More

    ಕರೆಂಟ್ ಕಟ್ ಮಾಡಿದ ಗಂಧದ ಮರ

    ಗೋಕರ್ಣ: ಗಂಧದ ಮರವೊಂದು ಹಲವು ಗಂಟೆಗಳ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾದ ಘಟನೆ ಇಲ್ಲಿ ಸೋಮವಾರ ನಡೆದಿದೆ. ಖಾಸಗಿ ಜಾಗದಲ್ಲಿದ್ದ ಮರ ಕಡಿದ ಬಗ್ಗೆ ಹೆಸ್ಕಾಂ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋಕರ್ಣದ ಕೆಲ ಮುಖ್ಯ ಭಾಗ ಏಳು ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಕಾಲ ಕಳೆಯುವಂತಾಯಿತು.

    ಘಟನೆ ಹಿನ್ನೆಲೆ: ಕೆಲ ದಿನಗಳ ಹಿಂದೆ ಗಂಜಿಗದ್ದೆ ಬಳಿ ಮಧ್ಯರಾತ್ರಿ ಸಮಯದಲ್ಲಿ ಹಲಸಿನ ಮರದ ಟೊಂಗೆ ವಿದ್ಯುತ್ ಲೈನ್ ಮೇಲೆ ಬಿದ್ದಿತ್ತು. ಈ ವೇಳೆ ತಕ್ಷಣ ಸ್ಥಳಕ್ಕೆ ತೆರಳಿದ ಹೆಸ್ಕಾಂನ 24*7 ಸಿಬ್ಬಂದಿ ಟೊಂಗೆ ತೆರವು ಮಾಡಿ ಲೈನ್ ಸರಿಪಡಿಸಿದರು. ಈ ವೇಳೆ ಎದುರಿನ ಖಾಸಗಿ ಕಾಂಪೌಂಡಿನಲ್ಲಿದ್ದ ಗಂಧದ ಮರಕ್ಕೆ ಹಾನಿ ಉಂಟಾಯಿತು. ಈ ಕುರಿತು ಮರದ ಮಾಲೀಕ ಸುಜಯ್ ಶೆಟ್ಟಿ ಹೆಸ್ಕಾಂ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಗಂಧದ ಮರ ತುಂಡಾಗಲು ಕಾರಣರಾದ ಹೆಸ್ಕಾಂ ಸಿಬ್ಬಂದಿಯಿಂದ ಹಾನಿ ತುಂಬಿಕೊಡಲು ಆಗ್ರಹಿಸಿದರು.

    ಈ ಬಗ್ಗೆ ವಿವರಣೆ ನೀಡಿದ ಸ್ಥಳೀಯ ಶಾಖಾಧಿಕಾರಿ ಹರೀಶ ಕಲ್ಲಾಪುರ, ‘ಹೆಸ್ಕಾಂ ಸಿಬ್ಬಂದಿಯಿಂದ ಗಂಧದ ಮರಕ್ಕೆ ಹಾನಿಯಾಗಿಲ್ಲ. ಹಲಸಿನ ಮರದ ಭಾರಿ ಗಾತ್ರದ ಟೊಂಗೆ ಗಂಧದ ಮರದ ಮೇಲೆ ಬಿದ್ದಿದ್ದೇ ಇದಕ್ಕೆ ಕಾರಣ. ಆದ್ದರಿಂದ ಹಾನಿ ತುಂಬಿಕೊಡುವ ಪ್ರಶ್ನೆ ಇಲ್ಲ ಎಂದರು.

    ತೆರವು ಮಾಡುವರಾರು?: ಈ ನಡುವೆ ಸೋಮವಾರ ಮಧ್ಯಾಹ್ನ ಇಲ್ಲಿನ ಬಂಗ್ಲೆ ಗುಡ್ಡೆ ಪರ್ವತ ಪ್ರದೇಶದಲ್ಲಿ ಮರವೊಂದು ಹೈಟೆನ್ಶನ್ ಲೈನ್ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು. ಮರಕ್ಕೆ ಕೈ ಹಚ್ಚಲು ನಿರಾಕರಿಸಿದ ಹೆಸ್ಕಾಂ ಸಿಬ್ಬಂದಿ ಜಾಗ ಯಾರಿಗೆ ಸಂಬಂಧಿಸಿದೆಯೋ ಅವರು ಮುಂದೆ ಬಂದು ಮರ ತೆರವು ಮಾಡಬೇಕು. ನಂತರ ಲೈನ್ ಸರಿಪಡಿಸಲು ಮುಂದಾಗುವುದಾಗಿ ತಿಳಿಸಿದರು.

    ಕೊನೆಗೆ ಸಿಪಿಐ ಪರಮೇಶ್ವರ ಗುನಗ ವಿವಾದದ ವಿಚಾರಣೆ ನಡೆಸಿ, ನ್ಯಾಯಯುತವಾಗಿ ಬಗೆಹರಿಸುವ ಭರವಸೆ ನೀಡಿದರು. ತರುವಾಯ ಹೆಸ್ಕಾಂ ಸಿಬ್ಬಂದಿ ಕೆಲಸಕ್ಕೆ ಮುಂದಾದರು. ಈ ವೇಳೆ ಕುಮಟಾ ಹೆಸ್ಕಾಂ ಎಇಇ ಎ.ಎಂ. ಪಠಾಣ, ಅರಣ್ಯ ಇಲಾಖೆ ಸಿಬ್ಬಂದಿ, ಪಿಎಸ್​ಐ ನವೀನ ನಾಯ್ಕ, ಸ್ಥಳೀಯ ಶಾಖಾಧಿಕಾರಿ ಹರೀಶ ಕಲ್ಲಾಪುರ ಮತ್ತು ದೂರುದಾರರಿದ್ದರು. ಸದ್ಯಕ್ಕೆ ವಿವಾದ ಬಗೆಹರಿದ ಕಾರಣ ನಾಗರಿಕರು ನಿಟ್ಟುಸಿರು ಬಿಡುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts