More

    ಕರೊನಾ ಕರಿನೆರಳು… ಒಣಗುತ್ತಿವೆ ಸಸಿಗಳು..

    ಲಕ್ಷ್ಮೇಶ್ವರ: ಕೃಷಿ, ಶಿಕ್ಷಣ, ವಾಣಿಜ್ಯ ಸೇರಿ ಪ್ರತಿ ಕ್ಷೇತ್ರಕ್ಕೂ ಪೆಟ್ಟು ನೀಡಿರುವ ಕರೊನಾ ಕರಿಛಾಯೆ ನರ್ಸರಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

    ತೋಟಗಾರಿಕೆ ಮತ್ತು ಒಣ ಬೇಸಾಯಕ್ಕೆ ಗ್ರೀನ್​ಹೌಸ್​ನಲ್ಲಿ ಸಸಿಗಳನ್ನು ಬೆಳೆಸಿ ಮಾರಾಟ ಮಾಡುವ ಮತ್ತು ರೈತರು ಕೊಟ್ಟ ಬೀಜಗಳಿಂದ ಸಸಿ ಬೆಳೆಸಿಕೊಡುವ ನರ್ಸರಿಗಳಿಗೆ ಕರೊನಾ ಕರಿ ನೆರಳು ಆವರಿಸಿದೆ. ಇವರು ಬೆಳೆಸಿದ ಸಸಿಗಳನ್ನೇ ತೆಗೆದುಕೊಂಡು ಹೋಗಿ ನಾಟಿ ಮಾಡುತ್ತಿದ್ದ ರೈತರು ಈ ಬಾರಿ ಪರದಾಡುವಂತಾಗಿದೆ.

    ನೀರಾವರಿ ಜಮೀನು ಹೊಂದಿರುವ ರೈತರು ಪ್ರತಿ ವರ್ಷದಂತೆ ಈ ವೇಳೆಗೆ ಹಸಿ ಮೆಣಸಿನಕಾಯಿ (ಗುಂಟೂರ), ಬದನೆ, ಟೊಮೆಟೊ ಸಸಿಗಳನ್ನು ನಾಟಿ ಮಾಡುತ್ತಾರೆ. ಕಳೆದ 8-10 ವರ್ಷಗಳಿಂದ ಈ ಕ್ಷೇತ್ರದ ನೀರಾವರಿ ಬೆಳೆಗಾರರ ನಿರೀಕ್ಷೆಯನ್ನು ಅಂದಾಜಿಸುವ ನರ್ಸರಿಯವರು ಸುಮಾರು 5-6 ಲಕ್ಷ ರೂ. ಗಳ ಬೀಜಗಳನ್ನು ಪ್ಲಾಸ್ಟಿಕ್ ಟ್ರೇಗಳಲ್ಲಿ ಹಾಕಿ ಸಸಿ ಬೆಳೆಸಿದ್ದಾರೆ. ಆದರೆ, ಕರೊನಾ ಲಾಕ್ ಡೌನ್​ನಿಂದ ಈ ಸಸಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದಾಗಿ ಲಕ್ಷಾಂತರ ಸಸಿಗಳು ಗ್ರೀನ್ ಹೌಸ್​ನಲ್ಲೇ ಒಣಗುತ್ತಿರುವುದು ನರ್ಸರಿ ಮಾಲೀಕರನ್ನು ಚಿಂತೆಗೀಡು ಮಾಡಿದೆ.

    ನರ್ಸರಿ ಮಾಲೀಕರು ದೂರದ ಊರಿನಿಂದ ಕುಟುಂಬ ಸಮೇತ ಬಂದು, ಇಲ್ಲಿ ಲಕ್ಷಾಂತರ ರೂ. ವ್ಯಯಿಸಿ, ಬಾಡಿಗೆ ಜಮೀನಿನಲ್ಲಿ ಸಸಿ ಬೆಳೆದಿದ್ದಾರೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡ, ನೀರಾವರಿ ಜಮೀನು ಇರುವ ಪ್ರದೇಶಗಳ ಸುತ್ತಮುತ್ತ ಇವರು ಬಾಡಿಗೆ ಜಮೀನಿನನಲ್ಲಿ ಗ್ರೀನ್ ಹೌಸ್ ನಿರ್ವಿುಸಿ ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಿನ ಲಕ್ಷ್ಮೇಶ್ವರ, ಶಿರಹಟ್ಟಿ, ಮಾಗಡಿ ಮತ್ತಿತರ ಗ್ರಾಮಗಳಲ್ಲಿ ಹತ್ತಾರು ನರ್ಸರಿಗಳಿವೆ. ರೈತರನ್ನೇ ನಂಬಿ ಸಸಿ ಬೆಳೆದ ನರ್ಸರಿ ಮಾಲೀಕರು ಈಗ ಕರೊನಾ ಹಾವಳಿಯಿಂದ ಸಸಿಗಳನ್ನು ಮಾರಲಾಗದೆ ಕಂಗಾಲಾಗಿದ್ದಾರೆ.

    8-10 ವರ್ಷಗಳಿಂದ ಇಲ್ಲಿಯೇ ಸಸಿಗಳನ್ನು ಬೆಳೆಸಿ ಮಾರುತ್ತೇವೆ. ಗುಣಮಟ್ಟದ ಮಾನ್ಯತಾ ಕಂಪನಿಯ ಮೆಣಸಿನ ಸಸಿಗಳನ್ನು ಬೆಳೆಸುತ್ತೇವೆ. ಪ್ರತಿ ಕೆಜಿ ಬೀಜಕ್ಕೆ 55 ಸಾವಿರ ರೂ. ಬೆಲೆ. ಈ ವರ್ಷ 5 ಲಕ್ಷ ರೂ. ವೆಚ್ಚದಲ್ಲಿ ಬೀಜ ನಾಟಿ ಮಾಡಿದ್ದು, ನಾವೇ ರೈತರನ್ನು ಸಂರ್ಪಸಿ 1 ಲಕ್ಷ ರೂ. ಮೊತ್ತದ ಸಸಿಗಳನ್ನು ಮಾರಿದ್ದೇವೆ. ಇನ್ನೂ 4 ಲಕ್ಷ ರೂ. ಮೊತ್ತದ ಸಸಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹಣವನ್ನು ಅನಂತರ ಕೊಡುವಿರಂತೆ, ಸಸಿ ತೆಗೆದುಕೊಂಡು ಹೋಗಿರಿ ಎಂದರೂ ರೈತರು ಬರುತ್ತಿಲ್ಲ. ಇದರಿಂದಾಗಿ ಸಸಿಗಳು ಒಣಗುತ್ತಿವೆ. ಕಳೆದ ಮುಂಗಾರಿನಲ್ಲಿ ಸತತ ಮಳೆಯಿಂದ 2 ಲಕ್ಷ ರೂ. ಮೊತ್ತದ ಸಸಿಗಳು ಹಾಳಾಗಿವೆ. ಇದನ್ನೇ ನಂಬಿ ಬದುಕುತ್ತಿರುವ ನಮ್ಮಂಥ ಸಾವಿರಾರು ಕುಟುಂಬಗಳ ಗತಿ ಏನು?

    | ನಾಗರಾಜ ರೆಡ್ಡಿ, ಲಕ್ಷ್ಮೇಶ್ವರದ ಬಾಲಾಜಿ ಅಗ್ರೋ ನರ್ಸರಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts