More

    ಕರೊನಾ ಕತ್ತರಿಯಲ್ಲಿ ತರಕಾರಿ ಬೆಳೆಗಾರ

    ಮೇಖಳಿ: ಲಾಕ್‌ಡೌನ್ ಸೃಷ್ಟಿಸಿದ ಆತಂಕದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತರಕಾರಿ ಬೆಳೆಗಾರರು ಅತ್ತ ಬೆಳೆ ಕಟಾವು ಮಾಡಲಾಗದೆ, ಇತ್ತ ಮಾರಾಟಕ್ಕೆ ವ್ಯವಸ್ಥೆಯೂ ಇಲ್ಲದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

    ಜಿಲ್ಲೆಯ 36 ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 2,350 ಹೆಕ್ಟೇರ್ ಪ್ರದೇಶದಲ್ಲಿ ಪ್ರಸಕ್ತ ಹಂಗಾಮಿನಲ್ಲಿ ರೈತರು ವಿವಿಧ ತರಕಾರಿ ಬೆಳೆ ಬೆಳೆದಿದ್ದಾರೆ. ಅದರಲ್ಲೂ ರಾಯಬಾಗ, ಗೋಕಾಕ, ಬೆಳಗಾವಿ, ಚಿಕ್ಕೋಡಿ, ಖಾನಾಪುರ, ಕಿತ್ತೂರು ತಾಲೂಕಿನ ರೈತರು ಹೆಚ್ಚಾಗಿ ತರಕಾರಿ ಬೆಳೆದಿದ್ದಾರೆ. ಆದರೆ, ಮಾರಾಟಕ್ಕೆ ವ್ಯವಸ್ಥೆ ಇಲ್ಲದ ಕಾರಣ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಗಟು ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದ್ದರಿಂದ ವ್ಯಾಪಾರಿಗಳು ತರಕಾರಿ ಖರೀದಿಸಲು ಮುಂದೆ ಬರುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋದರೆ ಕಡಿಮೆ ದರಕ್ಕೆ ಗ್ರಾಹಕರು ಕೇಳುತ್ತಿದ್ದಾರೆ. 38 ರಿಂದ 45 ರೂ.ಗೆ ಮಾರಾಟವಾಗುತ್ತಿದ್ದ ಹಸಿ ಮೆಣಸಿನಕಾಯಿ ಇದೀಗ 15 ರೂ.ಗೆ ಇಳಿದಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸಾಕಷ್ಟಿದೆ. ಆದರೆ, ಬೆಳೆ ಸಾಗಣೆ ಮಾಡಲು ವಾಹನ ವ್ಯವಸ್ಥೆ ಇಲ್ಲದಂತಾಗಿದೆ ಎಂಬುದು ಅನ್ನದಾತರ ಮನದ ಕಷ್ಟ.

    ನಾನು ಎರಡು ಎಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ, ಡಬ್ಬು ಮೆಣಸಿನಕಾಯಿ ಬೆಳೆದಿದ್ದೇನೆ. ಇದಕ್ಕಾಗಿ 1 ಲಕ್ಷ ರೂ. ವೆಚ್ಚ ಮಾಡಿದ್ದೇನೆ. ಸುಮಾರು 10 ಟನ್‌ನಷ್ಟು ಫಸಲು ಈಗ ಬೆಳೆದು ನಿಂತಿದೆ. ಕರೊನಾತಂಕದಿಂದಾಗಿ ಮಾರುಕಟ್ಟೆ ಬಂದ್ ಆಗಿವೆ.ಮಾರಾಟಕ್ಕೆ ವ್ಯವಸ್ಥೆಯಿಲ್ಲದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲಿಕಿದ್ದೇನೆ. ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಮೇಖಳಿಯ ರೈತ ಮಾರುತಿ ಧನುಗೋಳ ಅಳಲು ತೋಡಿಕೊಂಡಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ. ರೈತರಿಗೆ ಸಹಾಯಧನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    | ಅಶೋಕ ಕರೆಪ್ಪಗೋಳ ತೋಟಗಾರಿಕೆ ಇಲಾಖೆ ಅಧಿಕಾರಿ, ರಾಯಬಾಗ

    | ನಾಗಪ್ಪ ಬಟನೂರೆ ಮೇಖಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts