More

    ಕರ್ನಾಟಕದ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಆಕ್ಷೇಪ, ರೈತ ಸಂಘದ ನೇತೃತ್ವದಲ್ಲಿ ಹೋರಾಟ

    ಹೊಸೂರು: ಮೇಕೆದಾಟು ಅಣೆಕಟ್ಟು ಕಟ್ಟಲು ಕರ್ನಾಟಕದಲ್ಲಿ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ನಿಲುವನ್ನು ವಿರೋಧಿಸಿ ತಮಿಳುನಾಡು ರೈತ ಸಂಘದ 200ಕ್ಕೂ ಹೆಚ್ಚು ಕಾರ್ಯಕರ್ತರು ಹೊಸೂರಿನಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

    ತಮಿಳುನಾಡಿನ ಮುಖಜ ಭೂಮಿ ಪ್ರದೇಶದ ತಿರುವರೂರು, ತಿರುಚಿ, ನಮಕ್ಕಲ್, ಸೇಲಂ, ಧರ್ಮಪುರಿ, ಕೃಷ್ಣಗಿರಿ ಮೂಲಕ ಹೊಸೂರಿನವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು, ಕರ್ನಾಟಕದ ಗಡಿ ಅತ್ತಿಬೆಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ತನ್ಮೂಲಕ ಬೆಂಗಳೂರಿಗೆ ತೆರಳಿ ವಿಧಾನಸೌಧ ಮುತ್ತಿಗೆ ಹಾಕುವುದು ಅವರ ಉದ್ದೇಶವಾಗಿತ್ತು.

    ಸೇಲಂ ಪೊಲೀಸ್ ವಲಯದ ಡಿಐಜಿ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ 540ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇವರೆಲ್ಲರನ್ನೂ ತಡೆದರು. ಕೃಷ್ಣಗಿರಿ ಎಸ್‌ಪಿ ಸಾಯಿ ಚರಣ್ ತೇಜಸ್ವಿನಿ ಅವರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

    ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿ ಕುಮ್ಮಕ್ಕು:
    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯದಲ್ಲಿ ಪಾದಯಾತ್ರೆ ನಡೆಸಿ, ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದರು. ಕಾಂಗ್ರೆಸ್‌ನ ಪ್ರತಿಭಟನೆಯನ್ನು ಹತ್ತಿಕ್ಕಲು ಕರ್ನಾಟಕದ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಪ್ರತಿಭಟನೆಗೆ ಸಹಕರಿಸಿತು. ಕರೊನಾ ಸೋಂಕು ಹೆಚ್ಚಾಗುತ್ತಿರುವ ಅರಿವಿದ್ದರೂ ಅಲ್ಲಿನ ಸರ್ಕಾರ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿತು ಎಂದು ಆರೋಪಿಸಿ ತಮಿಳುನಾಡು ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ಮೇಕೆದಾಟು ವಿಷಯದಲ್ಲಿ ಒಗ್ಗಟ್ಟು: ರಾಜಕೀಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಲವು ಭಿನ್ನಾಭಿಪ್ರಾಯಗಳಿವೆ. ಚುನಾವಣೆಗಳಲ್ಲಿ ಪರಸ್ಪರ ಸ್ಪರ್ಧಿಸುವ ಈ ಪಕ್ಷಗಳು ಕರ್ನಾಟಕದಲ್ಲಿ ಮಾತ್ರ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸುವ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿವೆ. ಈ ವಿಷಯವಾಗಿ ಕರ್ನಾಟಕ ಮತ್ತು ತಮಿಳುನಾಡು ರೈತರನ್ನು ಪರಸ್ಪರ ಎತ್ತಿಕಟ್ಟಲು ಪ್ರಯತ್ನಿಸುತ್ತಿವೆ. ಇದನ್ನು ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.

    ಡಿಎಂಕೆ ವಿರುದ್ಧ ಆಕ್ರೋಶ: ಮೇಕೆದಾಟು ವಿಷಯವಾಗಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ತಮಿಳುನಾಡಿನ ಡಿಎಂಕೆ ಸರ್ಕಾರ ಆಗಲಿ, ಕಾಂಗ್ರೆಸ್ ಮುಖಂಡರಾಗಲಿ ಯಾರೊಬ್ಬರೂ ಅದನ್ನು ವಿರೋಧಿಸುವ ಗೋಜಿಗೂ ಹೋಗಲಿಲ್ಲ. ಇದು ಅಚ್ಚರಿಯ ಸಂಗತಿ ಎಂದು ತಮಿಳುನಾಡು ರೈತ ಸಂಘದ ಅಧ್ಯಕ್ಷ ಸಿ.ಆರ್. ಪಾಂಡಿಯನ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts