More

    ಕಬ್ಬು ಬೆಳೆಗಾರರಿಂದ ಬಾರುಕೋಲು ಚಳವಳಿ

    ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು ಸೋಮವಾರ ಬಾರುಕೋಲು ಚಳವಳಿ ನಡೆಸಿದರು.


    ಕಬ್ಬಿನ ಎ್ಆರ್‌ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಕೈಗೊಂಡಿರುವ ಅಹೋರಾತ್ರಿ ಧರಣಿ ಸೋಮವಾರ 8ನೇ ದಿನ ಪೂರೈಸಿದ್ದು, ಬಾರುಕೋಲು ಚಳವಳಿ ನಡೆಸುವ ಮೂಲಕ ಶಾಸಕರು ಹಾಗು ಸಂಸದರಿಗೆ ಚಡಿಯೇಟು ಕೊಡುವ ಕಲ್ಪಿತ ಪ್ರದರ್ಶನ ನೀಡಿ ಗಮನ ಸೆಳೆದರು.


    ‘ಜನಪ್ರತಿನಿಧಿಗಳು ರೈತರ ಪರ ಇಲ್ಲ, ಬಂಡವಾಳಶಾಹಿಗಳ ಪರವಿದ್ದಾರೆ. ಇವರೆಲ್ಲ ಎಮ್ಮೆ ಕಾಯುವುದಕ್ಕೆ ಲಾಯಕ್ಕು’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರ ಬಂಡವಾಳಶಾಹಿಗಳ ರಿಮೋಟ್ ಕಂಟ್ರೋಲ್ ರೀತಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ.

    ಟನ್ ಕಬ್ಬಿಗೆ 7500 ರೂ.ಗೂ ಹೆಚ್ಚು ಆದಾಯ ಇದೆ. ಒಂದು ಟನ್ ಕಬ್ಬಿನಿಂದ ನೂರು ಲೀಟರ್ ಎಥೆನಾಲ್ ದೊರೆಯಲಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಇದರ ದರ ಲೀಟರಿಗೆ 65 ರೂ., ಕಬ್ಬಿನ ಸಿಪ್ಪೆಯಿಂದ 144 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ನಂತರ ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ. ಎಲ್ಲ ಸೇರಿ 7500 ರೂ. ಆದಾಯ ಬರುತ್ತದೆ. ಇಡೀ ವರ್ಷ ಕಷ್ಟಪಟ್ಟು ಬೆಳೆದ ರೈತನಿಗೆ 3000 ರೂ. ದೊರೆಯುತ್ತಿದೆ. ಈ ರೀತಿ ಅನ್ಯಾಯ ಏಕೆ ಎಂದು ಪ್ರಶ್ನಿಸಿದರು.


    60-70 ವರ್ಷಗಳಿಂದ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಲಕ್ಷಾಂತರ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತದೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟಿಸಲಾಗುತ್ತಿದೆ. ಆದರೆ, ಶಾಸಕರು, ಸಚಿವರು ಜನರನ್ನು ಮರೆತ್ತಿದ್ದಾರೆ. ಅದಕ್ಕಾಗಿ ಎಚ್ಚರಿಸಲು ಬಾರುಕೋಲು ಚಳವಳಿ ನಡೆಸಲಾಗಿದೆ. ಮುಂದೆಯೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಳ್ಳಿಗಳಿಗೆ ಬಂದಾಗ ರೈತರು ಬಾರುಕೋಲು ಮೂಲಕವೇ ಉತ್ತರಿಸಲಿದ್ದಾರೆ ಎಂದು ಎಚ್ಚರಿಸಿದರು.


    ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್, ಲಕ್ಷ್ಮೀಪುರ ವೆಂಕಟೇಶ್, ವರಕೂಡು ಜಯರಾಮು, ಟಿ.ರಾಮೇಗೌಡ, ಸೋನಹಳ್ಳಿ ದೊರೆಸ್ವಾಮಿ, ಬಸವಣ್ಣ, ಮಂಜುನಾಥ್, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮ್ಮಯಪ್ಪ, ಮಲ್ಲಪ್ಪ, ಮಾದೇವಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್ ಮುಂತಾದವರು ಇದ್ದರು.

    ಬೇಡಿಕೆ ಏನು?
    ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಬೇಕು. ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯಿಂದ ಆಗುತ್ತಿರುವ ಸುಲಿಗೆ ತಪ್ಪಿಸಬೇಕು. ಕಬ್ಬಿನ ಕಟಾವು ವಿಳಂಬದ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು. ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts