More

    ಕಲುಷಿತ ರಾಜಕಾರಣಕ್ಕೆ ಬೇಕು ಸರ್ಜರಿ

    ಕೋಲಾರ: ಹಣ ಬಲದಿಂದ ಶಾಸನ ಸಭೆಗೆ ಆಯ್ಕೆಯಾಗುವವರಿಗೆ ಕಡಿವಾಣ ಹಾಕಲು ಪ್ರಬಲ ಶಾಸನ ಜಾರಿ ಆಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಬಂಡವಾಳಶಾಹಿಗಳು ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಇದರಿಂದ ಪ್ರಾಮಾಣಿಕರು ಗೆಲ್ಲುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ವಿಧಾನಸಭೆ, ವಿಧಾನ ಪರಿಷತ್‌ಗೆ ಜನಪರ ಕಾಳಜಿ, ಬದ್ಧತೆ, ಪ್ರಾಮಾಣಿಕ ಸೇವಾ ಮನೋಭಾವ ಉಳ್ಳವರು ಪ್ರವೇಶಿಸಿದಲ್ಲಿ ಕಲುಷಿತಗೊಂಡಿರುವ ರಾಜಕಾರಣಕ್ಕೆ ಮೇಜರ್ ಸರ್ಜರಿ ಮಾಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ನಾನೂ ಸೇರಿ ಎಲ್ಲ ಅಭ್ಯರ್ಥಿಗಳು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಈ ಪದ್ಧತಿ ಮುಂದುವರಿದಲ್ಲಿ ಪ್ರಾಮಾಣಿಕರು ಜನಸೇವೆ ಮಾಡುವುದಕ್ಕೆ ಅವಕಾಶ ಸಿಗದಂತಾಗುತ್ತದೆ ಎಂದರು.

    ಹಣದ ರಾಜಕಾರಣಕ್ಕೆ ಲಗಾಮು ಹಾಕಲು ಚಿಂತಕರ ಚಾವಡಿ ಎಂದೇ ಕರೆಯಲ್ಪಟ್ಟಿರುವ ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸುವೆ. ಪರಿಷತ್‌ಗೆ ಈಗಾಗಲೇ ಶಿಕ್ಷಕರ, ಪದವೀಧರರ ಕ್ಷೇತ್ರದಿಂದ ಚುನಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸ್ಪರ್ಧಿಸುವಂತಾದರೆ ಚುನಾವಣೆಯ ಪಾವಿತ್ರ್ಯ ಕಾಪಾಡಿದಂತಾಗುತ್ತದೆ ಎಂದರು.

    ಹಣವಂತರ ಚಾವಡಿಯಾಗಿದೆ: ವಿಧಾನ ಪರಿಷತ್‌ಗೆ ತನ್ನದೇ ಆದ ಇತಿಹಾಸವಿದೆ, ಅನೇಕ ರಾಜಕೀಯ ಮುತ್ಸದ್ದಿಗಳು ಮೇಲ್ಮನೆ ಪ್ರವೇಶಿಸಿ ಜನಪರ ಶಾಸನ ರೂಪಿಸಲು ಮಾರ್ಗದರ್ಶನ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೇಲ್ಮನೆಗೆ ಹಣವಂತರು, ಬಂಡವಾಳ ಶಾಹಿಗಳು ಪ್ರವೇಶಿಸಲು ಅವಕಾಶ ಸಿಕ್ಕಿರುವುದರಿಂದ ಚಿಂತಕರ ಚಾವಡಿ ಹಣವಂತರ ಚಾವಡಿಯಾಗಿ ಮಾರ್ಪಡುತ್ತಿರುವುದು ಬೇಸರದ ಸಂಗತಿ ಎಂದರು.

    ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ಮೇಲ್ಮನೆಯ ಘನತೆ ಜತೆಗೆ ತಮ್ಮನ್ನು ಆಯ್ಕೆ ಮಾಡಿರುವ ಜನರ ಋಣ ತೀರಿಸಲು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ, 6 ವರ್ಷಗಳ ತಪಸ್ಸಿನ ಫಲದಿಂದ ಅನಿಲ್ ಕುಮಾರ್ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಅವ್ಯವಸ್ಥೆ ತಪ್ಪಿಸಿ ಒಳ್ಳೆಯ ಹಾದಿಯಲ್ಲಿ ಸಾಗಲು ತಮ್ಮ ಮಾರ್ಗದರ್ಶನ ಅಗತ್ಯ ಎಂದರು.

    ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ನಗರಸಭೆ ಸದಸ್ಯ ಅಂಬರೀಷ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

    ತಾಳ್ಮೆಯಿಂದ ಕಾದಿದ್ದೆ: ಕಳೆದ ಬಾರಿ ಸೋತಿದ್ದ ನಾನು ಯಾರ ಮೇಲೂ ಹಗೆತನ ತೋರಲಿಲ್ಲ. ಒಳ್ಳೆಯ ಅವಕಾಶ ಸಿಗಬಹುದೆಂದು 6 ವರ್ಷಗಳ ಕಾಲ ತಾಳ್ಮೆಯಿಂದ ಇದ್ದೆ, ಕಾಂಗ್ರೆಸ್‌ನ ಎಲ್ಲ ನಾಯಕರ ಒಗ್ಗಟ್ಟು ಮತ್ತು ಜನರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ನನಗೆ ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಂಡು ಪ್ರಗತಿ ಪರವಾಗಿ ನನ್ನ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವೆ ಎಂದು ಅನಿಲ್ ಕುಮಾರ್ ತಿಳಿಸಿದರು.

    ಕೋಲಾರ ನಗರಸಭೆಗೆ ಸುಸಜ್ಜಿತ ಕಟ್ಟಡ ಬೇಕಿದೆ, ಗ್ರಾಪಂಗಳಿಗೆ ಮೂಲಸೌಕರ್ಯ ಹೆಚ್ಚಿಸಬೇಕಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿರುವವರಿಗೆ ಚ್ಯುತಿ ಬಾರದಂತೆ ಕೆಲಸ ಮಾಡುವ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ.
    ಎಂ.ಎಲ್.ಅನಿಲ್ ಕುಮಾರ್, ಎಂಎಲ್‌ಸಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts