More

    ಕಮ್ಯೂನಿಸ್ಟರನ್ನು ಕರಾಳವಾಗಿಸಿದ ಬಂಡವಾಳಶಾಹಿಗಳು ಎಂದು ಹೇಳುತ್ತಿದ್ದಾರೆ ಪ್ರೇಮಶೇಖರ

    ಕಮ್ಯೂನಿಸ್ಟರನ್ನು ಕರಾಳವಾಗಿಸಿದ ಬಂಡವಾಳಶಾಹಿಗಳು ಎಂದು ಹೇಳುತ್ತಿದ್ದಾರೆ ಪ್ರೇಮಶೇಖರ

    ಒಂದುವೇಳೆ ಅಮೆರಿಕ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಚೀನಾ ಒಡ್ಡಿದ ಯಾವ ಆಮಿಷಕ್ಕೂ ಬಲಿಯಾಗದೆ ಅದನ್ನು ದೂರದಲ್ಲೇ ಇರಿಸಿದ್ದರೆ ಆ ಕಮ್ಯೂನಿಸ್ಟ್ ಸರ್ಕಾರದ ಶಕ್ತಿ ಹಾಗೂ ಸಮಯವೆಲ್ಲ ತನ್ನ ಅಗಾಧ ಜನಸಂಖ್ಯೆಗೆ ಅಗತ್ಯವಸ್ತುಗಳನ್ನು ಪೂರೈಸುವುದರಲ್ಲೇ ಕಳೆದುಹೋಗುತ್ತಿತ್ತು. ಈಗಿನಂತೆ ಜಗತ್ತಿಗೆ ಕಂಟಕವಾಗಿ ಅದು ಬೆಳೆಯುತ್ತಲೇ ಇರಲಿಲ್ಲ.

    ಘಾತಕ ಕರೊನಾವೈರಸ್ ಅನ್ನು ಹುಟ್ಟುಹಾಕಿ ಮಾನವಕುಲವನ್ನು ಅತೀವ ಸಂಕಷ್ಟಕ್ಕೆ ಸಿಲುಕಿಸಿರುವ ಚೀನಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಈಗ ಜಗತ್ತಿನಾದ್ಯಂತ ಮಾತುಗಳು ಕೇಳಿಬರತೊಡಗಿವೆ. ಆದರೆ ಕ್ರಮ ಕೈಗೊಳ್ಳಬೇಕಾಗಿರುವುದು ಚೀನಾದ ವಿರುದ್ಧ ಮಾತ್ರವೇ? ಚೀನೀ ಕಮ್ಯೂನಿಸ್ಟ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ರಂಗದಲ್ಲಿ ಪ್ರಮುಖ ಸ್ಥಾನವನ್ನೂ, ಅಪರಿಮಿತ ಆರ್ಥಿಕ ಶಕ್ತಿಯನ್ನೂ ನೀಡಿ ಕೊಬ್ಬಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳೇ ಮೊದಲ ಹಂತದ ತಪ್ಪಿತಸ್ಥರು ಎನ್ನುವುದನ್ನು ಕಳೆದ ನಾಲ್ಕು ದಶಕಗಳ ಜಾಗತಿಕ ಇತಿಹಾಸ ಸಂಶಯಕ್ಕೆ ಎಡೆಯಿಲ್ಲದಂತೆ ಸಾರುತ್ತದೆ. ಅವುಗಳ ತಪ್ಪುಗಳನ್ನು ಕ್ಷಮಿಸಬಹುದೇ?

    ಮೊದಲಿಗೆ ರಾಜತಾಂತ್ರಿಕ ಪ್ರಾಧಾನ್ಯತೆಯನ್ನೇ ತೆಗೆದುಕೊಳ್ಳೋಣ. ಚೀನೀ ಕಮ್ಯೂನಿಸ್ಟರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದು ಎಂದು ನಂಬಿದ್ದ ಹ್ಯಾರಿ ಟ್ರೂಮನ್ ಸರ್ಕಾರ ವಿಶ್ವಸಂಸ್ಥೆಯಿಂದ ಚೀನಾವನ್ನು ಹೊರಗಿಡುವ ವ್ಯವಸ್ಥೆ ಮಾಡಿತು. ಅದರ ಪ್ರಕಾರ ಚೀನಾಕ್ಕಿದ್ದ ಸದಸ್ಯತ್ವ ಹಾಗೂ ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದ್ದ ಚೀನೀ ರಾಷ್ಟ್ರೀಯವಾದಿ ಗಣರಾಜ್ಯ ಅಂದರೆ ತೈವಾನ್​ಗೆ ದಕ್ಕಿದವು. ನಂತರದ ಐಸೆನ್​ಹೋವರ್ ಸರ್ಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜಾನ್ ಫಾಸ್ಟರ್ ಡಲೆಸ್ ಅಂತೂ 1955ರ ಜಿನೀವಾ ಸಮ್ಮೇಳನದಲ್ಲಿ ಚೀನಿ ಪ್ರಧಾನಿ ಚೌ ಎನ್ ಲೈ ಅವರ ಕೈ ಕುಲುಕಲೂ ನಿರಾಕರಿಸಿ ಚೀನಾವನ್ನು ಅಷ್ಟರ ಮಟ್ಟಿಗೆ ದೂರದಲ್ಲಿ ಇರಿಸಿದ್ದರು. ಆದರೆ ಇದೇ ನೀತಿಯನ್ನು ಐಸೆನ್​ಹೋವರ್ ಸರ್ಕಾರ ನಾಲ್ಕೇ ವರ್ಷಗಳಲ್ಲಿ ಗಾಳಿಗೆ ತೂರಿ ಚೀನೀ ಕಮ್ಯೂನಿಸ್ಟರೊಂದಿಗೆ ವಾರ್ಸಾದಲ್ಲಿ ರಹಸ್ಯ ಮಾತುಕತೆಗಳನ್ನು ಆರಂಭಿಸಿ ಅವರಲ್ಲಿ ಹಮ್ಮು ಮೂಡಿಸಿತು. ನಂತರ ಮತಿಹೀನ ಹಾಗೂ ದುರಹಂಕಾರಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅಮೆರಿಕವನ್ನು ಅನಗತ್ಯವಾಗಿ ವಿಯೆಟ್ನಾಂ ಯುದ್ಧದ ಕೆಸರಿನಲ್ಲಿ ಸಿಲುಕಿಸಿದರು. ಅದರಿಂದ ಹೊರಬರಲು ಹೆಣಗಿ, ಸೋತು, ಸಂಧಾನಕ್ಕಾಗಿ ಹಪಹಪಿಸಿದರೆ ವಿಯೆಟ್ನಾಮಿಗಳು ಹೇಳಿದ್ದು, ‘ಹನೋಯ್ಗೆ ಹಾದಿ ಪೀಕಿಂಗ್ ಮೂಲಕ ಹಾದು ಬರುತ್ತದೆ’ ಎಂದು. ಇದನ್ನು ಅಕ್ಷರಶಃ ತೆಗೆದುಕೊಂಡ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತವರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ಸಿ ಕಿಸಿಂಜರ್ ಚೀನಾ ಜತೆ ಮೊದಲಿಗೆ ಗುಟ್ಟಿನಲ್ಲಿ, ನಂತರ ಬಹಿರಂಗವಾಗಿ ಸಂಬಂಧಗಳನ್ನು ಸ್ಥಾಪಿಸಿಕೊಂಡರು. ಕಿಸಿಂಜರ್ ಅಂತೂ ಚೀನೀ ಅತಿಥಿಸತ್ಕಾರಕ್ಕೆ ಮನಸೋತು ವಾಸ್ತವಪ್ರಜ್ಞೆಯನ್ನೂ, ಭವಿಷ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸುವ ಸಾಮರ್ಥ್ಯನ್ನೂ ಕಳೆದುಕೊಂಡರು. ಪರಿಣಾಮವಾಗಿ ವಿಶ್ವಸಂಸ್ಥೆಯಿಂದ ತೈವಾನ್ ಹೊರದೂಡಲ್ಪಟ್ಟು, ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಕಮ್ಯೂನಿಸ್ಟ್ ಚೀನಾಗೆ ಬೆಳ್ಳಿತಟ್ಟೆಯಲ್ಲಿ ಬಂತು. ಅಲ್ಲಿಗೆ ಕಮ್ಯೂನಿಸ್ಟ್ ಸರ್ಕಾರಕ್ಕೆ ಅಂತಾರಾಷ್ಟ್ರೀಯವಾಗಿ ಪೂರ್ಣ ಮಾನ್ಯತೆ ದಕ್ಕಿದಂತಾಯಿತು.

    ನಂತರದ ದಿನಗಳಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳೂ ತೈವಾನ್ ಅನ್ನು ಹೊರಗಟ್ಟಿದವು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂ್ಯಹೆಚ್​ಓ) ಸಹ. ಅದರ ಪರಿಣಾಮ ಇಂದೇನಾಗಿದೆ ಗೊತ್ತೇ? ಚೀನಾದಿಂದ ಕರೊನಾವೈರಸ್ ಹೊರಜಗತ್ತಿಗೆ ಹರಡುತ್ತಿದೆ ಎಂದು ಮೊದಲು ಗುರುತಿಸಿ ಡಿಸೆಂಬರ್ ಅಂತ್ಯದಲ್ಲೇ ಜಗತ್ತನ್ನು ಎಚ್ಚರಿಸಿದ್ದೇ ತೈವಾನ್. ಆದರೆ ಚೀನೀ ಸರ್ಕಾರ ಮತ್ತು ಅದರ ಕೈಗೊಂಬೆಯಂತೆ ವರ್ತಿಸುತ್ತಿರುವ ಡಬ್ಲೂ್ಯಎಚ್​ಓ ತೈವಾನ್ ವಿರುದ್ಧವೇ ಅಪಪ್ರಚಾರ ಆರಂಭಿಸಿದವು. ಡಬ್ಲೂ್ಯಎಚ್​ಓ ನಿರ್ದೇಶಕ ಡಾ.ಟೆಡ್ರೋಸ್ ಅಂತೂ ತೈವಾನ್ ವಿರುದ್ಧ ವೈಯಕ್ತಿಕ ದಾಳಿಯನ್ನೇ ಎಸಗಿದರು. ತೈವಾನ್ ಹೇಳಿದ್ದು ಎಷ್ಟು ಸತ್ಯ ಎಂದು ಜಗತ್ತಿಗೆ ಅರಿವಾಗುವ ಹೊತ್ತಿಗೆ ಕಾಲ ಮಿಂಚಿತ್ತು, ಕರೊನಾ ಮಾರಿ ಜಗತ್ತಿಗೆ ಅಮರಿಕೊಂಡಿತ್ತು. ಅತ್ತ ತೈವಾನ್ ತನ್ನ ಪಾಡಿಗೆ ತಾನು ಅಗತ್ಯ ಸುರಕ್ಷಾ ಕ್ರಮಗಳನ್ನು ಡಿಸೆಂಬರ್ ಅಂತ್ಯದಲ್ಲೇ ಕೈಗೊಂಡ ಪರಿಣಾಮವಾಗಿ ಇಂದು ಅಲ್ಲಿ ಸೋಂಕಿತರ ಸಂಖ್ಯೆ ನಾನೂರು ದಾಟಿಲ್ಲ ಮತ್ತು ಮೃತಪಟ್ಟಿರುವವರು ಆರು ಜನ! ರೋಗದ ಮೂಲವಾದ ಚೀನಾಗೆ ಕಲ್ಲಳತೆಯ ದೂರದಲ್ಲಿದ್ದೂ ತೈವಾನ್ ಇಷ್ಟು ಸುರಕ್ಷಿತವಾಗಿ ಉಳಿದಿದೆ ಎಂದರೆ ಅದು ಅದ್ಭುತ. ತೈವಾನ್​ನ ಎಚ್ಚರಿಕೆಯ ಮಾತನ್ನು ಕೇಳಿಸಿಕೊಂಡಿದ್ದರೆ ಉಳಿದ ಜಗತ್ತೂ ಅಷ್ಟೇ ಸುರಕ್ಷಿತವಾಗಿ ಇರಬಹುದಿತ್ತೇನೋ.

    ಈಗ ಆರ್ಥಿಕ ರಂಗದತ್ತ ತಿರುಗೋಣ. ಚೀನೀ ಕಮ್ಯೂನಿಸ್ಟ್ ನಾಯಕರು ಕೊಚ್ಚಿಕೊಳ್ಳುತ್ತಿದ್ದಂತೆ ಕಮ್ಯೂನಿಸ್ಟ್ ವ್ಯವಸ್ಥೆಯೇನೂ ಚೀನೀ ಜನರ ಬದುಕನ್ನು ಸುಧಾರಿಸಲಿಲ್ಲ. ಅದರಲ್ಲೂ 1950ರ ದಶಕದ ಅಂತ್ಯದಲ್ಲಿ ತನ್ನ ಜನರ ಹೊಟ್ಟೆಗೆ ಅನ್ನ ನೀಡಲೂ ಕಮ್ಯೂನಿಸ್ಟ್ ಸರ್ಕಾರ ವಿಫಲವಾಯಿತು. ಅದೇ ಪರಿಸ್ಥಿತಿ 1970ರ ದಶಕದವರೆಗೂ ಮುಂದುವರಿಯಿತು. ಆದರೆ ಕಮ್ಯೂನಿಸ್ಟ್ ಸರ್ಕಾರ ಹೊರಜಗತ್ತಿನ ಮುಂದೆ ಬಿಡುತ್ತಿದ್ದ ಬೊಗಳೆಯ ಪ್ರಕಾರ ಚೀನಾ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತ್ತು! ಅದು ಹಾಗೆ ತನ್ನ ಸುಳ್ಳು ಅಂಕಿಅಂಶಗಳಿಂದ ಹೊರಜಗತ್ತನ್ನು ಯಾಮಾರಿಸುತ್ತಿದ್ದ ‘ಮಹಾ ಸಾಂಸ್ಕೃತಿಕ ಕ್ರಾಂತಿ’ಯ ದಿನಗಳಲ್ಲಿ ಚೀನಾದಲ್ಲಿ ಹಸಿವಿನಿಂದ ಸತ್ತವರ ಸಂಖ್ಯೆ ಹತ್ತು ಮಿಲಿಯನ್ ಅಂದರೆ ಒಂದು ಕೋಟಿಯನ್ನು ಮೀರುತ್ತದೆ ಎನ್ನುವುದು ಜಗತ್ತಿಗೆ ತಿಳಿದದ್ದು ಬಹುಕಾಲದ ನಂತರ.

    1978ರಲ್ಲಿ ಅಧಿಕಾರಕ್ಕೆ ಬಂದ ಡೆಂಗ್ ಷಿಯಾವೋಪಿಂಗ್ ಆರ್ಥಿಕ ಅಭಿವೃದ್ಧಿಯನ್ನೇ ಪ್ರಥಮ ಗುರಿಯಾಗಿಟ್ಟುಕೊಂಡು ಚೀನಿ ಅರ್ಥವ್ಯವಸ್ಥೆಯನ್ನು ಉದಾರೀಕರಣಗೊಳಿಸಿ, ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅಗತ್ಯ ಸವಲತ್ತುಗಳನ್ನು ವಿದೇಶೀ ಕಂಪನಿಗಳಿಗೆ ನೀಡುವ ಘೊಷಣೆ ಮಾಡಿದಾಗ ಚೀನಾಗೆ ಮುಗಿಬಿದ್ದದ್ದು ಅಮೆರಿಕ, ಪಶ್ಚಿಮ ಯೂರೋಪ್ ಮತ್ತು ಜಪಾನ್ ಮೂಲದ ಬಹುರಾಷ್ಟ್ರೀಯ ಕಂಪನಿಗಳು. ನಂತರ ಈ ಪಟ್ಟಿಗೆ ದಕ್ಷಿಣ ಕೊರಿಯಾ ಸಹ ಸೇರಿಕೊಂಡಿತು. 2015ರಲ್ಲಿ ಭಾರತದಿಂದ ಕೆಳಗೆ ದೂಡಿಸಿಕೊಳ್ಳುವವರೆಗೂ ನೇರ ವಿದೇಶೀ ಹೂಡಿಕೆ (ಎಫ್​ಡಿಐ) ಅನ್ನು ಆಕರ್ಷಿಸುವ ದೇಶಗಳ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿತ್ತು. ಕಡಿಮೆ ಕೂಲಿಗೆ ದುಡಿಯಲು ತಯಾರಿದ್ದ ಅಗಾಧ ಸಂಖ್ಯೆಯ ಚೀನೀ ಕೆಲಸಗಾರರನ್ನು ಉಪಯೋಗಿಸಿಕೊಂಡು, ಉತ್ಪನ್ನಗಳನ್ನು ಪ್ರಪಂಚದಾದ್ಯಂತ ಮಾರಿ ಹೇರಳ ಲಾಭ ಗಳಿಸುವ ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನ ಅಂತಿಮವಾಗಿ ವರದಾನವಾದದ್ದು ಚೀನಾಗೇ. ಹೆಚ್ಚು ಹೆಚ್ಚು ವಿದೇಶೀ ಕಂಪನಿಗಳು ಚೀನಾಗೆ ಬಂದು ಕಾರ್ಯಾರಂಭ ಮಾಡಿದಷ್ಟೂ ಚೀನಾದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಗಣನೀಯವಾಗಿ ಏರತೊಡಗಿ ಇಂದು ಚೀನಾ ಜಗತ್ತಿನ ಎರಡನೆಯ ಬೃಹತ್ ಅರ್ಥವ್ಯವಸ್ಥೆಯಾಗಿ ಬೆಳೆದು ನಿಂತಿದೆ. ಅದಕ್ಕನುಗುಣವಾಗಿ ಚೀನೀ ಸರ್ಕಾರದ ಆದಾಯವೂ ವರ್ಷೇವರ್ಷೇ ತಾರಾಮಾರು ಏರಿತು. ಈ ಆದಾಯವನ್ನು ತನ್ನದೇ ಉತ್ಪಾದನಾ ಹಾಗೂ ವ್ಯವಹಾರ ಸಂಸ್ಥೆಗಳನ್ನು ದಂಡಿಯಾಗಿ ಸ್ಥಾಪಿಸಲು ಚೀನೀ ಸರ್ಕಾರ ಬಳಸತೊಡಗಿತು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚೀನೀ ಕಮ್ಯೂನಿಸ್ಟ್ ಸರ್ಕಾರದ ಒಡೆತನದಲ್ಲಿರುವ ಉತ್ಪಾದನಾ ಸಂಸ್ಥೆಗಳು ಕಡಿಮೆ ಬೆಲೆಯ ವಸ್ತುಗಳನ್ನು ಅಧಿಕವಾಗಿ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ಚೀನೀ ವ್ಯವಹಾರ ಹಾಗೂ ಹಣಕಾಸು ಸಂಸ್ಥೆಗಳು ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಅಷ್ಟೇ ಏಕೆ ನಮ್ಮ ಭಾರತದಲ್ಲಿನ ಸಂಸ್ಥೆಗಳ ಶೇರುಗಳನ್ನು ಕೊಳ್ಳಲು ತಮ್ಮ ಹಣವನ್ನು ವ್ಯಾಪಕವಾಗಿ ಬಳಸುತ್ತಿವೆ. ಅಗ್ಗದ ಆಸೆಗೆ ಮುಗ್ಗಲು ಕೊಳ್ಳುವ ಜನ ನಮ್ಮ ಭಾರತದಲ್ಲೂ ಹೇರಳವಾಗಿದ್ದಾರೆ. ಇವರು ಖರೀದಿಸುತ್ತಿರುವ ಚೀನೀ ವಸ್ತುಗಳಿಂದಾಗಿ ಪ್ರತಿವರ್ಷವೂ ಭಾರತದಿಂದ ಚೀನಾಗೆ ಅರವತ್ತು ಬಿಲಿಯನ್ ಡಾಲರ್​ಗಳ ಪ್ರವಾಹ ಹರಿದುಹೋಗುತ್ತಿದೆ! ಹೀಗೆ ಜಗತ್ತಿನಾದ್ಯಂತ ಹರಡಿಹೋಗಿರುವ ತನ್ನ ವ್ಯಾಪಾರ ಹಾಗೂ ವ್ಯವಹಾರ ಜಾಲಗಳಿಂದ ಬರುತ್ತಿರುವ ಆದಾಯದಿಂದಾಗಿ ಚೀನಾ ಇಂದು ಮೂರು ಟ್ರಿಲಿಯನ್​ಗೂ ಅಧಿಕ ವಿದೇಶೀ ವಿನಿಮಯದ ರಾಶಿಯನ್ನು ಸಂಗ್ರಹಿಸಿಟ್ಟುಕೊಂಡಿದೆ.

    ಹೀಗೆ ಆರ್ಥಿಕವಾಗಿ ಕೊಬ್ಬಿದ ಚೀನೀ ಕಮ್ಯೂನಿಸ್ಟ್ ಸರ್ಕಾರ ತನ್ನ ವಾರ್ಷಿಕ ಆದಾಯದ ಒಂದು ದೊಡ್ಡ ಅಂಶವನ್ನು ಸೇನಾಶಕ್ತಿಯ ವೃದ್ಧಿಗೆ ಬಳಸಿಕೊಂಡು ಜಾಗತಿಕ ಶಕ್ತಿಯಾಗಿ ಬೆಳೆಯಲು ಹವಣಿಸುತ್ತಿದೆ, ತನ್ನ ಸುತ್ತಲಿನ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯೊಡ್ಡಿ ಪ್ರಾದೇಶಿಕ ಶಾಂತಿಯನ್ನು ಕದಡುತ್ತಿದೆ, ಪೂರ್ವ ಚೀನಾ ಸಮುದ್ರ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿ ನಡುಗಡ್ಡೆಗಳನ್ನು ಅತಿಕ್ರಮಿಸಿಕೊಂಡು ಇಡೀ ಸಾಗರ ಪ್ರದೇಶದ ಮೇಲೆ ತನ್ನ ಹತೋಟಿ ಸ್ಥಾಪಿಸಿಕೊಂಡಿದೆ. ಪ್ರಸಕ್ತ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅಂತೂ ‘ಬೆಲ್ಟ್ ಆಂಡ್ ರೋಡ್’ ಕಾರ್ಯಯೋಜನೆಯೆಂಬ ಕರಾಳ ಯೋಜನೆ ಮೂಲಕ ಹಲವಾರು ಬಡ ದೇಶಗಳನ್ನು ಸಾಲಸಂಕೋಲೆಯಲ್ಲಿ ಕೆಡವಿಕೊಂಡು, ಅವುಗಳ ನೆಲವನ್ನು ಕಬಳಿಸುವ ಮೂಲಕ ನವವಸಾಹತುಶಾಹಿ ಯೋಜನೆಯೊಂದನ್ನು ನಿರ್ಲಜ್ಜವಾಗಿ ಜಾರಿಗೊಳಿಸುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಚೀನಾ ಜಾಗತಿಕ ಶಾಂತಿಕಂಟಕನಾಗಿ ಬೆಳೆದುನಿಂತಿದೆ.

    ಚೀನಾ ಈ ಮಟ್ಟಕ್ಕೆ ಮನುಷ್ಯವಿರೋಧಿಯಾಗಿ ಬೆಳೆಯಲು ಕಾರಣರಾದವರು ಯಾರು ಎಂದು ಈಗ ಗೊತ್ತಾಯಿತಲ್ಲ. ತನ್ನ ಸೀಮಿತ ಸೇನಾ ಹಾಗೂ ರಾಜತಾಂತ್ರಿಕ ಕಾರಣಗಳಿಗಾಗಿ ಚೀನಾವನ್ನು ಅಂತಾರಾಷ್ಟ್ರೀಯ ರಂಗದಲ್ಲಿ ಮುನ್ನೆಲೆಗೆ ತಂದು ನಿಲ್ಲಿಸಿದ ಅಮೆರಿಕ ಮೊದಲ ತಪ್ಪಿತಸ್ಥ. ನಂತರ ಮತ್ತೂ ದೊಡ್ಡ ತಪ್ಪೆಸಗಿದ್ದು ಚೀನಾ ಒದಗಿಸಿದ ಕಡಿಮೆ ಕೂಲಿಗೆ ದುಡಿಯಬಲ್ಲ ಕೂಲಿಕಾರರು ಹಾಗೂ ಮುಷ್ಕರರಹಿತ ವಾತಾವರಣಕ್ಕೆ ಮರುಳಾಗಿ ನಾ ಮುಂದೆ ತಾ ಮುಂದೆ ಎಂದು ಅಲ್ಲಿಗೆ ಧಾವಿಸಿದ ಲಾಭಕೋರ ಬಹುರಾಷ್ಟ್ರೀಯ ಕಂಪನಿಗಳು. ಒಂದು ಮಾನವತಾವಿರೋಧಿ, ಮಾನವಹಕ್ಕುಗಳ ದಮನಕಾರಿ, ಸರ್ವಾಧಿಕಾರಿ ಸರ್ಕಾರಕ್ಕೆ ಈ ಬಗೆಯ ರಾಜತಾಂತ್ರಿಕ ಹಾಗೂ ಆರ್ಥಿಕ ಶಕ್ತಿಯನ್ನು ಒದಗಿಸುವುದರ ಪರಿಣಾಮ ಏನಾಗಬಹುದೆಂದು ಇವರಾರೂ ಕಿಂಚಿತ್ತಾದರೂ ಯೋಚಿಸಲೇ ಇಲ್ಲ. ಟಿಬೆಟ್​ನಲ್ಲಿ ಚೀನೀ ಕಮ್ಯೂನಿಸ್ಟ್ ಸೇನೆ ಎಸಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಉಯ್ಘನ್ ಷಿನ್​ಜಿಯಾಂಗ್​ನಲ್ಲಿನ ಯಾತನಾಶಿಬಿರಗಳು, ಕೊನೇಪಕ್ಷ ಜಗತ್ತನ್ನೇ ಬೆಚ್ಚಿಸಿದ ತಿಯನಾನ್​ವೆುನ್ ಹತ್ಯಾಕಾಂಡಗಳು ಈ ಸ್ವಾರ್ಥಿಗಳ ಹೃದಯಕ್ಕೆ ತಟ್ಟಲೇ ಇಲ್ಲ! ಈ ಕರ್ಮಕಾಂಡ ಇಷ್ಟಕ್ಕೇ ನಿಲ್ಲುವುದಿಲ್ಲ. ಕರೊನಾವೈರಸ್ ಹೊರಬಂದದ್ದು ವೂಹಾನ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಜಿಯಿಂದ ಎಂದು ಬಹುತೇಕ ಖಚಿತವಾಗಿದೆ. ಚೀನಾದಲ್ಲಿನ ಆ ಸಂಶೋಧನಾ ಕೇಂದ್ರಕ್ಕೆ ಅಮೆರಿಕದ ಬರಾಕ್ ಒಬಾಮ ಸರ್ಕಾರ 2015ರಲ್ಲಿ 3.7 ಮಿಲಿಯನ್ ಡಾಲರ್​ಗಳ ದೇಣಿಗೆ ನೀಡಿತ್ತು! ಒಂದುವೇಳೆ ಅಮೆರಿಕ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಚೀನಾ ಒಡ್ಡಿದ ಯಾವ ಆಮಿಷಕ್ಕೂ ಬಲಿಯಾಗದೆ ಅದನ್ನು ದೂರದಲ್ಲೇ ಇರಿಸಿದ್ದರೆ ಆ ಕಮ್ಯೂನಿಸ್ಟ್ ಸರ್ಕಾರದ ಶಕ್ತಿ ಹಾಗೂ ಸಮಯವೆಲ್ಲ ತನ್ನ ಅಗಾಧ ಜನಸಂಖ್ಯೆಗೆ ಅಗತ್ಯವಸ್ತುಗಳನ್ನು ಪೂರೈಸುವುದರಲ್ಲೇ ಕಳೆದುಹೋಗುತ್ತಿತ್ತು. ಈಗಿನಂತೆ ಜಗತ್ತಿಗೆ ಕಂಟಕವಾಗಿ ಅದು ಬೆಳೆಯುತ್ತಲೇ ಇರಲಿಲ್ಲ. ಯಾರಿಗೆ ಗೊತ್ತು, ತನ್ನ ವೈಫಲ್ಯದಿಂದಲೇ ಕಮ್ಯೂನಿಸ್ಟ್ ಪಕ್ಷ ಜನರಿಂದ ದೂರವಾಗಿ, ಚೀನಾದಲ್ಲಿ ಪ್ರಜಾಪ್ರಭುತ್ವ ಉದಯಿಸುತ್ತಿತ್ತೇನೋ. ಹಾಗೇನಾದರೂ ಆಗಿದ್ದರೆ ಇಂದು ಈ ಬಗೆಯ ಕರಾಳ ಪರಿಸ್ಥಿತಿಗೆ ಜಗತ್ತು ತಲುಪುತ್ತಿರಲಿಲ್ಲ.

    ಊರೆಲ್ಲ ಸೂರೆಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚುವಂತೆ ಅಮೆರಿಕ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ಮುಂತಾದ ದೇಶಗಳು ಇಂದು ಚೀನಾದ ಜತೆಗಿನ ತಮ್ಮ ಸಂಬಂಧಗಳನ್ನು ಪುನರ್ವಿಮಶಿಸುವ ಮಾತಾಡುತ್ತಿವೆ. ಹಲವಾರು ಬಹುರಾಷ್ಟ್ರೀಯ ಸಂಸ್ಥೆಗಳು, ಮುಖ್ಯವಾಗಿ ಜಪಾನ್ ಮೂಲದವು ತಮ್ಮ ವಹಿವಾಟನ್ನು ಚೀನಾದಿಂದ ಹೊರಗೊಯ್ಯತೊಡಗಿವೆ. ಆದರೆ ಇದರಿಂದೇನೂ ಪ್ರಯೋಜನವಿಲ್ಲ. ಚೀನಾವನ್ನು ಕಟ್ಟಿಹಾಕುವ ಪ್ರಯತ್ನಕ್ಕೆ ಸಮಯ ಮೀರಿಹೋಗಿದೆ. ಬಹುರಾಷ್ಟ್ರೀಯ ಕಂಪನಿಗಳು ಚೀನಾವನ್ನು ಜಗತ್ತಿನ ಕಾರ್ಖಾನೆಯಾಗಿ ಬೆಳೆಸಿರುವುದರಿಂದಾಗಿ ಈಗ ಚೀನಾದಲ್ಲಿ ಉತ್ಪಾದನೆ ನಿಂತುಹೋದರೆ ಅಗತ್ಯವಸ್ತುಗಳಿಗಾಗಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಹಾಹಾಕಾರವೇಳಬಹುದು. ಆದರೆ ಚೀನಾ ಒಂದುವೇಳೆ ಕರೊನಾವೈರಸ್ ಅನ್ನು ತಹಬಂದಿಗೆ ತರುವುದರಲ್ಲಿ ಯಶಸ್ವಿಯಾದರೆ ನಂತರ ತನ್ನಲ್ಲಿರುವ ಅಪರಿಮಿತ ಕಾರ್ಖಾನೆಗಳು ಮತ್ತು ಕಚ್ಚಾವಸ್ತುಗಳ ಅಗಾಧ ಭಂಡಾರ, ಜತೆಗೆ ಕೈಯಲ್ಲಿರುವ ಹಣದ ರಾಶಿಯಿಂದಾಗಿ ತನ್ನ ಪಾಡಿಗೆ ತಾನು ಹಲವು ವರ್ಷಗಳವರೆಗೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತ ಸಾಗಬಲ್ಲದು. ಅಂತಹ ಸಾಮರ್ಥ್ಯ ಇಂದು ಹೆಚ್ಚಿನ ದೇಶಗಳಿಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts