More

    ಕರೊನಾ ಮುಂಜಾಗ್ರತಾ ಕ್ರಮಕ್ಕೆ ಡಿಸಿ ಸೂಚನೆ

    ಹಾವೇರಿ: ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಕರೊನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಇದುವರೆಗೆ ಕರೊನಾ ವೈರಸ್​ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವೈರಸ್ ಪೀಡಿತರ ಮೇಲೆ ನಿಗಾ ಇರಿಸಲಾಗಿದೆ. ಕರೊನಾ ವೈರಸ್ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಜಿಲ್ಲೆಗೆ ಆಗಮಿಸಿರುವವರನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಅವರಲ್ಲಿ ವೈರಸ್ ಪತ್ತೆಯಾಗದೇ ಇದ್ದರೂ, 4 ವಾರಗಳ ಕಾಲ ನಿಗಾದಲ್ಲಿರಿಸಬೇಕು ಎಂದರು.

    ವೈರಸ್ ಪತ್ತೆಯಾಗಿರುವ ದೇಶಗಳಿಗೆ ಸದ್ಯ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೇ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದರು.

    ಕರೊನಾ ವೈರಸ್ ಪೀಡಿತರ ತಪಾಸಣೆಗಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸಿಎಚ್​ಸಿಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ಆರಂಭಿಸಲಾಗಿದೆ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡಬೇಕು. ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಕರೊನಾ ವೈರಸ್ ತಡೆಗೆ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ದಿನ ಸಂಜೆ 6 ಗಂಟೆಯೊಳಗಾಗಿ ಡಿಎಚ್​ಒ ವರದಿ ಸಲ್ಲಿಸಬೇಕು ಎಂದರು.

    ಕರೊನಾ ವೈರಸ್ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಕುರಿತಂತೆ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಆರೋಗ್ಯ, ಸಾರಿಗೆ, ಶಿಕ್ಷಣ ಇಲಾಖೆ ವ್ಯಾಪಕ ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿಕುಮಾರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಎಸಿಗಳಾದ ಡಾ. ಎನ್. ತಿಪ್ಪೇಸ್ವಾಮಿ, ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ, ಡಾ. ಸಂತೋಷ ಇತರರಿದ್ದರು.

    ವೈದ್ಯಾಧಿಕಾರಿ, ದಾದಿಯರಿಗೆ ತರಬೇತಿ

    ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ನಾಗರಾಜ ನಾಯಕ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ತಲಾ ಒಂದು ಬೆಡ್​ನಂತೆ ಐದು ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ತಲಾ ಎರಡು ಕೊಠಡಿಗಳು, ಜಿಲ್ಲೆಯ ಆರು ಸಿಎಚ್​ಸಿಗಳಲ್ಲಿ ಆರು ಕೊಠಡಿಗಳು ಸೇರಿ ಒಟ್ಟಾರೆ 27 ಕೊಠಡಿಗಳನ್ನು ಜಿಲ್ಲೆಯಲ್ಲಿ ಕರೊನಾ ಚಿಕಿತ್ಸೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಜ್ಜುಗೊಳಿಸಲಾಗಿದೆ. 24*7 ಕೆಲಸ ಮಾಡಲು ವೈದ್ಯಾಧಿಕಾರಿಗಳು ಹಾಗೂ ದಾದಿಯರನ್ನು ನೇಮಿಸಿ ತರಬೇತಿ ಸಹ ನೀಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts