More

    ಕಲ್ಲು ಕಟ್ಟೆಯ ಸಮಾಧಿಗಳು ಪತ್ತೆ

    ಕೆ.ಆರ್.ಪೇಟೆ: ತಾಲೂಕಿನ ಸಿಂಧಘಟ್ಟ ಬಳಿಯ ಮುದಿಬೆಟ್ಟ, ನಾರಾಯಣದುರ್ಗ, ರಾಮದೇವರ ಬೆಟ್ಟ ಮತ್ತು ಸೂಲಗಿತ್ತಿ ಬೆಟ್ಟದಲ್ಲಿ ಶಿಲಾಯುಗದ ಕಾಲಕ್ಕೆ ಸೇರಿದ ಕಲ್ಲು ಕಟ್ಟೆಯ ಸಮಾಧಿಗಳನ್ನು ತಾಲೂಕಿನ ಹವ್ಯಾಸಿ ಸಂಶೋಧಕ, ಶಿಕ್ಷಕ ಸಂತೇಬಾಚಹಳ್ಳಿ ರಂಗಸ್ವಾಮಿ ಪತ್ತೆಹಚ್ಚಿ ಸಮಾಧಿಗಳ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ.

    ಶಿಲಾಯುಗದ ಕಾಲಘಟ್ಟದಲ್ಲಿ ಶವವನ್ನು ಹೂಳುವ ಅಥವಾ ಸುಡುವ ಸಂಸ್ಕಾರ ಪದ್ಧತಿ ಅಸ್ತಿತ್ವದಲ್ಲಿರಲಿಲ್ಲ. ಮೃತದೇಹವನ್ನು ಕಲ್ಲು ಚಪ್ಪಡಿ ಮೇಲೆ ಹಾಕಿ ಸುತ್ತಲೂ ಕಲ್ಲುಗಳನ್ನು ಜೋಡಿಸಿ ಕಲ್ಲು ಕಟ್ಟೆಗಳನ್ನು ನಿರ್ಮಿಸಿ ಸಂಸ್ಕಾರ ಮಾಡಲಾಗುತ್ತಿತ್ತು. ಕಲ್ಲು ಹೆಣ ಪದ್ಧತಿಯ 700ಕ್ಕೂ ಹೆಚ್ಚು ಶಿಲಾ ಸಮಾಧಿಗಳು ಈ ಪ್ರದೇಶದಲ್ಲಿ ಕಂಡುಬಂದಿವೆ.

    ಬೃಹತ್ ಶಿಲಾಯುಗ ನಾಗರಿಕತೆ ವಿಕಸನ ಹಂತದಲ್ಲಿರುವ ಕಾಲಘಟ್ಟವಾಗಿದ್ದು, ಕಲ್ಲು ಹೆಣ ಪದ್ಧತಿ, ನಿಲುವುಗಲ್ಲು ಪದ್ಧತಿ ಮತ್ತು ವೃತ್ತಾಕಾರದ ಕಲ್ಲು ಜೋಡಣೆ ಪದ್ಧತಿ ಎನ್ನುವ ಮೂರು ಬಗೆಯ ಶವಸಂಸ್ಕಾರ ಪದ್ಧತಿಗಳನ್ನು ಪ್ರಾಚ್ಯವಸ್ತು ಸಂಶೋಧಕರು ಗುರುತಿಸಿದ್ದಾರೆ. ಕಲ್ಲುಹೆಣ ಪದ್ಧತಿಯಲ್ಲಿ ಶವವನ್ನು ಕಲ್ಲು ಚಪ್ಪಡಿ ಮೇಲೆ ಮಲಗಿಸಿ ಸುತ್ತಲೂ ಕಲ್ಲಿನ ಕಟ್ಟೆಯನ್ನು ಕಟ್ಟಲಾಗುತಿತ್ತು. ನಿಲ್ಲುವುಗಲ್ಲು ಪದ್ಧತಿಯಲ್ಲಿ ಶವವನ್ನು ಸಂಸ್ಕರಿಸಿದ ಜಾಗದಲ್ಲಿ ಸ್ಮಾರಕದ ರೀತಿಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ನೆಡಲಾಗುತ್ತಿತ್ತು. ಶವಸಂಸ್ಕಾರದ ಜಾಗದ ಸುತ್ತ ವೃತ್ತಾಕಾರದಲ್ಲಿ ಕಲ್ಲುಗಳನ್ನು ನೆಲದಲ್ಲಿ ಹಾಸಿ, ನಡುವೆ ಕಲ್ಲು ನೆಡುವುದು ಮತ್ತೊಂದು ಬಗೆ. ಸಿಂಧಘಟ್ಟ ಬೆಟ್ಟದಲ್ಲಿ ಈ ಮೂರು ಬಗೆಯ ಶವಸಂಸ್ಕಾರ ಪದ್ಧತಿಯ ಅವಶೇಷಗಳೂ ಪತ್ತೆಯಾಗಿದ್ದು, ಸಂಶೋಧಕರನ್ನು ಕೈ ಬೀಸಿ ಕರೆಯುತ್ತಿವೆ.

    ಸಂತೇಬಾಚಹಳ್ಳಿ, ಚನ್ನಾಪುರ, ಅಂಬಿಗರಹಳ್ಳಿ ಮುಂತಾದ ಕಡೆ ಕಟ್ಟೆಹೆಣ ಮತ್ತು ಕಲ್ಲು ಶವಸಂಸ್ಕಾರ ಪದ್ಧತಿಯ ಸಮಾಧಿಗಳು ಕಂಡು ಬಂದರೆ ಅಪ್ಪನಹಳ್ಳಿ, ಜಾಗಿನಕೆರೆ, ಬಿ.ಬಿ.ಕಾವಲು ಮುಂತಾದ ಕಡೆ ನಿಲುವುಗಲ್ಲು ಪದ್ಧತಿಯ ಸಮಾಧಿಗಳನ್ನು ಕಾಣಬಹುದು. ಮುದಿಬೆಟ್ಟ ಸಾಲಿನಲ್ಲಿ ಕಲ್ಲು ಹೆಣ, ನಿಲುವುಗಲ್ಲು ಮತ್ತು ವೃತ್ತಾಕಾರದ ಕಲ್ಲು ಜೋಡಣೆ (ಸ್ಟೋನ್ ಸರ್ಕಲ್) ಪದ್ಧತಿಯ ಸಮಾಧಿಗಳು ಪತ್ತೆಯಾಗಿವೆ. ಶಿಲಾ ಸಮಾಧಿಗಳ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದರೆ ಅಂದಿನ ಕಾಲದ ಮಾನವನ ಜೀವನ ಪದ್ಧತಿ, ನಾಗರಿಕತೆಯ ವಿಕಸನ ಮತ್ತು ಪ್ರಾಚೀನರ ಸಾಂಸ್ಕೃತಿಕ ವಿಚಾರಗಳು ಬಯಲಿಗೆ ಬರುತ್ತವೆ. ಶಿಲಾ ಸಮಾಧಿಗಳನ್ನು ಹಾಳಾಗದಂತೆ ಕಾಪಾಡುವ ಕೆಲಸವಾಗಬೇಕು.
    ರಂಗಸ್ವಾಮಿ ಹವ್ಯಾಸಿ ಸಂಶೋಧಕ, ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts