More

    ಕಬ್ಬು ಸಾಗಣೆ, ಕಟಾವಿಗೆ ಅವಕಾಶ ನೀಡಿ

    ಹಳಿಯಾಳ: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಸಕ್ಕರೆ ಕಾರ್ಖಾನೆಯವರ ಮೇಲೆ ರಾಜಕೀಯ ಒತ್ತಡ ಹೇರಿ ಕಬ್ಬು ಕಟಾವು, ಸಾಗಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಹಳಿಯಾಳ ಘಟಕದವರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಮಾಡರ್ನ್ ಪೊವಾ ಮಿಲ್ ಸಮೀಪದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ರ‍್ಯಾಲಿ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಎರಡೆರಡು ಬಾರಿ ಅಡಿಗಲ್ಲು ಸಮಾರಂಭ ನಡೆಸಿ ರೈತರ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದವರು ಈಗಲೂ ಅದೇ ರಾಜಕಾರಣ ಮುಂದುವರಿಸಿದ್ದಾರೆ. ಬಿಜೆಪಿ ರೈತರ ಪರವಾಗಿದ್ದು, ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಸಭೆ ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.

    ಮನವಿಯಲ್ಲಿ ಏನಿದೆ?: ಪ್ರಸಕ್ತ ಹಂಗಾಮಿನಲ್ಲಿ ತಾಲೂಕಿನಲ್ಲಿ 8.10 ಲಕ್ಷ ಟನ್ ಕಬ್ಬು ಇಳುವರಿ ಬಂದಿದೆ. ನಿತ್ಯ ಕಾರ್ಖಾನೆಯಲ್ಲಿ 6 ಸಾವಿರ ಟನ್ ಕಬ್ಬು ನುರಿಯುವ ಕಾರ್ಯ ನಡೆದಿದೆ. ಹೀಗಿರುವಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗ್ರಾಪಂ ಚುನಾವಣೆ ಮುಂದಿಟ್ಟುಕೊಂಡು ಇ.ಐ.ಡಿ. ಪ್ಯಾರಿ ಸಕ್ಕರೆ ಕಾರ್ಖಾನೆಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕಬ್ಬು ಸಾಗಿಸುವ ವಾಹನ ತಡೆದು ರಸ್ತೆ ಸಂಚಾರಕ್ಕೆ ತಡೆ ಮಾಡಿದ್ದಲ್ಲದೆ, ಕಾರ್ಖಾನೆ ಪ್ರವೇಶಿಸಿ ಕಬ್ಬು ತೂಕ ಮಾಡುವ ಯಂತ್ರ ಬಂದ್ ಮಾಡಿ ಕಾರ್ಖಾನೆಗೆ ತೊಂದರೆ ಮಾಡಿದ್ದಾರೆ. ಅನವಶ್ಯಕ ತೊಂದರೆ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಬಿಜೆಪಿ ಹಳಿಯಾಳ ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಅನಿಲ ಮುತ್ನಾಳೆ, ಶಿವಾಜಿ ನರಸಾನಿ, ವಿ.ಎಂ. ಪಾಟೀಲ, ವಾಸುದೇವ ಪೂಜಾರಿ, ವಿಲಾಸ ಯಡವಿ, ಯಲ್ಲಪ್ಪ ಹೊನ್ನೋಜಿ, ಪುರಸಭೆ ಸದಸ್ಯ ಉದಯ ಹೂಲಿ, ಸಂತೋಷ ಘಟಕಾಂಬ್ಳೆ, ಚಂದ್ರು ಕಮ್ಮಾರ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರೂಪಾ ಗಿರಿ, ಜಯಲಕ್ಷ್ಮೀ ಚವ್ಹಾಣ, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts