More

    ಕರೊನಾದಿಂದ ಮಕ್ಕಳ ರಕ್ಷಣೆಯೇ ಗುರಿ, ಸಚಿವ ಆರ್.ಅಶೋಕ್ ಅಭಿಮತ, ಮಕ್ಕಳ ತಜ್ಞರ ನಡೆ, ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ

    ಬೆಂಗಳೂರು ಗ್ರಾಮಾಂತರ: ಮಕ್ಕಳನ್ನು ಕೋವಿಡ್ ಮೂರನೇ ಅಲೆಯಿಂದ ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.

    ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಮಕ್ಕಳ ತಜ್ಞರ ನಡೆ, ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಕರೊನಾ 3ನೇ ಅಲೆ ಆರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ತಜ್ಞ ವೈದ್ಯರ ತಂಡ, ಹಳ್ಳಿಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ, ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಲಿದೆ. ಈ ಮೂಲಕ ಮೂರನೇ ಅಲೆ ಹರಡುವಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಮಕ್ಕಳ ತಜ್ಞ ವೈದ್ಯರ ನಡೆ, ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ಆಯೋಜಿಸುವ ಮೂಲಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವುದು ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಆಕಾಶ್ ಆಸ್ಪತ್ರೆ ಹಾಗೂ ಎಂವಿಜೆ ಆಸ್ಪತ್ರೆಗಳಲ್ಲಿ ತಲಾ 25 ಬೆಡ್‌ಗಳು ಮತ್ತು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ 50 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 6 ಮಕ್ಕಳ ಕೋವಿಡ್ ಕೇರ್ ಸೆಂಟರ್ ಗುರುತಿಸಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಪಾಲಕರ ಸಮೇತ ಆಸ್ಪತ್ರೆಗೆ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ ವೇಳೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಬಗ್ಗೆ ಪ್ರಧಾನಮಂತ್ರಿಗಳು ಘೋಷಿಸಿದ್ದು, ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದರು.

    ಪೌಷ್ಟಿಕಾಂಶಯುಕ್ತ ಆಹಾರದ ಕಿಟ್ ಕೊಡುಗೆ: ಜಿಲ್ಲೆಯಲ್ಲಿ 18 ವರ್ಷದೊಳಗಿನ 2,72,918 ಮಕ್ಕಳ ಪೈಕಿ, 0-6 ವರ್ಷದೊಳಗಿನ 58,637 ಮಕ್ಕಳಿದ್ದು, ಇವರಲ್ಲಿ 863 ಮಕ್ಕಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗುರುತಿಸಲಾಗಿದೆ. ಹಾಗೆಯೇ ಅಲ್ಪ ಪ್ರಮಾಣದಲ್ಲಿ ಅಪೌಷ್ಟಿಕತೆ ಹೊಂದಿರುವ ಮಕ್ಕಳು ಸೇರಿ 1200 ಮಂದಿ ಚಿಣ್ಣರಿಗೆ ಆರೋಗ್ಯ ತಪಾಸಣೆ ಹಾಗೂ ತಜ್ಞರ ಸಲಹೆಯಂತೆ ಕೆಎಂಎ್ನಿಂದ ಪೌಷ್ಟಿಕಾಂಶಯುಕ್ತ ಆಹಾರದ ಕಿಟ್ (ಬಾದಾಮ್ ಪೌಡರ್, ಮಿಲ್ಕ್ ಪೌಡರ್, ಪೌಷ್ಟಿಕ ಬಿಸ್ಕೆಟ್, ಸಕ್ಕರೆ, ವಿಟಮಿನ್, ಜಿಂಕ್, ಸಿರಾಪ್) ನೀಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

    ಪ್ರತಿ ಮನೆಗೂ ಭೇಟಿ: ಪ್ರತಿ ತಾಲೂಕಿಗೆ 5 ತಜ್ಞ ವೈದ್ಯರ ತಂಡಗಳಂತೆ ಜಿಲ್ಲೆಯಲ್ಲಿ 20 ತಂಡಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮನೆ, ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

    ಮಕ್ಕಳಿಗೆ 3500 ರೂ. ಸಹಾಯಧನ: ರಾಜ್ಯದಲ್ಲಿ ಕೋವಿಡ್‌ನಿಂದ ತಂದೆ- ತಾಯಿಯನ್ನು ಕಳೆದುಕೊಂಡ 47 ಮಕ್ಕಳು, ಒಬ್ಬ ಪಾಲಕರನ್ನು ಕಳೆದುಕೊಂಡ 2000 ಮಕ್ಕಳು ಇದ್ದು, ಬಾಲಸೇವಾ ಯೋಜನೆಯಡಿ ಸರ್ಕಾರದಿಂದ ಅವರಿಗೆ ಮಾಸಿಕ ರೂ.3500 ಸಹಾಯಧನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
    ಉಚಿತ ಶಿಕ್ಷಣ ಹಾಗೂ ಉನ್ನತ ವ್ಯಾಸಂಗಕ್ಕೆ ಲ್ಯಾಪ್‌ಟಾಪ್ ನೀಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಹಾಗೂ ಹೆಣ್ಣು ಮಕ್ಕಳಿಗೆ 21 ವರ್ಷದ ನಂತರ 1 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದರು.

    ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಕೋವಿಡ್ ಹರಡುವ ಸಾಧ್ಯತೆ ಇರುವುದರಿಂದ ಅಂತಹ ಮಕ್ಕಳನ್ನು ಗುರುತಿಸಿ ಪೌಷ್ಟಿಕಾಂಶಯುಕ್ತ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ,ಆರೋಗ್ಯ ಕಾಪಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಲಸೆ ಹೋಗುವ ಗರ್ಭಿಣಿ ಹಾಗೂ ಬಾಣಂತಿಯರಿಗೂ ಅಂಗನವಾಡಿ ಕೇಂದ್ರಗಳಿಂದ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.
    ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಮಕ್ಕಳ ತಜ್ಞ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ ಎಂದರು.

    ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪುಷ್ಪಲತಾ ಜಿ.ರಾಯ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್, ತಹಸೀಲ್ದಾರ್ ಅನಿಲ್‌ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಕೆ.ನಾಯಕ್, ಸಿಡಿಪಿಒ ಹೇಮಾವತಿ, ತಾಲೂಕು ಆರೋಗ್ಯಾಧಿಕಾರಿ ಸಂಜಯ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts