More

    ಕನ್ನಡಿಗರಿಂದ ಮಾನವ ತತ್ವ ಬೋಧನೆ

    ಬೋರಗಾಂವ: ಕನ್ನಡ ಮನಸ್ಸುಗಳು ಕೀಳರಿಮೆ ತೊರೆದು ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದರು. ಕನ್ನಡ ಭಾಷೆಯ ಸಾಹಿತ್ಯ ಪರಂಪರೆಯನ್ನು ನೆನೆಯಬೇಕಿದೆ ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

    ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನಿಪ್ಪಾಣಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಭಾಷೆೆಗೆ ವಿರೋಧ ಮಾಡದೆ ಹೊಂದಾಣಿಕೆ ಮಾಡಿಕೊಂಡು ಬಂದರೂ, ಸಹ ಕನ್ನಡಿಗರನ್ನು ಕೆಣಕುವುದನ್ನು ಬಿಡುತ್ತಿಲ್ಲ. 9ನೇ ಶತಮಾನದಲ್ಲಿ ಮಹಾರಾಷ್ಟ್ರ ಎನ್ನುವ ಕಲ್ಪನೆಯು ಸಹ ಇರಲಿಲ್ಲ. ಅದೊಂದು ರಾಷ್ಟ್ರಕೂಟರ ನಾಡಾಗಿತ್ತು ಎಂದು ಚಾಟಿ ಬೀಸಿದರು. ವಿಶ್ವ ಮಾನವ ತತ್ವ ಬೋಧಿಸದ ಕನ್ನಡಿಗರು. ಭಾಷಾವಾರು ರಚನೆ ಆದ ಮೇಲೆ ಕೀಳರಿಮೆ ಉಂಟಾಗಿದೆ. ಸಂವಿಧಾನದಲ್ಲಿ ಭಾಷಾವಾರು ತಿದ್ದುಪಡಿಯಾಗಿಲ್ಲ. ಈವರೆಗೆ ಕೇವಲ 2 ತಿದ್ದುಪಡೆಯಾಗಿವೆ. ಕನ್ನಡ ಉದ್ಯೋಗ ಭಾಷೆ, ಅನ್ನದ ಭಾಷೆ ಆಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿ ಮತಕ್ಷೇತ್ರದಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಣೆಗೆ ವಿಶೇಷ ಆದ್ಯತೆ ನೀಡಿದ್ದು, 229 ಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಶ್ರಮಿಸಲಾಗುತ್ತಿದೆ ಎಂದರು. ತಮ್ಮ ಭಾಷಣದಲ್ಲಿ ಹಚ್ಚೇವು ಕನ್ನಡದ ದೀಪ ಸೇರಿ ಕನ್ನಡದ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು.

    ಏಕೀಕರಣದಲ್ಲಿ ಉತ್ತರ ಕರ್ನಾಟಕ ಜನರ ಪಾತ್ರ ಪ್ರಮುಖ: ಯುವ ಸಾಹಿತಿ ಮಿಥುನ ಅಂಕಲಿ ವಿರಚಿತ ‘ನಿಪ್ಪಾಣಿ ಪರಿಸರದಲ್ಲಿ ಕನ್ನಡ ಕಟ್ಟಿದವರು’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಜೈನ ಸಮುದಾಯದ ಮಹಿಳೆಯರ ಪಾತ್ರ ಅನನ್ಯವಾಗಿದೆ. ಕನ್ನಡ ಭಾಷೆ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಆದರೂ ಕನ್ನಡದ ಕಿಚ್ಚು ಹೆಚ್ಚುತ್ತಲೇ ಬಂದ ಪರಿಣಾಮ ಅಖಂಡ ಕರ್ನಾಟಕ ನಿರ್ಮಾಣ ಸಾಧ್ಯವಾಗಿದೆ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದರು.

    ನಿಪ್ಪಾಣಿ ಕನ್ನಡದ ಭದ್ರಕೋಟೆ: ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಭೋಜ ಗ್ರಾಮದ ಸಾಹಿತಿ ಅದ್ವಯಾನಂದ ಗಳತಗೆ ಮಾತನಾಡಿ, ನಿಪ್ಪಾಣಿ ತಾಲೂಕು ಇಂದು ಎಲ್ಲ ರಂಗಳಲ್ಲಿ ಅಭಿವೃದ್ಧಿ ಸಾಧಿಸುತ್ತ ತನ್ನದೇ ಆದ ಸ್ಥಾನಮಾನ ಹೊಂದಿದೆ. ಕೃಷಿ, ತಂಬಾಕು, ಸಹಕಾರ, ಸಕ್ಕರೆ ಉದ್ದಿಮೆಗಳಲ್ಲಿ ಪ್ರಗತಿ ಸಾಧಿಸಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ.

    ಗಡಿಯಲ್ಲಿ ಎಲ್ಲ ಜಾತಿ ಮತ ಪಂಥ, ಭಾಷೆಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದೆ. ನಿಪ್ಪಾಣಿ ಪರಿಸರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕನ್ನಡದ ಭದ್ರಕೋಟೆಯಾಗಿ ನಿಪ್ಪಾಣಿ ಎಲ್ಲರಿಗೂ ಮಾದರಿಯಾಗಿದೆ ಎಂದರು. ಇಲ್ಲಿಯ ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು, ಕನ್ನಡಪರ ಚಿಂತಕರು, ಹೋರಾಟಗಾರರು ಗಡಿಯಲ್ಲಿ ಕನ್ನಡ ನುಡಿ ರಕ್ಷಿಸಿ ಬೆಳೆಸುವ ಕಾರ್ಯ ಅಭಿನಂದನೀಯ.
    ಇಲ್ಲಿ ನಡೆದ ಎಲ್ಲ ಕನ್ನಡಪರ ಕಾರ್ಯಕ್ರಮಗಳು, ಚಟುವಟಿಕೆಗಳು, ಕನ್ನಡ ಕಲರವ ಹೆಚ್ಚಿಸಿವೆ ಎಂದರು.

    ನಿಪ್ಪಾಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಿಟ್ಟ ಹೆಜ್ಜೆಯನಿಟ್ಟು ಕನ್ನಡ ಪರಿಸರ ಬೆಳೆಸಲು ಮುಂದಾಗಿದೆ. ಈಗ ಭೋಜ ಗ್ರಾಮದಲ್ಲಿ ಹಮ್ಮಿಗೊಂಡಿರುವ 3ನೇ ಕನ್ನಡ ಸಾಹಿತ್ಯ ಸಮ್ಮೇಳನವೇ ಸಾಕ್ಷಿಯಾಗಿದೆ ಎಂದರು. ನಿಪ್ಪಾಣಿಯಲ್ಲಿ ಕನ್ನಡ ಬೆಳೆಸಲು ಸರ್ಕಾರ, ಜನಪ್ರತಿನಿಧಿಗಳು ಗಮನಹರಿಸಿ ಅಗತ್ಯ ಮೂಲಸೌಕರ್ಯ ಪೂರೈಸಬೇಕು. ಗಡಿಭಾಗಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಗಡಿಭಾಗದ ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲಿ ಕನ್ನಡ ಭವನ ನಿರ್ಮಿಸಿ ಕನ್ನಡ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಮಾಧ್ಯಮಗಳು ಪ್ರಬಲವಾಗಿ ಕನ್ನಡ ಕಂಪು ಹೆಚ್ಚಿಸಲು ಸಹಕಾರಿಯಾಗಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಗಡಿಯಲ್ಲಿ ಕನ್ನಡ ಗಟ್ಟಿಯಾಗಿ ಉಳಿಯಬೇಕಾದರೆ ಸರ್ಕಾರ ಗುಣಮಟ್ಟದ ಶಿಕ್ಷಣದ ಜತೆಗೆ ಪ್ರತಿಯೊಂದು ರಂಗದಲ್ಲಿ ಅಭಿವೃದ್ಧಿ ಮಾಡಿ ಜನತೆಗೆ ಮೂಲ-ಸೌಲಭ್ಯ ಒದಗಿಸಿಕೊಡಬೇಕು ಎಂದರು. ಖಡಕಲಾಟ ಶಿವಬಸವ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಸ್.ಟಿ. ಲಗಾರೆ, ತಹಸೀಲ್ದಾರ್ ಪ್ರವೀಣ ಕಾರಂಡೆ, ಸುರೇಶ ಉಕ್ಕಲಿ, ಶ್ರೀಪಾದ ಕುಂಬಾರ, ಪಿ.ಜಿ. ಕೆಂಪಣ್ಣವರ ಇತರರಿದ್ದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶೆಯ ನುಡಿ ಹೇಳಿದರು. ತಾಲೂಕು ಅಧ್ಯಕ್ಷ ಈರಣ್ಣ ಶಿರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಗೌರವ ಕಾರ್ಯದರ್ಶಿ ಮಿಥುನ ಅಂಕಲಿ ಸ್ವಾಗತಿಸಿದರು. ಸರೋಜನಿ ಸಮಾಜೆ ನಿರೂಪಿಸಿದರು. ಶಕುಂತಲಾ ಕಮತೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts