More

    ಕರ್ತವ್ಯ ಪಾಲಿಸದಿದ್ದರೆ ಮನೆಗೆ ಹೋಗಿ

    ರಾಣೆಬೆನ್ನೂರ: ನಗರದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅರುಣಕುಮಾರ ಪೂಜಾರ ಬುಧವಾರ ದಿಢೀರನೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

    ಈ ಸಮಯದಲ್ಲಿ ರೋಗಿಗಳು, ‘ನಮಗೆ ಸರಿಯಾದ ಚಿಕಿತ್ಸೆ ಕೊಡಲ್ಲ. ರಕ್ತ ಪರೀಕ್ಷೆ ಸೇರಿ ಇತರ ಚಿಕ್ಕಪುಟ್ಟ ಚಿಕಿತ್ಸೆಗೆ ಹೊರಗಡೆ ಚೀಟಿ ಬರೆದು ಕೊಡುತ್ತಾರೆ. ಸೊಳ್ಳೆ ಕಾಟಕ್ಕೆ ಬೇಸತ್ತು ಹೋಗಿದ್ದೇವೆ. ಏನಾದರೂ ಕೇಳಿದರೆ ಮನೆಗೆ ನಡೆ ಎಂದು ವೈದ್ಯರು ದಬ್ಬಾಳಿಕೆ ಮಾಡುತ್ತಾರೆ. ಸ್ವಚ್ಛತೆ ಕಾಪಾಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

    ಬಳಿಕ ಸಿಬ್ಬಂದಿಯ ಹಾಜರಾತಿ ಪುಸ್ತಕ, ಆಸ್ಪತ್ರೆ ಸ್ವಚ್ಛತೆ, ಮೇಲ್ಮಹಡಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಎಲ್ಲೆಂದರಲ್ಲಿ ಕಸ ಎಸೆದಿರುವುದು, ಗಬ್ಬು ವಾಸನೆ ಬೀರುತ್ತಿರುವುದನ್ನು ಕಂಡ ಶಾಸಕ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೋವಿಂದ, ಆರೋಗ್ಯಾಧಿಕಾರಿ ಸಂತೋಷ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ‘ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನಿಮಗೇನು ತೊಂದರೆ? ಸ್ವಚ್ಛತೆ ಕಾಪಾಡಲು ಗುತ್ತಿಗೆದಾರರಿಗೆ ಹೇಳಲು ಬರುವುದಿಲ್ಲವೇ? ಆರೋಗ್ಯ ಕೊಡುವ ಆಸ್ಪತ್ರೆಯಲ್ಲಿಯೇ ಸೊಳ್ಳೆಗಳ ಕಾಟವಿದ್ದರೆ, ರೋಗಿಗಳು ಹೇಗೆ ಆರಾಮವಾಗಬೇಕು. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ನೌಕರಿ ಬಿಟ್ಟು ಮನೆಗೆ ಹೋಗಿ. ಕೆಲಸ ಮಾಡುವವರನ್ನು ನಾವು ತರುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇನ್ಮುಂದೆ ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗಬಾರದು. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಬೇಕು. ಕೆಲಸಕ್ಕೆ ಬಂದ ಕೂಡಲೇ ಹಾಜರಾತಿ ಹಾಕಬೇಕು. ಮನಬಂದಂತೆ ಕೆಲಸ ಮಾಡುವುದನ್ನು ಬಿಟ್ಟು ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಕಾಮಗಾರಿ ಕಳಪೆಯಾದರೆ ಹುಷಾರ್!: ಆಸ್ಪತ್ರೆಯ ಮೇಲ್ಮಹಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಅರುಣಕುಮಾರ, ‘ಇಷ್ಟು ದಿನ ಹೇಗೆ ಕಾಮಗಾರಿ ಮಾಡಿದ್ದೀರೋ ಗೊತ್ತಿಲ್ಲ. ಮುಂದಿನ ಕಾಮಗಾರಿಯನ್ನು ಸರಿಯಾಗಿ ಮಾಡಬೇಕು. ಅಗತ್ಯದಷ್ಟು ಸಿಮೆಂಟ್, ಕಬ್ಬಿಣವನ್ನು ಬಳಸಬೇಕು. ಕಾಮಗಾರಿ ಕಳಪೆಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts