More

    ಕರೊನಾ 203 ಪ್ರಕರಣ ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 203 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 14,106ಕ್ಕೇರಿದೆ. ಈವರೆಗೆ 11,297 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2313 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಈವರೆಗೆ 406 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಶುಕ್ರವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 45 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಅಂದಾಜು 50 ಪ್ರದೇಶಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಕಲಘಟಗಿ ತಾಲೂಕಿನ ವಿದ್ಯಾನಗರ, ಬಿ.ಗುಡಿಹಾಳ, ನವಲಗುಂದದ ತಿರ್ಲಾಪುರ, ಇನಾಂಕೊಪ್ಪ, ಕುಂದಗೋಳದ ಗುರವಿನಹಳ್ಳಿ, ಪಶುಪತಿಹಾಳ, ಬೆಳ್ಳಿಗಟ್ಟಿ, ಕೊಂಕಣ ಕುರಹಟ್ಟಿ, ಕನಕೂರ,ಸಂಶಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

    ಮಹಿಳೆ ಶವಸಂಸ್ಕಾರಕ್ಕೆ ಮೊರಬ ಗ್ರಾಮಸ್ಥರಿಂದ ಅಡ್ಡಿ

    ನವಲಗುಂದ: 60 ವರ್ಷದ ಮಹಿಳೆಯ ಶವವನ್ನು ಕಿಮ್ಸ್​ನಿಂದ ಮೊರಬ ಗ್ರಾಮಕ್ಕೆ ತಂದ ವೇಳೆ ಕರೊನಾ ಸೋಂಕು ತಗುಲಿದೆ ಎಂದು ಸಂಶಯಗೊಂಡ ಗ್ರಾಮಸ್ಥರು ಶವಸಂಸ್ಕಾರಕ್ಕೆ ಅಡ್ಡಿಪಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಕಿಮ್ಸ್​ನಿಂದ ತಂದ ಶವದ ಬಳಿ ಆಸ್ಪತ್ರೆಯ ಸಿಬ್ಬಂದಿ ಇರಲಿಲ್ಲ. ಪಿಪಿಇ ಕಿಟ್ ಧರಿಸಿರಲಿಲ್ಲ. ಅಲ್ಲದೆ, ಶವ ತಂದ ವಾಹನಕ್ಕೆ ಐದು ಸಾವಿರ ರೂಪಾಯಿ ಕೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಸರ್ಕಾರಿ ಆಸ್ಪತ್ರೆಯಿಂದ ತಂದ ಶವಗಳನ್ನು ಸಂಸ್ಕಾರ ಮಾಡಲು ಸರ್ಕಾರವೇ ಹಣ ನೀಡುತ್ತದೆ. ನೀವೇಕೆ ಹಣ ಕೇಳುತ್ತಿದ್ದೀರಿ ಎಂದು ಚಾಲಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಸರ್ಕಾರಿ ಆಸ್ಪತ್ರೆಯಿಂದ ಗ್ರಾಮಕ್ಕೆ ತಂದ ಶವಗಳನ್ನು ಮುಂಜಾಗ್ರತೆ ಇಲ್ಲದೆ ಸಂಸ್ಕಾರ ಮಾಡಲಾಗುತ್ತಿದೆ. ಜತೆಗೆ ಯಾವ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬುದನ್ನು ತಿಳಿಸುತ್ತಿಲ್ಲ. ಇದರಿಂದ ಕರೊನಾ ಬಗ್ಗೆ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಹುಟ್ಟಿದೆ ಎಂದರು.

    ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ನವೀನ ಹುಲ್ಲೂರ, ಮಹಿಳೆ ಕರೊನಾದಿಂದ ಮೃತಪಟ್ಟಿಲ್ಲ. ಗ್ರಾಮಸ್ಥರು ಭಯಪಡಬಾರದು. ಆಂಬುಲೆನ್ಸ್​ನಲ್ಲಿ ಶವ ತಂದರೆ ಮೃತರ ಕುಟುಂಬಸ್ಥರಲ್ಲಿ ಹಣ ಕೇಳಬಾರದೆಂದು ಸೂಚಿಸಿದ್ದೇವೆ’ ಎಂದರು.

    ಬಳಿಕ ಶವ ಸಂಸ್ಕಾರ ನೆರವೇರಿಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts