More

    ಕರೊನಾ ಸೋಂಕಿತ ಗುಣಮುಖ

    ವಿಜಯವಾಣಿ ಸುದ್ದಿಜಾಲ ಕಾರವಾರ: ಭಟ್ಕಳ ಮೂಲದ 26 ವರ್ಷದ ಕರೊನಾ ಸೋಂಕಿತ (ಪಿ-98) ಗುಣಮುಖರಾಗಿದ್ದಾರೆ. ಶನಿವಾರ ಇಲ್ಲಿನ ಐಎನ್​ಎಸ್ ಪತಂಜಲಿ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ದುಬೈದಿಂದ ತನ್ನ ಸಹೋದರನ ಜತೆ ಭಟ್ಕಳಕ್ಕೆ ಆಗಮಿಸಿದ್ದ ಅವರಿಗೆ ಕರೊನಾ ಇರುವುದು ಮಾ.31 ರಂದು ಖಚಿತವಾಗಿತ್ತು.

    ಇದುವರೆಗೆ ಜಿಲ್ಲೆಯ ಭಟ್ಕಳ ಮೂಲದ 11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 9 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಹಾಗೂ ಆಕೆಯ ಪತಿ ಕಾರವಾರದ ಐಎನ್​ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. 16 ಜನರನ್ನು ಕರೊನಾ ಶಂಕೆಯ ಹಿನ್ನೆಲೆಯಲ್ಲಿ ಐಸೋಲೇಶನ್​ನಲ್ಲಿ ಇರಿಸಲಾಗಿದೆ.

    20ರ ನಂತರ ಕೊಂಚ ನಿಯಮ ಸಡಿಲಿಕೆ: ಜಿಲ್ಲೆಯ 11 ತಾಲೂಕುಗಳಲ್ಲಿ ಏ.20 ರ ನಂತರ ಸರ್ಕಾರದ ಸೂಚನೆಯಂತೆ ಲಾಕ್​ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಓಡಾಟಕ್ಕೆ ಅವಕಾಶ ನೀಡಿದರೂ ಜಿಲ್ಲೆಯ ಜನರು ಹೊರ ಊರುಗಳಿಗೆ ಹೋಗುವಾಗ ಕಡ್ಡಾಯವಾಗಿ ಪಾಸ್ ಪಡೆದುಕೊಂಡು ಹೋಗಬೇಕು. ಮತ್ತು ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ವಿವರವನ್ನು ಸ್ಥಳೀಯ ಆಡಳಿತ, ಪೊಲೀಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡಬೇಕು. ತಹಸೀಲ್ದಾರ್ ಅನುಮತಿ ಇಲ್ಲದೆ ಯಾರೂ ಹೊಸಬರಿಗೆ ಬಾಡಿಗೆ ನೀಡಬಾರದು. ಹೋಟೆಲ್ ರೆಸಾರ್ಟ್​ಗಳಿಗೂ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

    ಭಟ್ಕಳಕ್ಕಿಲ್ಲ ವಿನಾಯಿತಿ?: ಸರ್ಕಾರ ಘೊಷಿಸಿದ ವಿನಾಯಿತಿಗಳನ್ನು ಭಟ್ಕಳ ತಾಲೂಕು ವ್ಯಾಪ್ತಿಗೆ ಅನ್ವಯ ಮಾಡುವುದಿಲ್ಲ ಎಂದು ಉಪವಿಭಾಗಾಧಿಕಾರಿ ಭರತ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಯಾವುದೇ ಮಧ್ಯಂತರ ಆದೇಶ ಮಾಡದೇ ಇದ್ದಲ್ಲಿ ಹಾಲಿ ಇರುವ ಪರಿಸ್ಥಿತಿಯನ್ನು ಮುಂದುವರಿಸಲಾಗುವುದು. ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೊಷಿಸಲಾಗಿದೆ. ಕರೊನಾ ಪ್ರಕರಣಗಳಿವೆ. ಇದರಿಂದ ಸದ್ಯ ಇರುವ ಮಾದರಿಯಲ್ಲೇ ಲಾಕ್​ಡೌನ್ ನಿಯಮವನ್ನು ಮೇ 3 ರವರೆಗೆ ಮುಂದುವರಿಸಲಾಗುವುದು ಎಂದಿದ್ದಾರೆ.

    ನಿಯಮ ಉಲ್ಲಂಘನೆ ಪ್ರಕರಣ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚೋಡಿಯಿಂದ ಏ.14ರಂದು ಹೊರಟು ಸಿದ್ದಾಪುರ ಇಂದಿರಾ ನಗರಕ್ಕೆ ಬಂದು ಕರೊನಾ ಲಾಕ್ ಡೌನ್ ಸೂಚನೆ ಅನುಸರಿಸದೇ ಏ.17ರಂದು ತಿರುಗಾಡುತ್ತಿದ್ದ ವಾಸುದೇವ ಅಪ್ಪಾಜಿಗೋಳ ಅವರ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಸುದೇವ ಅಪ್ಪಾಜಿಗೋಳ ಅವರು ಸಿದ್ದಾಪುರ ಅವರಗುಪ್ಪದಲ್ಲಿರುವ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯರಾಗಿದ್ದಾರೆ.

    ತಮಿಳುನಾಡಿನಿಂದ ಬಂದವರು: ತಮಿಳುನಾಡಿನ ಪರ್ತಿಪೇಟೆಯಿಂದ ಏ.15ರಂದು ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಶಿಗೇಹಳ್ಳಿಗೆ ಬಂದ ಸ್ಥಳೀಯರಾದ ದಿನೇಶ ರಾಜು ಶೆಟ್ಟಿ, ಮಧು ಕೃಷ್ಣಪ್ಪ ಗಂಗೆಮತ ಹಾಗೂ ರವಿ ಮಂಜುನಾಥ ನಾಯ್ಕ ಇವರು ಕರೊನಾ ಲಾಕ್ ಡೌನ್ ಉಲ್ಲಂಘಿಸಿ ಶುಕ್ರವಾರ ಶಿಗೇಹಳ್ಳಿ ಶಾಲೆಯ ಹತ್ತಿರ ತಿರುಗಾಡುತ್ತಿದ್ದ ಇವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಲಾಕ್​ಡೌನ್ ಉಲ್ಲಂಘಿಸಿದ ಆರೋಪದ ಮೇಲೆ ಭಟ್ಕಳ ನಗರ ಠಾಣೆ ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಶ್ವನಾಥ ಶೇಟ್, ಹೃತೀಕ್ ಶೇಟ್, ರಮಾನಂದ ಶೇಟ್, ಮಾರುತಿ ಶೇಟ್, ವೆಂಕಟೇಶ ಶೇಟ್, ಜನಾರ್ದನ ಶೇಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರು ಮಾಸ್ಕ್ ಹಾಕದೇ ಗುರುವಾರ ಮಧ್ಯಾಹ್ನ ಸೋನಾರಕೇರಿಯ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದಾಗ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್​ಐ ಎಚ್.ಬಿ. ಕುಡಗುಂಟಿ ಪ್ರಕರಣ ದಾಖಲಿಸಿ, ಕ್ವಾರಂಟೈನ್ ಸೀಲ್ ಹೊಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts