More

    ಕರೊನಾ ಭೀಕರತೆಗೆ ಸಾಕ್ಷಿಯಂತಿತ್ತು ಹಸಿವು

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಆಹಾರ ಹುಡುಕಿ ತಿನ್ನುತ್ತಿದ್ದ ಮನಕಲುಕುವ ದೃಶ್ಯ ಕರೊನಾ ಭೀಕರತೆ ಸಾಕ್ಷೀಯಂತಿತ್ತು.

    ಪಟ್ಟಣದ ಕೇಂದ್ರ ಭಾಗ ಭಾನು ಮಾರ್ಕೆಟ್​ನಲ್ಲಿ ಪುರಸಭೆಯವರು ಸಂಗ್ರಹಿಸಿದ್ದ ತ್ಯಾಜ್ಯದ ರಾಶಿಯಲ್ಲಿ ಸೋಮವಾರ ರಾತ್ರಿ ಯಾರೋ ತಿಂದು ಬಿಸಾಕಿದ ಪ್ಲಾಸ್ಟಿಕ್ ಚೀಲದಲ್ಲಿದ್ದ ಆಹಾರ ತಿನ್ನುತ್ತಿದ್ದ ದೃಶ್ಯ ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು. ಯಾರಾದರೂ ಅವನಿಗೆ ಏನಾದರೂ ಕೊಡಿಸಬೇಕೆಂದರೆ ಎಲ್ಲವೂ ಬಂದ್ ಆಗಿದ್ದವು. ಯಾರು ಮಾತನಾಡಿಸಿದರೂ ಅವನಲ್ಲಿದ್ದ ಹಸಿವು ಮಾತ್ರ ಯಾವುದನ್ನೂ ಗಮನಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಈ ಮಾರ್ಗವಾಗಿ ಹಾದು ಹೋಗುವ ವಿಜಯವಾಣಿ ಪ್ರತಿನಿಧಿ ಕೂಡಲೆ ಮನೆಗೆ ಹೋಗಿ ಒಂದಿಷ್ಟು ಉಪ್ಪಿಟ್ಟು, ನೀರು ತಂದು ಕೊಟ್ಟಾಗ ಆತನಿಗಾದ ಆನಂದ ಅಷ್ಟಿಷ್ಟಲ್ಲ.

    ಅಲ್ಲಿಂದ ಎದ್ದು ಬೇರೆ ಸ್ವಚ್ಛವಾದ ಸ್ಥಳದಲ್ಲಿ ಕುಳಿತು ಕೊಟ್ಟ ಆಹಾರ ಸೇವಿಸಿ ನೀರು ಕುಡಿದಾಗಲೇ ಆತ ತಾನು ಬಿಹಾರ ಮೂಲದವನು ಹೆಸರು ಕರೀಂಬೀರ್ ಎಂದು ಹೇಳಿದನು. ಕನ್ನಡ ಬಾರದ್ದರಿಂದ ಹಿಂದಿ ಭಾಷೆಯಲ್ಲಿ ಮಾತನಾಡಿಸಿದಾಗ ಹಸಿವಾಗಿತ್ತು ಎಲ್ಲಿಯೂ ನನ್ನನ್ನು ಇರಲು ಬಿಡುತ್ತಿಲ್ಲ ಎಂದು ಹೇಳಿದನಷ್ಟೇ.

    ಕರೊನಾ ಮಹಾಮಾರಿಯಿಂದ ಉಂಟಾಗಿರುವ ಭೀಕರ ಪರಿಸ್ಥಿಗೆ ಸಾಕ್ಷಿಯಂತಿರುವ ಈ ಸುದ್ದಿ ದ್ವಿಗ್ವಿಜಯದಲ್ಲಿ ಪ್ರಸಾರವಾದ ಬೆನ್ನಲ್ಲೆ ಸ್ಥಳೀಯ ಪೊಲೀಸರು ಪಟ್ಟಣದಲ್ಲಿ ಇರುವ ಇಂತಹ ಹಲವಾರು ಭಿಕ್ಷುಕರು, ಅನಾಥರು, ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ಆಹಾರ ಪೊಟ್ಟಣ ಮತ್ತು ನೀರಿನ ಬಾಟಲ್ ವಿತರಿಸಿ ಮಾನವೀಯತೆ ಮೆರೆದರು.

    ಕಿಲ್ಲರ್ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಹೋಟೆಲ್, ಬೀದಿಬದಿ ಆಹಾರ ಪದಾರ್ಥ ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ದುಡಿಯುವ ವರ್ಗದ ಜನರೇ ಪರದಾಡುವ ಸ್ಥಿತಿಯಲ್ಲಿದ್ದಾಗ ಭಿಕ್ಷುಕರು, ಅನಾಥರು, ಮಾನಸಿಕ ಅಸ್ವಸ್ಥರ ಗೋಳು ಅರಣ್ಯರೋಧನವಾಗಿರುವುದು ವಾಸ್ತವ.

    ಪಟ್ಟಣದಲ್ಲಿರುವ ದೂದಪೀರಾಂ ದರ್ಗಾ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ಈ ಭಾಗದ ಹೆಸರಾಂತ ಧಾರ್ವಿುಕ ಕ್ಷೇತ್ರವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುತ್ತಾರೆ. ಪ್ರತಿ ಅಮಾವಾಸ್ಯೆಗೆ ಸಾವಿರಾರು ಸಂಖ್ಯೆಯ ಜನರು ತಮ್ಮ ಅನಾರೋಗ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿಗಾಗಿ ಬರುತ್ತಾರೆ. ಮಾನಸಿಕ ಅಸ್ವಸ್ಥರನ್ನು ಕರೆ ತಂದ ಕುಟುಂಬದವರಲ್ಲಿ ಕೆಲವರು ಅವರನ್ನು ಇಲ್ಲಿಯೇ ಬಿಟ್ಟು ಹೋದರೆ ಗುಣವಾಗುತ್ತಾನೆ ಎಂಬ ನಂಬಿಕೆಯಿಂದಲೂ ಅಥವಾ ಅವರನ್ನು ನಿಭಾಯಿಸುವ ತೊಂದರೆಯಿಂದ ತಪ್ಪಿಸಿಕೊಳ್ಳಲೂ ಇಲ್ಲಿಯೇ ಬಿಟ್ಟು ಹೋಗುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts