More

    ಕರೊನಾಮುಕ್ತ ಮಾಡಲು ಎಡವುತ್ತಿದೆ ಸರ್ಕಾರ, ಶಾಸಕ ರಾಮಲಿಂಗಾ ರೆಡ್ಡಿ ಆರೋಪ, ಸಮೇತನಹಳ್ಳಿಯಲ್ಲಿ ಕೋವಿಡ್ ಲಸಿಕಾ ಅಭಿಯಾನ

    ಹೊಸಕೋಟೆ: ಕರೊನಾ ಸೋಂಕಿನಿಂದ ದೂರ ಉಳಿಯಲು ಲಸಿಕೆಯೊಂದೇ ಮಾರ್ಗ. ಆದರೆ, ಸರ್ಕಾರ ಲಸಿಕೆಯನ್ನು ಬೇಡಿಕೆಗೆ ತಕ್ಕಷ್ಟು ಪೂರೈಸಲು ಎಡವುತ್ತಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಆರೋಪಿಸಿದರು.

    ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ವೈಯಕ್ತಿಕವಾಗಿ ಆಯೋಜಿಸಿದ್ದ 700 ಜನರಿಗೆ ಕರೊನಾ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಕಳೆದ ವರ್ಷ ಕರೊನಾ ಮೊದಲ ಅಲೆ ಆರಂಭವಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳು ಕರೊನಾ ನಿಯಂತ್ರಿಸುವುದಾಗಿ ಹೇಳಿದ್ದರು. ಅದು ಸಾಧ್ಯವಾಗಲಿಲ್ಲ. ಈ ಬಾರಿ ಸಾವಿನ ಸಂಖ್ಯೆಯಲ್ಲಿ ಭಾರಿ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
    ನಮ್ಮ ರಾಜ್ಯದಲ್ಲಿ ವಾಸ್ತವವಾಗಿ 3ರಿಂದ 4 ಲಕ್ಷ ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಸರ್ಕಾರ ಕೇವಲ 35 ಸಾವಿರ ಎಂದು ಸುಳ್ಳು ಹೇಳುತ್ತಿದೆ ಎಂದರು.

    ದೇಶದಲ್ಲಿ 18 ವರ್ಷ ಮೇಲ್ಪಟ್ಟವರು 90 ಕೋಟಿಗೂ ಹೆಚ್ಚಿದ್ದಾರೆ. ಇವರೆಲ್ಲರಿಗೂ ಲಸಿಕೆ ಕೊಡಲು 57 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆದರೆ ಸರ್ಕಾರ ಲಸಿಕೆಗೆ ಸೂಕ್ತ ಹಣ ಬಿಡುಗಡೆ ಮಾಡದೆ, ಲಸಿಕೆ ಪೂರೈಸದೆ ಸೊಂಕಿನಿಂದ ಹೆಚ್ಚು ಜನ ಸಾಯುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

    ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕರೊನಾ ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಸೋಂಕಿತರಿಗೆ ಸರ್ಕಾರದ ಕಡೆಯಿಂದ ಸೂಕ್ತ ಸೌಲಭ್ಯ ದೊರೆಯುತ್ತಿಲ್ಲ ಎಂದು ದೂರಿದರು.
    ಮುಖಂಡರಾದ ಲಕ್ಷ್ಮಣ್ ಸಿಂಗ್, ಕೋಡಿಹಳ್ಳಿ ಸುರೇಶ್, ಅರಳಗೆರೆ ಮುನಿರಾಜ್, ಕೊರಳೂರು ಸುರೇಶ್, ಬಾಬು ರೆಡ್ಡಿ, ಮುತ್ಕೂರು ಮುನಿರಾಜ್, ರೂಪಾ ಮತ್ತಿತರರಿದ್ದರು.

    ಖೇಲ್ ರತ್ನ ಪುರಸ್ಕಾರವನ್ನು ಮರುನಾಮಕರಣ ಮಾಡಿರುವುದು ಖಂಡನೀಯ. ರಾಜೀವ್ ಗಾಂಧಿ ಅವರು ಯಾವುದೇ ಕ್ರೀಡಾಪಟು ಆಗಿರಲಿಲ್ಲ ಎಂದು ಹೇಳುವುದಾದರೆ, ನರೇಂದ್ರ ಮೋದಿ ಅವರೂ ಕ್ರೀಡಾಪಟು ಅಲ್ಲ. ಆದರೂ ಅಹಮದಾಬಾದ್‌ನ ಮೋಟೆರಾ ಕ್ರೀಡಾಂಗಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಿದ್ದು ಏಕೆ?
    ರಾಮಲಿಂಗಾ ರೆಡ್ಡಿ
    ಶಾಸಕ

    ಸಿದ್ದನಾಪುರದಲ್ಲಿ ಸ್ವಂತ ಜಮೀನಿನಲ್ಲಿ ಕಟ್ಟಡ ನಿರ್ಮಿಸಿ, ಬಮುಲ್ ಸಹಾಯದಿಂದ ಶುದ್ಧಕುಡಿಯುವ ನೀರಿನ ಘಟಕ ನಿರ್ಮಿಸಲಾಗುತ್ತಿತ್ತು. ಆಗ ಕೆಲ ರಾಜಕೀಯ ಮುಖಂಡರು ಆ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ. ಇದು ಯಾವ ನ್ಯಾಯ?, ಗ್ರಾಮಗಳಲ್ಲಿ ಅಶಾಂತಿ ಮೂಡಿಸಿ, ಜನರಲ್ಲಿ ಭಯ ಮೂಡಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕೆಲ ಪ್ರಭಾವಿಗಳ ಒತ್ತಡದಿಂದ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಎಸ್‌ಪಿ ಅವರಿಗೆ ದೂರು ಕೊಟ್ಟು, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗುವುದು.
    ಶರತ್ ಬಚ್ಚೇಗೌಡ, ಹೊಸಕೋಟೆ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts