More

    ಕರೊನಾ ನಿರ್ವಹಣೆಯಲ್ಲಿ ಅವ್ಯವಹಾರ

    ಕೋಲಾರ: ಕರೊನಾ ನಿರ್ವಹಣೆಯಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದ್ದು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕೆಪಿಸಿಸಿ ಹಮ್ಮಿಕೊಂಡಿದ್ದ ಸ್ಪೀಕ್ ಆಫ್ ಕರ್ನಾಟಕ ಆಂದೋಲನ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಕರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದಲ್ಲದೆ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಭ್ರಷ್ಟಾಚಾರವೆಸಗಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದರು.

    ಕರೊನಾ ತಡೆಗಟ್ಟಲು ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದೆ, ಹಾಗೆಂದ ಮಾತ್ರಕ್ಕೆ ಹಗರಣವನ್ನು ಪ್ರಶ್ನಿಸದೇ ಇರಲು ಸಾಧ್ಯವಿಲ್ಲ, ವಿವಿಧ ಇಲಾಖೆ ಮೂಲಕ ಖರ್ಚು ಮಾಡಿರುವ 4167 ಕೋಟಿ ರೂ.ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಸಚಿವರು ಮತ್ತು ಅಧಿಕಾರಿಗಳ ಜೇಬು ಸೇರಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕರ ಆರೋಪ ಸುಳ್ಳು ಎಂದಾದರೆ ತನಿಖೆ ಮಾಡಿಸಿ ಎಂದು ಪ್ರಶ್ನಿಸಿದರು.

    ತನಿಖೆಗೆ ಸಿದ್ಧ: ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಭ್ರಷ್ಟಾಚಾರವೆಸಗಿದ್ದರೆ ಯಾವುದೇ ತನಿಖಾ ಸಂಸ್ಥೆಯಿಂದ ವಿಚಾರಣೆ ಎದುರಿಸಲು ಸಿದ್ಧ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಸರ್ಕಾರಕ್ಕೆ ಸವಾಲು ಎಸಗಿದರು.

    ಕರೊನಾ ವಿಚಾರದಲ್ಲಿ ಸರ್ಕಾರ ಎಡವಿರುವುದರ ಕುರಿತು ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ ಸೇರಿ ನಮ್ಮ ಪಕ್ಷದ ಮುಖಂಡರು ಮಾಡಿರುವ ಆರೋಪ ತಳ್ಳಿ ಹಾಕುವ ಭರಾಟೆಯಲ್ಲಿ ಕೆಲ ಸಚಿವರು, ಬಿಜೆಪಿ ಮುಖಂಡರು ಹಿಂದಿನ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿದ್ದಾರೆ, ಕರೊನಾ ಭ್ರಷ್ಟಾಚಾರದ ತನಿಖೆ ಜತೆಗೆ ನಮ್ಮ ಕಾಲದಲ್ಲಿ ಆಗಿರುವ ಅಕ್ರಮ ತನಿಖೆಗೆ ಒಳಪಡಿಸಿದರೆ ಸ್ವಾಗತಿಸುತ್ತೇವೆ ಎಂದರು.

    ನಾವು ಹುಟ್ಟಿದ್ದು ಹೊಲಸಲ್ಲಿ, ಅದೇ ನಮಗೆ ಊಟ. ನೀವೋ ಭಾರತಾಂಬೆಯ ಫೊಟೋ ಹಿಡಿದು ಭಾರತಮಾತೆಯ ಮಾನ ಕಾಪಾಡುವ ಅವತಾರ ಪುರುಷರು, ಕರೊನಾದಲ್ಲೂ ನೂರಾರು ಕೋಟಿ ರೂ. ಹಗರಣ ನಡೆದಿದೆಯಲ್ಲ, ಏಕೆ ತನಿಖೆಗೆ ಧೈರ್ಯ ತೋರುತ್ತಿಲ್ಲವೆಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕರಾದ ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್, ಎಂಎಲ್‌ಸಿ ರವಿ ಆಚಾರ್, ನಸೀರ್ ಅಹಮ್ಮದ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಕೆಪಿಸಿಸಿ ವಕ್ತಾರ ವಿ.ಆರ್.ಸುದರ್ಶನ್, ಜಿಪಂ ಸದಸ್ಯ ಗೋವಿಂದಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್, ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಉಪಾಧ್ಯಕ್ಷ ಎಸ್.ಮಂಜುನಾಥ್, ಮುಖಂಡ ಜಮೀರ್‌ಪಾಷ, ಜಿಲ್ಲಾ ಎಸ್ಸಿ ವಿಭಾಗದ ಅಧ್ಯಕ್ಷ ಕೆ.ಜಯದೇವ, ಕಿಸಾನ್ ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ ವೆಂಕಟಮುನಿಯಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನೆಟೊ, ಬ್ಲಾಕ್ ಅಧ್ಯಕ್ಷ ಉದಯಶಂಕರ್, ಮುಖಂಡ ವಸಂತ ಕವಿತಾ ಉಪಸ್ಥಿತರಿದ್ದರು.

    ಕರೊನಾ ನಿಯಂತ್ರಣಕ್ಕಾಗಿ ಆರ್‌ಬಿಐನಿಂದ 8000 ಕೋಟಿ ರೂ. ಸಾಲ ಪಡೆಯಲಾಗಿದೆ, ವಿವಿಧ ಇಲಾಖೆಗಳ ಅನುದಾನ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಹಾಗೂ ಕೇಂದ್ರದಿಂದ ಬಿಡುಗಡೆಯಾಗಿರುವ ಹಣದಿಂದ ಖರ್ಚು ಮಾಡಿರುವ ಹಣಕ್ಕೆ ಲೆಕ್ಕೆ ಕೇಳುವುದು ತಪ್ಪೇ, ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎನ್ನುವುದಾದರೆ ಶ್ವೇತ ಪತ್ರ ಹೊರಡಿಸಿ ಸರ್ಕಾರ ತನ್ನ ಸಾಚಾತನ ಬಹಿರಂಗಪಡಿಸಲಿ.
    ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts