More

    ಕಲ್ಯಾಣಿ, ಟ್ಯಾಂಕರ್​ನಲ್ಲಿ ಸಾವಿರಾರು ಗಣೇಶ ವಿಸರ್ಜನೆ

    ಚಿಕ್ಕಮಗಳೂರು: ನಗರದ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು 5ನೇ ದಿನವಾದ ಭಾನುವಾರ ಬಸವನಹಳ್ಳಿ ಕೆರೆಯ ಕಲ್ಯಾಣಿ, ಮೊಬೈಲ್ ಟ್ಯಾಂಕರ್​ಗಳಲ್ಲಿ ವಿಸರ್ಜಿಸಲಾಯಿತು. ಬಸವನಹಳ್ಳಿ ಹಿಂದು ಮಹಾಗಣಪತಿ ಸಮಿತಿ, ಬೋಳರಾಮೇಶ್ವರ ದೇವಾಲಯ, ವಿಜಯಪುರ, ಕೋಟೆ, ದೋಣಿಖಣ, ಗವನಹಳ್ಳಿ, ಗೃಹಮಂಡಳಿ ಬಡಾವಣೆ, ಗೌರಿಕಾಲುವೆ , ಕೆಂಪನಹಳ್ಳಿ, ಬೀಕನಹಳ್ಳಿ, ಹಂಪಾಪುರ ಸೇರಿದಂತೆ ನಗರದಲ್ಲಿ ನೂರಾರು ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭರತನಾಟ್ಯ, ನೃತ್ಯ, ಸಂಗೀತ, ಹರಟೆ, ಜಾದೂ, ಆರ್ಕೆಸ್ಟ್ರಾ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಕ್ತರು ಕುಟುಂಬದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ಬೋಳರಾಮೇಶ್ವರ ದೇವಾಲಯ ಆವರಣದ ಸಾರ್ವಜನಿಕ ಗಣಪತಿಗೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಕುಟುಂಬದೊಂದಿಗೆ ತೆರಳಿ ಪೂಜೆ ಸಲ್ಲಿಸಿದರು. ಬಸವನಹಳ್ಳಿ ಹಿಂದು ಮಹಾ ಗಣಪತಿ ಸೇವಾ ಸಮಿತಿ ಕಾರ್ಯಕರ್ತರು ಸಭಾಂಗಣದಲ್ಲಿ ಬಾಲಗಂಗಾಧರ ತಿಲಕ್, ಸ್ವಾಮಿ ವಿವೇಕಾನಂದ, ಸುಭಾಷ್​ಚಂದ್ರ ಬೋಸ್, ಭಗತ್ ಸಿಂಗ್, ಗಾಂಧೀಜಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರ ಫೋಟೋಗಳನ್ನು ಹಾಕಿದ್ದಾರೆ. ರಸ್ತೆಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ಹನುಮಂತಪ್ಪ ವೃತ್ತದಲ್ಲಿ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಮಹಾದ್ವಾರ ನಿರ್ವಿುಸಿದ್ದಾರೆ.

    ಮುಗುಳವಳ್ಳಿ ಗ್ರಾಮದಲ್ಲಿ ಸಾಂಪ್ರದಾಯದಂತೆ ಅರಿಶಿಣ ಗೌರಿ ಪ್ರತಿಷ್ಠಾಪಿಸಿ ಭಕ್ತರು ಸಾಂಪ್ರದಾಯಬದ್ಧವಾಗಿ ಗಣೇಶೋತ್ಸವ ಆಚರಿಸಿದ್ದಾರೆ. ಗೌರಿಯನ್ನು ಒಂದು ತಿಂಗಳ ಪ್ರತಿಷ್ಠಾಪಿಸಿ ವ್ರತಾಚರಣೆ ಮಾಡುತ್ತಾರೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರದಲ್ಲಿ ಸಾರ್ವಜನಿಕರು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಕೆರೆಕಟ್ಟೆಗಳಲ್ಲಿ ವಿಸರ್ಜಿಸಿದಾಗ ನೀರು ಕಲುಷಿತವಾಗುತ್ತಿತ್ತು. ಈ ಬಾರಿ ಪರಿಸರಕ್ಕೆ ಹಾನಿಯಾಗದಂತೆ ಮೂರ್ತಿಗಳ ವಿಸರ್ಜನೆಗೆ ನಗರಸಭೆ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    ಬಸವನಹಳ್ಳಿ ಕೆರೆಯ ಕಲ್ಯಾಣಿ ಬಳಿ ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ. ರಸ್ತೆ ಸಂಪೂರ್ಣ ಕೆಸರುಮಯವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು. ಇದನ್ನು ಮನಗಂಡ ಶಾಸಕರು ಅಧಿಕಾರಿಗಳೊಂದಿಗೆ ರ್ಚಚಿಸಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ರಸ್ತೆ ದುರಸ್ತಿ ಮಾಡಿಸಿದ್ದಾರೆ. ಕತ್ರಿ ಮಾರಮ್ಮ ದೇವಾಲಯದಿಂದ ಕಲ್ಯಾಣಿವರೆಗೂ ವಿದ್ಯುತ್ ದೀಪ ಅಳವಡಿಸಿಕೊಟ್ಟಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts