More

    ಕನ್ನಮಂಗಲ ಕಡತಗಳಿಗೆ ಕನ್ನ, ಪೊಲೀಸರಿಂದ ಆರೋಪಿಗಳಿಗೆ ಡ್ರಿಲ್, ಹಗರಣಗಳ ಸರಮಾಲೆಯಲ್ಲಿ ಪಂಚಾಯಿತಿ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ದೇವನಹಳ್ಳಿ ತಾಲೂಕು ಕನ್ನಮಂಗಲ ಪಂಚಾಯಿತಿ ಕಟ್ಟಡಕ್ಕೆ ಬೆಂಕಿ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಅನುಮಾನದ ಮೇಲೆ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಖಾತೆ ಬದಲಾವಣೆ, ನಕಲಿ ಬಿಲ್ ಸೇರಿ ವಿವಿಧ ಹಗರಣಗಳಿಗೆ ಸಂಬಂಧಪಟ್ಟಂತೆ ತನಿಖಾ ಹಂತದಲ್ಲಿರುವಾಗಲೇ ಪಂಚಾಯಿತಿ ಕಟ್ಟಡಕ್ಕೆ ಬೆಂಕಿ ಪ್ರಹಸನ ನಡೆದಿದ್ದು ಪಂಚಾಯಿತಿ ಹಗರಣ ಮುಚ್ಚಿಹಾಕುವ ಪೂರ್ವನಿಯೋಜಿತ ಕೃತ್ಯ ಎಂಬ ಶಂಕೆ ದಟ್ಟವಾಗಿದೆ.

    ಕಡತ ಕದಿಯಲು ಕನ್ನ: ಮೇಲ್ನೊಟಕ್ಕೆ ಅಗ್ನಿ ಅವಘಡ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ವಾಸ್ತವವಾಗಿ ಪ್ರಮುಖ ದಾಖಲೆಗಳನ್ನು ಕದಿಯಲು ಕೃತ್ಯ ರೂಪಿಸಲಾಗಿದೆ, ಇದಕ್ಕೆ ಸಾಕ್ಷಿ ಎಂಬಂತೆ ಪಂಚಾಯಿತಿ ಕಟ್ಟಡದ ಹಲವು ಕಿಟಕಿ ಗಾಜುಗಳನ್ನು ಪುಡಿ ಮಾಡಿ ದರೋಡೆ ನಾಟಕ ಸೃಷ್ಟಿಸಲಾಗಿದೆ ಎಂಬುದು ಮೇಲ್ನೊಟಕ್ಕೆ ಕಂಡುಬಂದಿದೆ. ಸದ್ಯ ಪಂಚಾಯಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

    ಬೀಗ ತೆಗೆದಿರುವ ದುಷ್ಕರ್ಮಿಗಳು: ಪಂಚಾಯಿತಿ ಮುಖ್ಯದ್ವಾರದ ಬೀಗ ತೆಗೆದು ಒಳನುಗ್ಗಿರುವ ದುಷ್ಕರ್ಮಿಗಳು, ಸೀಲ್ ಮಾಡಿದ್ದ ಕಡತಗಳಿದ್ದ ಕೊಠಡಿಯ ಬೀಗ ಮುರಿದು ಕೆಲವು ಕಡತಗಳನ್ನು ಎಗರಿಸಿದ್ದಾರೆ ಎನ್ನಲಾಗಿದ್ದು, ಪಂಚಾಯಿತಿಗೆ ಸಂಬಂಧಪಟ್ಟವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ದುಷ್ಕರ್ಮಿಗಳು ಬೇಕಾದ ದಾಖಲೆಗಳನ್ನು ತೆಗೆದುಕೊಂಡು ಇನ್ನಿತರ ಕಡತಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಕೆಲವೊಂದು ಕಡತಗಳು ಅರೆಬರೆ ಸುಟ್ಟಿವೆ. ಕಂಪ್ಯೂಟರ್ ಮಾನಿಟರ್, ಸಿಪಿಯೂಗಳಿಗೂ ಬೆಂಕಿ ಹಚ್ಚಲಾಗಿದೆ.

    ವಿವಿಧ ಇಲಾಖೆಗಳಿಂದ ತನಿಖೆ: ಕನ್ನಮಂಗಲ ಪಂಚಾಯಿತಿ ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಯಾವುದೇ ಅಗ್ನಿ ಆಕಸ್ಮಿಕ ಅಲ್ಲ ಎಂಬುದು ದೃಢಪಟ್ಟಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

    ಬಹಳಷ್ಟು ಮಂದಿ ಭೂಗತ: ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯ ಡೆಟಾ ಆಪರೇಟರ್ ಹೆಸರು ಮುಂಚೂಣಿಗೆ ಬಂದಿದ್ದು, ಇದರ ಹಿಂದೆ ಸಾಕಷ್ಟು ಮಂದಿ ಪಂಚಾಯಿತಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳಿಂದ ಕೆಲವರು ಭೂಗತರಾಗಿದ್ದಾರೆ. ಮೊಬೈಲ್ ಲೊಕೇಷನ್ ಜಾಡು ಹಿಡಿದು ಪೊಲೀಸರು ಶಂಕಾಸ್ಪದ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

    ಪಂಚಾಯಿತಿಯಲ್ಲಿ ಇಂಥ ಪ್ರಕರಣ ನಡೆದಿರುವುದು ದೊಡ್ಡ ದುರಂತ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕುಗೊಂಡಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇನ್ಯಾವುದೇ ಪಂಚಾಯಿತಿಯಲ್ಲಿ ಇಂಥ ಪ್ರಕರಣ ಮರುಕಳಿಸಬಾರದು.
    ನಿಸರ್ಗ ನಾರಾಯಣ ಸ್ವಾಮಿ, ಶಾಸಕ

    ಪಂಚಾಯಿತಿಯಲ್ಲಿ ನಕಲಿ ಬಿಲ್ ಹಾಗೂ ಲಂಚ ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದ್ದು ತನಿಖಾ ಹಂತದಲ್ಲೇ ಬೆಂಕಿ ಪ್ರಹಸನ ನಡೆದಿದೆ. ಬೆಸ್ಕಾಂ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳ ಮಹಜರು ಮಾಡಿದ್ದು, ಯಾವುದೇ ಅಗ್ನಿ ಆಕಸ್ಮಿಕ ನಡೆದಿಲ್ಲ ಎಂದು ವರದಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ.
    ವಸಂತ್‌ಕುಮಾರ್, ಇಒ ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts