More

    ಕಾಮಗಾರಿ ವೀಕ್ಷಣೆ ಶಾಸ್ತ್ರ ಮುಕ್ತಾಯ

    ತುಮಕೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮುಂದಾಗಿದ್ದು, ಶನಿವಾರ ನಾಮ್‌ಕೇವಾಸ್ತೆಗೆ ನಗರ ಪ್ರದಕ್ಷಿಣೆ ನಡೆಸಿದರು.

    ಮತ್ತೆ ಮಳೆ ಸುರಿಯಲಾರಂಭಿಸಿದ ಕೂಡಲೇ ಜನಾಕ್ರೋಶ ವ್ಯಕ್ತವಾಗುವ ಮೊದಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರಿಂದ ಕಾಮಗಾರಿ ವೀಕ್ಷಿಸುವ ಶಾಸ್ತ್ರ ಮಾಡಿಸಿ ಕೈತೊಳೆದುಕೊಳ್ಳಲು ಮುಂದಾಯಿತು.

    ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಲೇ ಇರುವ ಸರ್ಕಾರಿ ಬಸ್ ನಿಲ್ದಾಣ, ಕೇಂದ್ರ ಗ್ರಂಥಾಲಯ, ಜೂನಿಯರ್ ಕಾಲೇಜ್ ಮೈದಾನ ಹಾಗೂ ಮಹಾತ್ಮಗಾಂಧಿ ಕ್ರೀಡಾಂಗಣದ ಕಾಮಗಾರಿಗಳನ್ನು ಅಪಾರ ಬೆಂಬಲಿಗರು, ಅಧಿಕಾರಿಗಳ ದಂಡಿನೊಂದಿಗೆ ವೀಕ್ಷಿಸಿ ಮಾಧ್ಯಮಗಳ ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

    ಆರಂಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೀಕ್ಷಿಸಿ ಮುಂದಿನ ಎರಡು, ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಸಾಧ್ಯ ಎನಿಸುವ ಟಾಸ್ಕ್ ನೀಡಿದ್ದು ಆಶ್ಚರ್ಯ ಮೂಡಿಸಿತು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪಗೆ ತಾಕೀತು ಮಾಡಿದರು.

    ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು. ರಿಜಿಸ್ಟರ್ ನೋಂದಣಿಯಲ್ಲಿ ಪುಸ್ತಕಗಳ ಬಗ್ಗೆ ಸರಿಯಾಗಿ ದಾಖಲಾತಿ ಮಾಡಿಲ್ಲವೆಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.

    ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕಗಳು ಲಭ್ಯವಿರುವ ಬಗ್ಗೆ ಎಲ್‌ಇಡಿ ಮೂಲಕ ಪುಸ್ತಕಗಳ ವಿವರ ಪ್ರದರ್ಶಿಸಬೇಕು, ಎರಡು ಲಕ್ಷ ಪುಸ್ತಕಗಳು ಕಂಪ್ಯೂಟರ್‌ನಲ್ಲಿ ಗಣಕೀರಣವಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಗ್ರಂಥಾಲಯವನ್ನು ತೆರೆದಿರಬೇಕು ಎಂದರು. ಹಲವು ಭಾರಿ ವೀಕ್ಷಿಸಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಮತ್ತೊಮ್ಮೆ ವೀಕ್ಷಿಸಿದರು. ತರಬೇತಿಯಲ್ಲಿ ತೊಡಗಿದ್ದ ಕ್ರೀಡಾಪಟುಗಳ ಜತೆಗೆ ಮಾತನಾಡಿದರು.

    ತುಮಕೂರು ಖೋಖೋ, ಕಬಡ್ಡಿ ಕ್ರೀಡೆಗೆ ಖ್ಯಾತಿಗಳಿಸಿದೆ, ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಕ್ರೀಡಾಂಗಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೂನಿಯರ್ ಕಾಲೇಜ್ ಮೈದಾನ ಕ್ರೀಡೆಗೆ ತನ್ನದೇ ಆದ ಇತಿಹಾಸ ಹೊಂದಿದೆ ಎಂದು ಸ್ಮರಿಸಿದರು. 1927ರಲ್ಲಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು, ನೆಹರು ಅವರು ಕೂಡ ಈ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
    ಈ ಬಜೆಟ್‌ನಲ್ಲಿ ಹೊಸ ಕಾಮಗಾರಿಗಳಿಗೆ ಹಣ ನೀಡಲು ಸಾಧ್ಯವಾಗಿಲ್ಲ. ಹಳೆಯ ಕಾಮಗಾರಿಗಳಿಗೆ ಹಣವನ್ನು ಅಧಿವೇಶನ ಮುಗಿದ ನಂತರ ಬಿಡುಗಡೆ ಮಾಡಲಾಗುವುದು ಎಂದರು.

    ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆ ಅಡಿ 5.91 ಲಕ್ಷ ಪಡಿತರ ಚೀಟಿ ಕುಟುಂಬದ 22,74,000 ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ಸಮನಾದ ಹಣವನ್ನು ಕುಟುಂಬದ ಯಜಮಾನಿಯ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

    ಅಮಾನಿಕೆರೆ ನೀರು ಸಂಸ್ಕರಿಸಿ ಬುಗುಡನಹಳ್ಳಿ ನೀರಿನ ಜತೆಗೆ ನಗರದ ಕುಡಿಯುವ ನೀರಿಗೆ ಶೇಖರಣೆ ಮಾಡಲು ಬಳಸಿಕೊಳ್ಳಲಾಗುತ್ತದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರ ನಡೆದಿದೆ ಎಂದು ದೂರುಗಳಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು. | ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts