯಿಂದ ಅಕ್ಕಪಕ್ಕದ ಜಮೀನಿಗೂ ನೀರಾವರಿ ಸೌಲಭ್ಯ ಸಿಗುತ್ತದೆ ಎಂದು ಹೇಳಿದರು.

    ಕಲ್ಲೊಡ್ಡುಹಳ್ಳ ಹೊಸಕೆರೆ ನಿರ್ಮಾಣ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತ ಜಯಕುಮಾರ್, ವಿಶಾಲ್, ವಿಕಾಸ್, ಬೆಂಗಳೂರಿನ ಸರ್ವೆ ಅಧಿಕಾರಿ ಪರಶುರಾಮ್ ಹೋರಾಟ ಸಮಿತಿಯ ಟಾಕಪ್ಪ, ಸುರೇಶ್, ಎಂ.ಸಿ.ಪರಶುರಾಮಪ್ಪ, ಲವಪ್ಪ, ಕೆ.ಎಚ್.ಶಿವಪ್ಪ, ಪರಶಪ್ಪ, ನಾಗಪ್ಪ, ಮಂಜಪ್ಪ, ವೀರಪ್ಪ ಗೌಡ, ಕೆ.ಟಿ.ಗಣಪತಿ, ಅಣ್ಣಪ್ಪ, ಚಂದ್ರಶೇಖರ್, ತಿಮ್ಮಪ್ಪ ಕುಂದೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts