More

    ಕರಕುಶಲಕರ್ವಿುಗಳಿಗೆ ಸಂಕಷ್ಟ

    ರಾಜೇಂದ್ರ ಶಿಂಗನಮನೆ ಶಿರಸಿ: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ನೋಂದಾಯಿತ ಕರಕುಶಲಕರ್ವಿುಗಳಿಗೆ ದುಬಾರಿ ದರಕ್ಕೆ ಶ್ರೀಗಂಧ ನೀಡಿ ಅದರಿಂದ ತಯಾರಿಸುವ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದೆ. ಇದರಿಂದಾಗಿ ಈ ವೃತ್ತಿ ನಂಬಿ ಜೀವನ ಕಟ್ಟಿಕೊಂಡವರೀಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

    ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶ್ರೀಗಂಧ ಕೆತ್ತನೆ ವೃತ್ತಿ ಮಾಡುತ್ತಿದ್ದಾರೆ. ಇವರಿಗೆ ನಿಗಮವೇ ಖುದ್ದಾಗಿ ಕೆತ್ತನೆಗೆ ಪೂರಕ ಗಂಧವನ್ನು ಒದಗಿಸುತ್ತಿದೆ. ಪ್ರಸ್ತುತ ಪ್ರತಿ ಕೆಜಿ ಶ್ರೀಗಂಧದ ಬೆಲೆ 15,800 ರೂಪಾಯಿಯಷ್ಟಿದೆ. ಬೆಳೆಗಾರರಿಂದ ಅದನ್ನು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಖರೀದಿಸಿ, ನೋಂದಾಯಿತ ಕರ ಕುಶಲ ಕರ್ವಿುಗಳಿಗೆ 9.5 ಸಾವಿರ ರೂ. ದರದಲ್ಲಿ ಪೂರೈಸುತ್ತದೆ. ಆದರೆ, ಅದೇ ಗಂಧವನ್ನು ಬಳಸಿಕೊಂಡು ಕರಕುಶಲಕರ್ವಿುಗಳು ತಯಾರಿಸಿದ ಆಕೃತಿಗಳು, ರಥ, ಆಭರಣ ಪೆಟ್ಟಿಗೆ, ಹಾರ ಮತ್ತಿತರ ಉತ್ಪನ್ನಗಳನ್ನು ಪ್ರತಿ ಇಂಚ್​ಗೆ 148 ರೂ. ಗಳಂತೆ ಖರೀದಿಸುತ್ತಿದೆ. ಇದು ಕುಶಲಕರ್ವಿುಗಳು ಖರೀದಿಸುವ ಗಂಧದ ಬೆಲೆಯ ಅರ್ಧ ಬೆಲೆಯಾಗುತ್ತದೆ. ಹಾಗಾಗಿ, ಈ ವೃತ್ತಿ ನಂಬಿದವರಿಗೆ ಹೊರೆಯಾಗಿ ಪರಿಣಮಿಸಿದೆ.

    ಪ್ರೋತ್ಸಾಹವೇ ಮಾರಕ: ಎರಡು ವರ್ಷಗಳ ಹಿಂದೆ 5500 ರೂ. ಇದ್ದ ಗಂಧದ ಬೆಲೆ ಈಗ 15 ಸಾವಿರ ರೂ. ಕ್ಕಿಂತ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಗಂಧ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ, ನಿಗಮವೇ ಆಸಕ್ತಿ ವಹಿಸಿ ಕಚ್ಚಾ ವಸ್ತು ಪೂರೈಸುತ್ತಿದೆ. ಜತೆಗೆ ಕಲಾಕೃತಿಗಳ ದರ ಹೆಚ್ಚಳವಿರುವ ಕಾರಣಕ್ಕೆ ಸ್ಥಳೀಯ ಮಾರಾಟ ಕಷ್ಟ. ಹೀಗಾಗಿ, ಕುಶಲಕರ್ವಿುಗಳಿಗೆ ಪ್ರೋತ್ಸಾಹಿಸಲು ಸಿದ್ಧಗೊಂಡ ವಸ್ತುಗಳನ್ನು ನಿಗಮವೇ ಖರೀದಿಸುತ್ತದೆ. ಬಳಿಕ, ಅವುಗಳನ್ನು ನಿಗಮದ ಮಳಿಗೆಗಳಲ್ಲಿಟ್ಟು ಮಾರಾಟ ಮಾಡಲಾಗುತ್ತದೆ. ಉತ್ತೇಜಿಸಲು ಇದ್ದ ವ್ಯವಸ್ಥೆಯು ದಶಕದ ಹಿಂದಿನ ದರದಲ್ಲೇ ಖರೀದಿಸುವ ನಿಗಮದ ನಡೆಯಿಂದ ಕುಶಲಕರ್ವಿುಗಳಿಗೆ ಹೊರೆಯಾಗಿ ಪರಿಣಮಿಸಿದ್ದು. ಹಾಲಿ ಗಂಧದ ದರವನ್ನು ಗಮನದಲ್ಲಿಟ್ಟುಕೊಂಡು ಕರಕುಶಲ ವಸ್ತುಗಳ ಖರೀದಿ ದರವನ್ನು ನಿಗದಿಪಡಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

    ಕೈಯಿಂದಲೇ ಖರ್ಚು: ನಿಗಮವು ರಿಯಾಯಿತಿ ದರದಲ್ಲಿ ಗಂಧ ನೀಡಿದರೂ ಕುಶಲಕರ್ವಿುಗಳು ತಯಾರಿಸಿದ ವಸ್ತುಗಳನ್ನು ಖರೀದಿಸುವುದು ಅರ್ಧ ದರಕ್ಕಾಗಿದೆ. ಹೀಗಾಗಿ, ಕರಕುಶಲ ವಸ್ತುಗಳಿಗಿಂತಲೂ ಅದರ ಕಚ್ಚಾವಸ್ತು ಖರೀದಿಗೇ ಹೆಚ್ಚಿನ ಖರ್ಚು ತಗುಲುತ್ತಿದೆ. ಇವೆರಡರ ನಡುವಿನ ವ್ಯತ್ಯಾಸ ದರವನ್ನು ಕೆಲಸಗಾರರು ತಮ್ಮ ಕೈಯಿಂದ ಭರಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಕೆಲವು ಜನರು ಕೆಲಸಗಾರರನ್ನು ಇಟ್ಟು ವಸ್ತುಗಳನ್ನು ತಯಾರಿಸುತ್ತಿದ್ದು, ಅಂಥವರು ಕೂಲಿ ನೀಡಲು ಆಗದ ಪರಿಸ್ಥಿತಿಗೆ ಬಂದಿದ್ದಾರೆ. ಕೆಲವರು ವೃತ್ತಿಯಿಂದ ದೂರಾಗಿದ್ದು, ಇನ್ನು ಕೆಲವರು ಬೇರೆ ವೃತ್ತಿಯತ್ತ ಮುಖ ಮಾಡುತ್ತಿದ್ದಾರೆ. ಬಹುತೇಕ ಕರಕುಶಲಕರ್ವಿುಗಳು ಬಡ, ಮಧ್ಯಮ ವರ್ಗದವರಾಗಿದ್ದು, ಕರೊನಾ ಕಾಲದಲ್ಲಿ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದರು. ಇವರಿಗೆ ಒಂದು ತಿಂಗಳ ಹಿಂದೆ ನಿಗಮದಿಂದ ಗಂಧ ಪೂರೈಸಲಾಗಿದ್ದು, ಈ ಕಚ್ಚಾವಸ್ತುವನ್ನು ಬಳಸಿಕೊಂಡು ಸುಂದರ ಕಲಾಕೃತಿಗಳನ್ನು ಸಿದ್ಧಪಡಿಸಿದರೂ ಹಾಕಿದ ಬಂಡವಾಳಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

    ಈ ಹಿಂದೆ ಕೆಜಿ ಗಂಧಕ್ಕೆ 5 ಸಾವಿರ ರೂ. ಇತ್ತು. ಪ್ರಸ್ತುತ ದರ 9,500 ರೂ. ಆಗಿದೆ. ಆದರೆ, ಅದರಿಂದ ತಯಾರಿಸಿದ ಕಲಾಕೃತಿಗಳನ್ನು ಹಿಂದಿನ ದರಕ್ಕೇ ಖರೀದಿಸುತ್ತಿದ್ದಾರೆ. ಇದು ಕಲಾಕಾರರಿಗೆ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಮುಖ್ಯಸ್ಥರು ಪ್ರಸ್ತುತ ದರಕ್ಕೆ ತಕ್ಕಂತೆ ಖರೀದಿ ದರ ನಿಗದಿಪಡಿಸಬೇಕು. ರಿಯಾಯಿತಿ ಮಾಡುವ ಅಂದಾಜು 6 ಸಾವಿರ ರೂ. ಗಳನ್ನು ಕುಶಲಕರ್ವಿುಗಳಿಗೆ ನೀಡಬೇಕು. ಇಲ್ಲವೆ ಕರಕುಶಲ ವಸ್ತುಗಳ ಖರೀದಿಗೆ ಭರಿಸುವಂತಾಗಬೇಕು. | ನಂದನ ಸಾಗರ ಕರಕುಶಲಕರ್ವಿು

    ಕರೊನಾ ಸಂಬಂಧ ಕರಕುಶಲಕರ್ವಿುಗಳಿಗೆ ರಿಯಾಯಿತಿ ದರದಲ್ಲಿ ಗಂಧ ನೀಡಲು ವಿಳಂಬವಾಗಿತ್ತು. ಜತೆಗೆ ವ್ಯಾಪಾರದಲ್ಲಿ ಇಳಿಕೆಯಾದ ಕಾರಣ ಆರ್ಥಿಕ ಸಮಸ್ಯೆ ಎದುರಾಗಿತು. ಸದ್ಯ ಹೊಸ ಗಂಧ ನೀಡಲಾಗಿದ್ದು, ದರ ಹೆಚ್ಚಳ ಸಂಬಂಧ ನಿಗಮವು ಪರಿಶೀಲಿಸಲಿದೆ. ದರ ನಿಗದಿ ಸಮಿತಿಯ ನಿರ್ಧಾರದ ಬಳಿಕ ಕುಶಲಕರ್ವಿುಗಳಿಗೆ ಹೆಚ್ಚಿನ ದರ ನೀಡಲು ಕ್ರಮ ವಹಿಸಲಾಗುವುದು. | ಗಣೇಶ ಸಿಂಗ್ ನಿಗಮದ ಶಿರಸಿ ವಲಯ ಯೋಜನಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts