More

    ಕರ್ತವ್ಯದಲ್ಲಿದ್ದ ಕರೊನಾ ಸೇನಾನಿ ಸಾವು

    ನರಗುಂದ: ಕರೊನಾ ಕರ್ತವ್ಯದಲ್ಲಿ ನಿರತರಾಗಿದ್ದ 108 ಆಂಬುಲೆನ್ಸ್ ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

    ಕೊಣ್ಣೂರಿನ ಉಮೇಶ ಫಕೀರಪ್ಪ ಹಡಗಲಿ (37) ಮೃತಪಟ್ಟ ದುರ್ದೈವಿ. ಇವರು 9 ವರ್ಷಗಳ ಹಿಂದೆ ಜೆವಿಕೆ ಸಂಸ್ಥೆಯ 108 ತುರ್ತು ಚಿಕಿತ್ಸಾ ವಾಹನ ಚಾಲಕರಾಗಿ ಸೇರಿಕೊಂಡಿದ್ದರು. 8 ವರ್ಷ ಬೆಂಗಳೂರು, ಚಿತ್ರದುರ್ಗ, ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ, ಒಂದು ವರ್ಷದಿಂದ ಸ್ವಗ್ರಾಮ ಕೊಣ್ಣೂರಿನಲ್ಲಿ ಸೇವೆ ಮುಂದುವರಿಸಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. 9 ಗಂಟೆ ಸುಮಾರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಪರಿಸ್ಥಿತಿ ಕೈಮೀರುವುದನ್ನರಿತ ಉಮೇಶ ಅವರು ತಕ್ಷಣ ತನ್ನ ಮತ್ತೊಬ್ಬ ಸಹೋದ್ಯೋಗಿ (ಚಾಲಕ) ಪ್ರಕಾಶ ಭೋಗಾರ, ಶರಣಪ್ಪ ಮಾದರ ಅವರಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಅದೇ 108 ವಾಹನದಲ್ಲಿ ರಾಮದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿರುವ ಅಲ್ಲಿನ ವೈದ್ಯರು ಉಮೇಶ ಅವರಿಗೆ ಮಿದುಳು ರಕ್ತಸ್ರಾವವಾಗಿದ್ದು ತಕ್ಷಣವೇ ಧಾರವಾಡ ಎಸ್​ಡಿಎಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಉಮೇಶ ಕೊನೆಯುಸಿರೆಳೆದಿದ್ದಾರೆ.

    ಅವರಿಗೆ ಪತ್ನಿ ಜ್ಯೋತಿ, 13 ವರ್ಷದ ವಿನಾಯಕ, 8 ವರ್ಷದ ವಿಶ್ವ ಎಂಬ ಇಬ್ಬರು ಪುತ್ರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts