More

    ಕಬ್ಬೂರ ಆಸ್ಪತ್ರೆಯಲ್ಲಿ ಅವ್ಯವಸ್ಥೆ

    ಚಿಕ್ಕೋಡಿ: ತಾಲೂಕಿನ ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಚಿಕಿತ್ಸೆಗೆ ಹೋದರೆ, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರಿಂದ ಶಿಫಾರಸು ಮಾಡಿಕೊಂಡು ಬಂದರೆ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಿರುವ ವೈದ್ಯರು ಉದ್ಧಟತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

    ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲ ದಿನಗಳ ಹಿಂದೆ ಕೋವಿಡ್ ಕೇರ್ ಕೇಂದ್ರ ತೆರೆಯಲಾಗಿದೆ. ಆದರೆ, ಇಲ್ಲಿ ದಾಖಲಾಗಿರುವ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಆಕ್ಸಿಜನ್ ಕೊರತೆಯೂ ಕಾಡುತ್ತಿದೆ. ಕೇಂದ್ರ ಆರಂಭಿಸಿದಾಗಿನಿಂದಲೂ ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ಇತರ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರಿಂದ ಕಬ್ಬೂರ ಆಸ್ಪತ್ರೆಗೆ ದಾಖಲಾಗುವಂತೆ ಬರೆಯಿಸಿಕೊಂಡು ಬರಬೇಕು ಎಂದು ಹೇಳಿ ಕಳುಹಿಸುತ್ತಿದ್ದಾರೆ.

    ಉಸಿರಾಟ ತೊಂದರೆಯಿಂದ ನರಳುತ್ತಿರುವ ರೋಗಿ ಆಸ್ಪತ್ರೆ ಬಾಗಿಲಿಗೆ ಹೋಗಿ ನಿಂತರೆ ಯಾರೊಬ್ಬರೂ ನೋಡಲೇ ಇಲ್ಲ. ಚಿಕ್ಕೋಡಿಗೆ ಹೋಗಿ ಬರೆಯಿಸಿಕೊಂಡು ಬನ್ನಿ ಎಂದು ಹೇಳುತ್ತಲೇ ಸುಮಾರು ಅರ್ಧ ಗಂಟೆ ಕಾಲಹರಣ ಮಾಡಿದರು. ಅಷ್ಟರಲ್ಲೇ ಆ ರೋಗಿ ಮೃತಪಟ್ಟಿದ್ದ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಸಲಾಯನ್‌ಗೆ, ಇಂಜೆಕ್ಷನ್‌ಗೆ ಇಂತಿಷ್ಟು ದರ ಫಿಕ್ಸ್ ಮಾಡಲಾಗಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ದೊರೆಯುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಹಣ ಕೊಟ್ಟರೆ ಮಾತ್ರ ಉತ್ತಮ ವೈದ್ಯಕೀಯ ಸೇವೆ ಲಭ್ಯ. ಇಲ್ಲವಾದರೇ ಕಾಟಾಚಾರ ಎನ್ನುವಂತೆ ದೂರದಿಂದಲೇ ರೋಗಿಯನ್ನು ನೋಡಿ ಒಂದಿಷ್ಟು ಮಾತ್ರೆ ಕೊಟ್ಟು ಕಳುಹಿಸುವಂತೆ ವೈದ್ಯರು ಅಲ್ಲಿರುವ ಸಿಬ್ಬಂದಿಗೆ ಸೂಚನೆ ನೀಡುವ ಕಾರ್ಯ ನಡೆದಿದೆ.

    ಈ ಆಸ್ಪತ್ರೆಯತ್ತ ತಾಲೂಕು ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ, ತಾಲೂಕು ಆರೋಗ್ಯಾಧಿಕಾರಿಯಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಆಸ್ಪತ್ರೆಯತ್ತ ಗಮನ ಹರಿಸಬೇಕು. ಇಲ್ಲಿ ನಡೆದಿರುವ ಅವ್ಯವಸ್ಥೆ ಸರಿಪಡಿಸುವ ಮುಖಾಂತರ ಬಡ ಜನರಿಗೆ ಸೂಕ್ತ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಆಸ್ಪತ್ರೆಗೆ ಬಂದ ರೋಗಿಗೆ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಇದು ಎಲ್ಲ ಕಡೆಗೂ ನಡೆಯುತ್ತಿದೆ. ಆದರೆ, ಈ ಪ್ರಕ್ರಿಯೆ ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಶೀಘ್ರ ವೈದ್ಯರ ಸಭೆ ಕರೆಯಲಾಗುವುದು. ಆಸ್ಪತ್ರೆಗೆ ಬಂದ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಬೇಕು. ನಂತರ ಆ ರೋಗಿಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಬೇರೆಡೆ ಕಳುಹಿಸುವ ವ್ಯವಸ್ಥೆ ಮಾಡಬೇಕು.
    | ಡಾ. ಎಸ್.ಎಸ್.ಗಡೇದ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts