More

    ಕರೊನಾ ನಿಯಂತ್ರಣಕ್ಕೆ ಸಹಕಾರ ಅಗತ್ಯ

    ಚಿಕ್ಕಬಳ್ಳಾಪುರ: ನೋವೆಲ್ ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಜನರ ಸಹಕಾರ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ.ಯೋಗೇಶ್‌ಗೌಡ ಮನವಿ ಮಾಡಿದರು.

    ಜಿಲ್ಲಾಡಳಿತ, ಜಿಪಂ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕೊರೊನಾ ವೈರಸ್ ಅರಿವು ಮೂಡಿಸುವ ಜಾಥಾ ಜಾಥಾಕ್ಕೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

    ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಿದೆ. ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದು ಅನೇಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ, ಆದರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿನಿಂದ ದೂರವಿರಬಹುದು ಎಂದರು.

    ಕಾಯಿಲೆ ಪತ್ತೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವಿಶೇಷ ವಾರ್ಡ್ ಮೀಸಲಿರಿಸಿದ್ದು ವೈದ್ಯರು ಮತ್ತು ಸಿಬ್ಬಂದಿಗೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದರು.

    ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ ಅಡ್ಡ ಇಟ್ಟುಕೊಳ್ಳಬೇಕು. ಆಗಾಗ ಎರಡು ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಬಾಬುರೆಡ್ಡಿ, ನಿವಾಸಿ ವೈದ್ಯಾಧಿಕಾರಿ ರಮೇಶ್, ಮಂಜುಳಾ, ಪ್ರಕಾಶ್ ಇತರರಿದ್ದರು.

    ಮಾಸ್ಕ್ ಧರಿಸಿದ ವಿದ್ಯಾರ್ಥಿಗಳು: ಮುಂಜಾಗ್ರತಾ ಕ್ರಮವಾಗಿ ನಗರದ ಗುಡ್ ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ತರಗತಿಗೆ ಆಗಮಿಸಿದ್ದು ಊಟ ಸೇವನೆಗೂ ಮೊದಲು ಕೈ ತೊಳೆಯಲು ಪ್ರತ್ಯೇಕವಾಗಿ ಸ್ಯಾನಿಟೈಜರ್ ತಂದಿದ್ದರು. ಕೆಮ್ಮು, ನೆಗಡಿ, ಜ್ವರ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸದೆ ಚಿಕಿತ್ಸೆ ಕೊಡಿಸಲು ಶಿಕ್ಷಕರು ಪಾಲಕರಿಗೆ ಸಲಹೆ ನೀಡಿದ್ದರು. ಚಿಕ್ಕ ಮಕ್ಕಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷೃ ವಹಿಸುವಂತಿಲ್ಲ. ಕೊರೊನಾ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ ಎಂದು ಶಿಕ್ಷಕಿ ವಿಜಯಲಕ್ಷ್ಮೀ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts